
ನವದೆಹಲಿ: ದೆಹಲಿ ಅಬಕಾರಿ ನೀತಿ ಹಗರಣಕ್ಕೆ ಸಂಬಂದಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಆಮ್ ಆದ್ಮಿ ಪಕ್ಷವನ್ನೇ(ಎಎಪಿ) ಆರೋಪಿಯನ್ನಾಗಿ ಮಾಡುವುದಾಗಿ ಜಾರಿ ನಿರ್ದೇಶನಾಲಯ(ಇಡಿ) ಮಂಗಳವಾರ ದೆಹಲಿ ಹೈಕೋರ್ಟ್‌ಗೆ ತಿಳಿಸಿದ್ದು, ರಾಜಕೀಯ ಪಕ್ಷವೊಂದು ಪ್ರಕರಣದಲ್ಲಿ ಆರೋಪಿಯಾಗುತ್ತಿರುವುದು ಇದೇ ಮೊದಲು.
ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ದೆಹಲಿ ಮಾಜಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರ ಜಾಮೀನು ಅರ್ಜಿಗೆ ಇಡಿ ಇಂದು ವಿರೋಧ ವ್ಯಕ್ತಪಡಿಸಿದೆ.
"ಪ್ರಕರಣ ಸಂಬಂಧ ಸಲ್ಲಿಸಲಿರುವ ಮುಂದಿನ ಚಾರ್ಜ್ ಶೀಟ್ ನಲ್ಲಿ ಎಎಪಿಯನ್ನು ಸಹ-ಆರೋಪಿಯನ್ನಾಗಿ ಮಾಡಲಾಗುವುದು" ಎಂದು ಸಿಸೋಡಿಯಾ ಅವರ ಜಾಮೀನು ಅರ್ಜಿಯ ಕುರಿತು ವಾದ ಆಲಿಸುತ್ತಿರುವ ನ್ಯಾಯಮೂರ್ತಿ ಸ್ವರಣಾ ಕಾಂತ ಶರ್ಮಾ ಅವರಿಗೆ ಇಡಿ ವಕೀಲರು ತಿಳಿಸಿದರು.
ಪ್ರಕರಣದಲ್ಲಿ ಚಾರ್ಜ್ ಶೀಟ್ ದಾಖಲಿಸುವ ಪ್ರಕ್ರಿಯೆಯನ್ನು ವಿಳಂಬಗೊಳಿಸಲು ಆರೋಪಿಗಳು ಸಂಘಟಿತ ಪ್ರಯತ್ನಗಳನ್ನು ಮಾಡುತ್ತಿದ್ದಾರೆ ಎಂದು ತನಿಖಾ ಸಂಸ್ಥೆಯ ವಕೀಲರು ವಾದಿಸಿದರು.
ಅವರಿಗೆ ಜಾಮೀನು ಕೋರಿ ಅರ್ಜಿ ಸಲ್ಲಿಸಿರುವ ಸಿಸೋಡಿಯಾ ಪರ ವಕೀಲರು, ಅಕ್ರಮ ಹಣ ವರ್ಗಾವಣೆ ಮತ್ತು ಭ್ರಷ್ಟಾಚಾರ ಪ್ರಕರಣದಲ್ಲಿ ಇಡಿ ಮತ್ತು ಸಿಬಿಐ ಇನ್ನೂ ಹಲವು ಜನರನ್ನು ಬಂಧಿಸುತ್ತಿವೆ ಮತ್ತು ವಿಚಾರಣೆ ಶೀಘ್ರವಾಗಿ ಮುಗಿಸುವ ಪ್ರಶ್ನೆಯೇ ಇಲ್ಲ ಎಂದು ಹೇಳಿದರು.
Advertisement