ಕಡಲೂರು: 92 ವರ್ಷದ ಮೃತ ವ್ಯಕ್ತಿಯ ಅಂತ್ಯಸಂಸ್ಕಾರಕ್ಕಾಗಿ ತಮಿಳುನಾಡು ಗ್ರಾಮಸ್ಥರು ಕುತ್ತಿಗೆ ವರೆಗೆ ನೀರು ಹರಿಯುತ್ತಿರುವ ಕಾಲುವೆ ದಾಟುತ್ತಿರುವ ವಿಡಿಯೋ ವೈರಲ್ ಆದ ಬೆನ್ನಲ್ಲೇ ಜಿಲ್ಲಾಧಿಕಾರಿ ಕಾಲುವೆ ಮೇಲೆ ಸೇತುವೆ ನಿರ್ಮಾಣಕ್ಕೆ ಹಣಕಾಸಿನ ನೆರವಿಗೆ ಮುಂದಾಗಿದ್ದಾರೆ.
ತಮಿಳುನಾಡಿನ ಕಡಲೂರು ಜಿಲ್ಲೆಯ ಕಟ್ಟುಮನ್‌ನಾರ್‌ಕೋಯಿಲ್ ಬಳಿಯ ವೀರಸೋಜಪುರಂ ನಲ್ಲಿ ಈ ಘಟನೆ ನಡೆದಿದ್ದು, ಇಲ್ಲಿ ಗ್ರಾಮದಿಂದ ಆಚೆ ಇರುವ ಕಾಲುವೆ ಬಳಿಕ ಸ್ಮಶಾನವಿದೆ.
ಹೀಗಾಗಿ ಗ್ರಾಮದಲ್ಲಿ ಯಾರೇ ಮರಣಹೊಂದಿದರೂ ಅವರ ದೇಹವನ್ನು ಈ ಕಾಲುವೆ ದಾಟಿಯೇ ಸ್ಮಶಾನಕ್ಕೆ ಸಾಗಿಸಬೇಕಾದ ಪರಿಸ್ಥಿತಿ ಇದೆ. ಇದೇ ರೀತಿ 92 ವರ್ಷದ ವೃದ್ಧರ ಮೃತದೇಹವನ್ನು ತುಂಬಿ ಹರಿಯುತ್ತಿರುವ ಕಾಲುವೆಯಲ್ಲಿಯೇ ಗ್ರಾಮಸ್ಥರು ಸಾಗಿಸಿ ಅಂತ್ಯ ಸಂಸ್ಕಾರ ನೆರವೇರಿಸಿದ್ದರು. ಈ ಕುರಿತ ವಿಡಿಯೋ ವ್ಯಾಪಕ ವೈರಲ್ ಆಗಿತ್ತು.
ಈ ಗ್ರಾಮದಲ್ಲಿ 100ಕ್ಕೂ ಹೆಚ್ಚು ಕುಟುಂಬಗಳು ವಾಸವಾಗಿವೆ. 'ಉತ್ತರ ರಾಜನ್ ನಾಲೆಯಲ್ಲಿ ಹೆಚ್ಚಿನ ಪ್ರಮಾಣದ ನೀರು ಹರಿದರೆ, ಈಜು ಬಲ್ಲವರು ಮಾತ್ರ ಮೃತದೇಹಗಳನ್ನು ಕೊಳ್ಳಿಡಾಂ ನದಿ ಪಾತ್ರದ ಸಮಾಧಿ ಸ್ಥಳಕ್ಕೆ ಕೊಂಡೊಯ್ಯಬಹುದು, ಇಲ್ಲಿ ಸೇತುವೆ ನಿರ್ಮಿಸುವಂತೆ ಹಲವು ವರ್ಷಗಳಿಂದ ಪಂಚಾಯಿತಿ ಅಧಿಕಾರಿಗಳಿಗೆ ಮನವಿ ಸಲ್ಲಿಸುತ್ತಿದ್ದೇವೆ. ಆದರೆ, ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಗ್ರಾಮಸ್ಥರೊಬ್ಬರು ಅಳಲು ತೋಡಿಕೊಂಡಿದ್ದಾರೆ.
ಘಟನೆಯ ಮಾಹಿತಿ ತಿಳಿದ ಕಡಲೂರು ಜಿಲ್ಲಾಧಿಕಾರಿ ಸಿಬಿ ಆದಿತ್ಯ ಸೆಂಥಿಲ್ ಕುಮಾರ್ ಅವರು ರಾಜನ್ ಕಾಲುವೆಗೆ ಪಾದಚಾರಿ ಸೇತುವೆ ನಿರ್ಮಿಸಲು 20 ಲಕ್ಷ ರೂ ಆರ್ಥಿಕ ನೆರವು ನೀಡಿದ್ದು, ಪ್ರಸ್ತುತ ಮುಂಗಾರು ಮಳೆಯಿಂದಾಗಿ ತಕ್ಷಣದ ಪರಿಹಾರವಾಗಿ ಈ ಪ್ರದೇಶದಲ್ಲಿ ತಾತ್ಕಾಲಿಕ ಸೇತುವೆಯನ್ನು ಶೀಘ್ರದಲ್ಲಿ ಅಳವಡಿಸಲಾಗುವುದು ಎಂದು ಹೇಳಿದ್ದಾರೆ.
Advertisement