ಉತ್ತರ ಪ್ರದೇಶ ರಾಜ್ಯ ಮಹಿಳಾ ಆಯೋಗವು ಮಹಿಳೆಯರನ್ನು 'ಕೆಟ್ಟ ಸ್ಪರ್ಶ'ದಿಂದ ರಕ್ಷಿಸಲು ಮತ್ತು ಪುರುಷರ ಕೆಟ್ಟ ಉದ್ದೇಶಗಳನ್ನು ತಡೆಯಲು ಪ್ರಸ್ತಾವನೆಯನ್ನು ನೀಡಿದೆ. ಇದರ ಪ್ರಕಾರ, ಪುರುಷ ಟೈಲರ್ ಮಹಿಳೆಯರ ಬಟ್ಟೆಗಳನ್ನು ಹೊಲಿಯಬಾರದು ಅಥವಾ ಅವರ ಕೂದಲನ್ನು ಕತ್ತರಿಸಬಾರದು. ಈ ಪ್ರಸ್ತಾವನೆಯನ್ನು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಬಬಿತಾ ಚೌಹಾಣ್ ಮಂಡಿಸಿದ್ದು, ಸಭೆಯಲ್ಲಿದ್ದ ಇತರ ಸದಸ್ಯರು ಇದಕ್ಕೆ ಬೆಂಬಲ ಸೂಚಿಸಿದ್ದಾರೆ.
ಅಕ್ಟೋಬರ್ 28ರಂದು ನಡೆದ ಮಹಿಳಾ ಆಯೋಗದ ಸಭೆಯ ನಂತರ, ಪುರುಷರಿಗೆ ಮಹಿಳೆಯರ ಅಳತೆ ತೆಗೆದುಕೊಳ್ಳಲು ಅವಕಾಶ ನೀಡಬಾರದು ಮತ್ತು ಅಂಗಡಿಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸುವುದು ಸೇರಿದಂತೆ ಹಲವು ಸಲಹೆಗಳನ್ನು ನೀಡಿತ್ತು. ಸದ್ಯ ಇದು ಕೇವಲ ಪ್ರಸ್ತಾವನೆಯಾಗಿದ್ದು, ನಂತರ ಮಹಿಳಾ ಆಯೋಗ ಈ ಬಗ್ಗೆ ಕಾನೂನು ರೂಪಿಸುವಂತೆ ರಾಜ್ಯ ಸರ್ಕಾರಕ್ಕೆ ಮನವಿ ಮಾಡಲಿದೆ. ಮಹಿಳಾ ಆಯೋಗದ ನಿಯಮಗಳನ್ನು ಪಾಲಿಸುವುದು ಜಿಲ್ಲಾಡಳಿತದ ಜವಾಬ್ದಾರಿಯಾಗಿದೆ.
ಈ ನಿಟ್ಟಿನಲ್ಲಿ ಯುಪಿ ಮಹಿಳಾ ಆಯೋಗದ ಸದಸ್ಯೆ ಹಿಮಾನಿ ಅಗರ್ವಾಲ್ ಮಾತನಾಡಿದ್ದು, ಇತ್ತೀಚೆಗೆ ನಡೆದ ಮಹಿಳಾ ಆಯೋಗದ ಸಭೆಯಲ್ಲಿ, ಮಹಿಳೆಯರು ಧರಿಸುವ ಬಟ್ಟೆಗಳನ್ನು ಮಹಿಳಾ ಟೈಲರ್‌ಗಳು ಮಾತ್ರ ಅಳತೆ ತೆಗೆದುಕೊಳ್ಳಬೇಕು ಎಂಬ ಪ್ರಸ್ತಾಪವನ್ನು ಮಾಡಲಾಗಿದೆ. ಅಲ್ಲದೇ ಅಂಗಡಿಯಲ್ಲಿ ಸಿಸಿಟಿವಿ ಅಳವಡಿಸಬೇಕು. ಮಹಿಳಾ ಕ್ಷೌರಿಕರು ಮಾತ್ರ ಸಲೂನ್‌ನಲ್ಲಿ ಮಹಿಳಾ ಗ್ರಾಹಕರನ್ನು ನೋಡಿಕೊಳ್ಳಬೇಕು ಎಂದು ನಾವು ಹೇಳಿದ್ದೇವೆ. ಏಕೆಂದರೆ, ಈ ರೀತಿಯ ವೃತ್ತಿಯಲ್ಲಿ ತೊಡಗಿರುವ ಪುರುಷರಿಂದಾಗಿ ಮಹಿಳೆಯರು ಕಿರುಕುಳಕ್ಕೊಳಗಾಗುತ್ತಾರೆ ಎಂದು ನಾವು ನಂಬುತ್ತೇವೆ. ಪುರುಷರು ತಪ್ಪಾಗಿ ವರ್ತಿಸಲು ಪ್ರಯತ್ನಿಸುತ್ತಾರೆ. ಕೆಲವು ಪುರುಷರ ಉದ್ದೇಶಗಳು ಸಹ ಒಳ್ಳೆಯದಲ್ಲ. ಆದರೆ, ಎಲ್ಲ ಪುರುಷರಿಗೂ ಕೆಟ್ಟ ಉದ್ದೇಶವಿರುತ್ತದೆ ಎಂದಲ್ಲ ಎಂದು ಹೇಳಿದರು.
ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಬಬಿತಾ ಚೌಹಾಣ್, ಮಹಿಳೆಯರು ಹೋಗುವ ಜಿಮ್‌ಗಳಲ್ಲಿ ಮಹಿಳಾ ತರಬೇತುದಾರರು ಇರಬೇಕು. ಎಲ್ಲಾ ಜಿಮ್ ತರಬೇತುದಾರರ ಪೊಲೀಸ್ ಪರಿಶೀಲನೆ ನಡೆಸಬೇಕು. ಒಬ್ಬ ಮಹಿಳೆ ಪುರುಷ ತರಬೇತುದಾರರಿಂದ ತರಬೇತಿ ಪಡೆಯಲು ಬಯಸಿದರೆ, ಅವಳು ಅದನ್ನು ಲಿಖಿತವಾಗಿ ನೀಡಬೇಕು. ಏಕೆಂದರೆ, ಜಿಮ್‌ಗೆ ಹೋಗುವ ಮಹಿಳೆಯರು ಮತ್ತು ಬಾಲಕಿಯರ ಶೋಷಣೆಯ ದೂರುಗಳು ಮಹಿಳಾ ಆಯೋಗಕ್ಕೆ ನಿರಂತರವಾಗಿ ಬರುತ್ತಿದ್ದು, ನಂತರ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಅಷ್ಟೇ ಅಲ್ಲ, ಹೆಣ್ಣು ಮಕ್ಕಳು ಪ್ರಯಾಣಿಸುವ ಶಾಲಾ ಬಸ್‌ಗಳಲ್ಲಿ ಮಹಿಳಾ ಉದ್ಯೋಗಿಗಳಿರಬೇಕು. ಸದ್ಯ ಮಹಿಳಾ ಆಯೋಗ ಎಲ್ಲ ಜಿಲ್ಲೆಗಳಿಗೂ ಈ ಸಂಬಂಧ ಆದೇಶ ನೀಡಿದೆ. ಒಪ್ಪದವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದರು.
Advertisement