ಚೆನ್ನೈ: ತಮಿಳುನಾಡಿನ ಕವರೈಪೇಟೈ ಸಮೀಪ ಮೈಸೂರು-ದರ್ಭಾಂಗ ಬಾಗ್ ಮತಿ ಎಕ್ಸ್‌ಪ್ರೆಸ್ ರೈಲು- ಗೂಡ್ಸ್ ರೈಲು ನಡುವೆ ಅಪಘಾತ ಸಂಭವಿಸಿದ ಒಂದು ದಿನದ ನಂತರ ವಿಧ್ವಂಸಕ ಕೃತ್ಯದ ಸಾಧ್ಯತೆ ಕುರಿತು ತನಿಖೆ ಮಾಡಲು ಎನ್‌ಐಎ, ಸರ್ಕಾರಿ ರೈಲ್ವೇ ಪೊಲೀಸ್ ಮತ್ತು ಆರ್‌ಪಿಎಫ್ ಪ್ರತ್ಯೇಕ ತನಿಖೆಯನ್ನು ಆರಂಭಿಸಿವೆ.
ಸಿಗ್ನಲಿಂಗ್ ಪಾಯಿಂಟ್‌ಗಳಲ್ಲಿ ನಟ್ ಗಳು ಕಾಣೆಯಾಗುವುದರೊಂದಿಗೆ ನಿರ್ಣಾಯಕ ಬೋಲ್ಟ್‌ಗಳು ಮತ್ತು ಬ್ರಾಕೆಟ್‌ಗಳು ತೆರೆದಿರುವುದು ಕಂಡುಬಂದಿದೆ ಎಂದು ಮೂಲಗಳು ತಿಳಿಸಿವೆ.1,800 ಪ್ರಯಾಣಿಕರು ರೈಲಿನಲ್ಲಿ ಪ್ರಯಾಣಿಸುತ್ತಿದ್ದಾಗ ಅಪಘಾತ ಸಂಭವಿಸಿದೆ, ಆದರೆ ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
ಪ್ಯಾಸೆಂಜರ್ ರೈಲಿಗೆ ಮುಖ್ಯ ಮಾರ್ಗದಲ್ಲಿ ಹಸಿರು ನಿಶಾನೆ ನೀಡಲಾಗಿತ್ತು. ಆದರೆ ಅದು ಲೂಪ್ ಲೈನ್ ಪ್ರವೇಶಿಸಿದ ಪರಿಣಾಮ ಸರಕು ರೈಲಿಗೆ ಡಿಕ್ಕಿ ಸಂಭವಿಸಿದೆ ಎಂದು ರೈಲ್ವೆ ಮಂಡಳಿ ಹೇಳಿದೆ.
ಟ್ರ್ಯಾಕ್‌ಗಳು, ಪಾಯಿಂಟ್‌ಗಳು ಮತ್ತು ಬ್ಲಾಕ್‌ಗಳು, ಸಿಗ್ನಲ್‌ಗಳು, ಸ್ಟೇಷನ್ ಎಲೆಕ್ಟ್ರಾನಿಕ್ ಇಂಟರ್‌ಲಾಕಿಂಗ್ ಸಿಸ್ಟಮ್, ಕಂಟ್ರೋಲ್ ಪ್ಯಾನಲ್ ಮತ್ತಿತರ ಮಹತ್ವದ ಸುರಕ್ಷತೆ, ಸಿಗ್ನಲ್ ಮತ್ತು ಕಾರ್ಯಾಚರಣೆಯ ಅಂಶಗಳ ಕುರಿತು ಸಂಪೂರ್ಣವಾಗಿ ಪರಿಶೀಲನೆ ನಡೆಸಲಾಗುತ್ತಿದೆ ಎಂದು ದಕ್ಷಿಣ ವೃತ್ತದ ರೈಲ್ವೆ ಸುರಕ್ಷತಾ ಆಯುಕ್ತ ಎ ಎಂ ಚೌಧರಿ ಅವರು ಹೇಳಿದ್ದಾರೆ.
ಈ ಮಧ್ಯೆ 500 ಕ್ಕೂ ಹೆಚ್ಚು ಕಾರ್ಮಿಕರು ಹಳಿ ತೆರವುಗೊಳಿಸುವ ಕಾರ್ಯದಲ್ಲಿ ತೊಡಗಿದ್ದಾರೆ ಮತ್ತು ರಾತ್ರಿ 9.05 ರ ಸುಮಾರಿಗೆ ಗುಡೂರು-ಚೆನ್ನೈ ವಿಭಾಗದಲ್ಲಿ ಭಾಗಶಃ ರೈಲು ಸೇವೆ ಪುನರಾರಂಭವಾಯಿತು. ವಿಜಯವಾಡ, ಹೈದರಾಬಾದ್ ಮತ್ತು ಇತರ ಸ್ಥಳಗಳಿಗೆ ಸುಮಾರು 20 ಎಕ್ಸ್‌ಪ್ರೆಸ್ ರೈಲುಗಳು ಮತ್ತು ವಿಭಾಗದಲ್ಲಿ ದೈನಂದಿನ ಮೆಮು ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ.
ಶುಕ್ರವಾರ ಪೆರಂಬೂರಿನಿಂದ ರಾತ್ರಿ 7.50 ಕ್ಕೆ ಹೊರಟ ಬಾಗ್ಮತಿ ಎಕ್ಸ್‌ಪ್ರೆಸ್ ರಾತ್ರಿ 8.30 ರ ಸುಮಾರಿಗೆ ಗುಮ್ಮಿಡಿಪುಂಡಿ ಬಳಿಯ ಕವರೈಪೆಟ್ಟೈ ತಲುಪಿತು. ಗಂಟೆಗೆ 109 ಕಿಮೀ ವೇಗದಲ್ಲಿ ಪ್ರಯಾಣಿಸುತ್ತಿದ್ದ ಎಕ್ಸ್‌ಪ್ರೆಸ್ ಲೂಪ್ ಲೈನ್‌ಗೆ ಪ್ರವೇಶಿಸುವ ಮುನ್ನಾ ಗಂಟೆಗೆ 75 ಕಿ.ಮೀ ನಷ್ಟ ವೇಗ ಕಡಿಮೆ ಮಾಡಿದ್ದು, ಗಾರ್ಡ್ ಕೋಚ್ ಬಳಿ ಸರಕು ರೈಲಿನ ಹಿಂದಿನ ಕೋಚ್‌ಗಳಿಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಬಾಗ್ಮತಿ ಎಕ್ಸ್‌ಪ್ರೆಸ್‌ನ ಇಂಜಿನ್ ಮತ್ತು ಎಂಟು ಬೋಗಿಗಳು ಹಳಿತಪ್ಪಿದರೆ, ಇನ್ನೆರಡು - ಪವರ್ ಕಾರ್ ಮತ್ತು ಮೋಟಾರ್ ವ್ಯಾನ್ - ಬೆಂಕಿ ಹೊತ್ತಿಕೊಂಡಿದ್ದು, ಸರಕು ಸಾಗಣೆ ರೈಲಿನ ಎರಡು ಬೋಗಿಗಳೂ ಹಳಿತಪ್ಪಿವೆ.
Advertisement