
ನವದೆಹಲಿ: ನಿರ್ಭಯಾ ಪ್ರಕರಣದಲ್ಲಿ ನ್ಯಾಯ ಕೇಳಿದ್ದ ತಮ್ಮ ಪಕ್ಷದ ಸಹೋದ್ಯೋಗಿಗಳು ಇದೀಗ ತಮ್ಮ ಮೇಲೆ ಹಲ್ಲೆ ನಡೆಸಿದ ಆರೋಪಿಯನ್ನು ಬೆಂಬಲಿಸುತ್ತಿದ್ದಾರೆ ಎಂದು ಎಎಪಿ ರಾಜ್ಯಸಭಾ ಸಂಸದೆ ಸ್ವಾತಿ ಮಲಿವಾಲ್ ಭಾನುವಾರ ಹೇಳಿದ್ದಾರೆ.
ದೆಹಲಿ ಅಬಕಾರಿ ನೀತಿ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಸದ್ಯ ಜೈಲಿನಲ್ಲಿರುವ ಎಎಪಿ ನಾಯಕ ಮತ್ತು ಮಾಜಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರು ಇದ್ದಿದ್ದರೆ ಬಹುಶಃ ನನಗೆ ಇಷ್ಟು ಕೆಟ್ಟ ಪರಿಸ್ಥಿತಿ ಎದುರಾಗುತ್ತಿರಲಿಲ್ಲ! ಎಂದಿದ್ದಾರೆ.
ಮೇ 13 ರಂದು ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರನ್ನು ಭೇಟಿಯಾಗಲು ಸಿಎಂ ನಿವಾಸಕ್ಕೆ ತೆರಳಿದ್ದ ವೇಳೆ ಅವರ ಆಪ್ತ ಬಿಭವ್ ಕುಮಾರ್ ತಮ್ಮ ಮೇಲೆ ಹಲ್ಲೆ ನಡೆಸಿದ್ದರು ಎಂದು ಮಲಿವಾಲ್ ಆರೋಪಿಸಿದ್ದಾರೆ.
ಸ್ವಾತಿ ಮಲಿವಾಲ್ ಮಾಡಿರುವ ಆರೋಪಗಳನ್ನು ಅಲ್ಲಗಳೆದಿರುವ ಆಮ್ ಆದ್ಮಿ ಪಕ್ಷವು, ಅರವಿಂದ ಕೇಜ್ರಿವಾಲ್ ಅವರನ್ನು ಸುಳ್ಳು ಪ್ರಕರಣದಲ್ಲಿ ಸಿಲುಕಿಸಲು ಬಿಜೆಪಿಯ ಆಜ್ಞೆಯ ಮೇರೆಗೆ ಮಲಿವಾಲ್ ಈ ರೀತಿಯಲ್ಲಿ ವರ್ತಿಸುತ್ತಿದ್ದಾರೆ ಎಂದು ಹೇಳಿದ್ದಾರೆ.
10 ವರ್ಷಗಳ ಹಿಂದೆ ಎಎಪಿ ಪ್ರಾರಂಭವಾದಾಗಿನಿಂದಲೂ ಪಕ್ಷದೊಂದಿಗೆ ಇರುವ ಮಲಿವಾಲ್, ನಿರ್ಭಯಾಗೆ ನ್ಯಾಯಕ್ಕಾಗಿ ನಾವೆಲ್ಲರೂ ಬೀದಿಗಿಳಿಯುವ ಸಮಯ ಎದುರಾಗಿತ್ತು. ಅದಾದ 12 ವರ್ಷಗಳ ನಂತರ, ಸಿಸಿಟಿವಿ ದೃಶ್ಯಾವಳಿಗಳನ್ನು ಕಣ್ಮರೆಯಾಗಿಸಿ ಆರೋಪಿಯನ್ನು (ಬಿಭವ್ ಕುಮಾರ್) ರಕ್ಷಿಸಲು ಬೀದಿಗಿಳಿದಿದ್ದೇವೆಯೇ? ಅವರು ಮನೀಶ್ ಸಿಸೋಡಿಯಾ ಜಿ ಅವರನ್ನು ಕರೆತರಲು ಇಷ್ಟು ಹೋರಾಟವನ್ನು ತೋರಿಸಬಹುದಿತ್ತು. ಅವರು ಇಲ್ಲಿದ್ದರೆ, ಬಹುಶಃ ನನಗೆ ಇಷ್ಟು ಕೆಟ್ಟ ಪರಿಸ್ಥಿತಿ ಎದುರಾಗುತ್ತಿರಲಿಲ್ಲ ಎಂದಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಬಿಭವ್ ಕುಮಾರ್ ಅವರನ್ನು ಬಂಧಿಸಿದ್ದಾರೆ.
Advertisement