ಚೆನ್ನೈ: ಹಲ್ಲೆ, ಚಿತ್ರಹಿಂಸೆಯಿಂದ 15 ವರ್ಷದ ಅಪ್ರಾಪ್ತ ಬಾಲಕಿಯ ಸಾವು ಆರೋಪಕ್ಕೆ ಸಂಬಂಧಿಸಿದಂತೆ ದಂಪತಿ ಸೇರಿದಂತೆ ಆರು ಮಂದಿಯನ್ನು ಅಮಿಂಜಿಕರೈ ಪೊಲೀಸರು ಬಂಧಿಸಿದ್ದಾರೆ.
ತಂಜಾವೂರು ಮೂಲದ ಅಪ್ರಾಪ್ತ ಬಾಲಕಿ ನಸಿಯಾ ಮತ್ತು ನಿಶಾತ್ ಅವರ ಮನೆಯಲ್ಲಿ ಕೆಲಸ ಮಾಡುತ್ತಿದ್ದಳು. ಅವರು ತಮ್ಮ ಮಗುವನ್ನು ನೋಡಿಕೊಳ್ಳಲು ಡಿಸೆಂಬರ್ 2023 ರಿಂದ ಅಮಿಂಜಿಕರೈನ ಅಪಾರ್ಟ್ ಮೆಂಟ್ ಸಂಕೀರ್ಣದಲ್ಲಿರುವ ಬಾಡಿಗೆ ಮನೆಯಲ್ಲಿ ಬಾಲಕಿಯನ್ನು ಮನೆಗೆಲಸದಲ್ಲಿ ಇಟ್ಟುಕೊಂಡಿದ್ದರು ಎನ್ನಲಾಗಿದೆ. ಬಾಲಕಿಯ ಕುಟುಂಬದಲ್ಲಿ ತೊಂದರೆ ಇದ್ದರಿಂದ ತಂಜಾವೂರಿನಲ್ಲಿರುವ ನಿಶಾತ್ ಅವರ ಸಹೋದರಿಯ ಸಲಹೆ ಮೇರೆಗೆ ನಗರಕ್ಕೆ ಕಳುಹಿಸಲಾಗಿತ್ತು ಎಂದು ಮೂಲಗಳು ತಿಳಿಸಿವೆ.
ಶುಕ್ರವಾರ ಮನೆ ಮಾಲೀಕರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. ಆರಂಭದಲ್ಲಿ ಅಸ್ವಾಭಾವಿಕ ಸಾವು ಎಂದು ಪ್ರಕರಣ ದಾಖಲಿಸಲಾಗಿತ್ತು, ಆದರೆ ವಿಚಾರಣೆ ನಂತರ ಸತ್ಯಾಂಶ ತಿಳಿದುಬಂದಿದೆ. ಆರೋಪಿಗಳು ಕಳೆದ ಮೂರು ತಿಂಗಳಿನಿಂದ ಬಾಲಕಿಯ ಮೇಲೆ ದೈಹಿಕವಾಗಿ ಹಲ್ಲೆ ನಡೆಸಿ ಚಿತ್ರಹಿಂಸೆ ನೀಡುತ್ತಿದ್ದರು ಎಂದು ಪೊಲೀಸ್ ತನಿಖೆಯಿಂದ ತಿಳಿದುಬಂದಿದೆ. ಗುರುವಾರ ಬಾಲಕಿ ಮೇಲೆ ಹಲ್ಲೆ ನಡೆಸಿದ್ದರಿಂದ ಕುಸಿದು ಬಿದ್ದು ಸಾವನ್ನಪ್ಪಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆ ಕುರಿತು ಮಾಹಿತಿ ಪಡೆದ ಪೊಲೀಸರು ಅಪಾರ್ಟ್‌ಮೆಂಟ್‌ಗೆ ತೆರಳಿ ಪರಿಶೀಲನೆ ನಡೆಸಿದಾಗ ಸ್ನಾನದ ಕೊಠಡಿಯಲ್ಲಿ ಶವ ಪತ್ತೆಯಾಗಿತ್ತು. ಆಕೆಯ ದೇಹದ ಮೇಲೆ ಸುಟ್ಟಗಾಯಗಳು ಕಂಡುಬಂದಿತ್ತು. ನಂತರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಕಿಲ್ಪಾಕ್ ಸರ್ಕಾರಿ ವೈದ್ಯಕೀಯ ಕಾಲೇಜಿಗೆ ಕಳುಹಿಸಲಾಗಿತ್ತು. ಕೊಲೆ ಆರೋಪದಡಿ ಪ್ರಕರಣ ದಾಖಲಿಸಿರುವ ಪೊಲೀಸರು, ಪೋಕ್ಸೊ ಮತ್ತು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆಯ ಸೆಕ್ಷನ್‌ಗಳನ್ನು ದಾಖಲಿಸಿದ್ದಾರೆ. ವಿಚಾರಣೆಯ ನಂತರ, ಎಲ್ಲಾ ಆರು ಮಂದಿಯನ್ನು ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ.
Advertisement