ಮುಂಬೈ: ಮಹಾರಾಷ್ಟ್ರ ವಿಧಾನಸಭೆ ಚುನಾವಣೆಗೆ ದಿನಗಣನೆ ಆರಂಭವಾಗಿರುವಂತೆಯೇ ಕಾಂಗ್ರೆಸ್ ಪಕ್ಷದಲ್ಲಿ ಬಂಡಾಯದ ಬಿಸಿ ಜೋರಾಗಿದ್ದು, ಪಕ್ಷದ ವಿರುದ್ಧ ಬಂಡಾಯವೆದ್ದಿದ್ದ 16 ರೆಬೆಲ್ ಶಾಸಕರನ್ನು ಪಕ್ಷದಿಂದ ಅಮಾನತು ಮಾಡಲಾಗಿದೆ.
ಮಹಾರಾಷ್ಟ್ರ ಕಾಂಗ್ರೆಸ್ ಅಧ್ಯಕ್ಷ ನಾನಾ ಪಟೋಲೆ ಭಾನುವಾರ ಪಕ್ಷದ 16 ಬಂಡಾಯ ಅಭ್ಯರ್ಥಿಗಳನ್ನು ಆರು ವರ್ಷಗಳ ಕಾಲ ಅಮಾನತುಗೊಳಿಸಿದ್ದಾರೆ.
ಅಮಾನತುಗೊಂಡಿರುವ ನಾಯಕರಲ್ಲಿ ಆನಂದರಾವ್ ಗೆಡಂ, ಸೋನಾಲ್ ಕೋವೆ, ಅಭಿಲಾಷ ಗವಟೂರೆ, ಪ್ರೇಮಸಾಗರ ಗನ್ವೀರ್, ಅಜಯ್ ಲಾಂಜೇವರ್, ವಿಲಾಸ್ ಪಾಟೀಲ್, ಹಂಸಕುಮಾರ್ ಪಾಂಡೆ, ಕಮಲ್ ವ್ಯವಹಾರೆ, ಮೋಹನರಾವ್ ದಾಂಡೇಕರ್, ಮಂಗಲ್ ಭುಜಬಲ್, ಮನೋಜ್ ಸಿಂಧೆ, ವಿಜಯ್ ಖಡ್ಸೆ, ಶಬೀರ್ ಖಾನ್, ಅವಿನಾಶ್ ಲಾಡ್, ಯಜಿಜ್ಞಾವಲ್ಕ್ಯ ಮತ್ತು ರಾಜೇಂದ್ರ ಮುಲಾಕ್ ಸೇರಿದ್ದಾರೆ.
ಈ ಬಗ್ಗೆ ಕಾಂಗ್ರೆಸ್ ರಾಜ್ಯಾಧ್ಯಕ್ಷ ನಾನಾ ಪಟೋಲೆ ಮಾಹಿತಿ ನೀಡಿದ್ದು, 'ಕಾಂಗ್ರೆಸ್ ಪಕ್ಷದ 16 ಬಂಡಾಯ ಅಭ್ಯರ್ಥಿಗಳನ್ನು 6 ವರ್ಷಗಳ ಅವಧಿಗೆ ಅಮಾನತು ಮಾಡಲಾಗಿದೆ ಎಂದಿದ್ದಾರೆ.
ಮಹಾ ವಿಕಾಸ್ ಅಘಾಡಿ (ಎಂವಿಎ) ಮೈತ್ರಿಕೂಟದ ಅಧಿಕೃತ ಅಭ್ಯರ್ಥಿಗಳ ವಿರುದ್ಧ ಸ್ಪರ್ಧಿಸುತ್ತಿರುವ ಎಲ್ಲಾ ಪಕ್ಷದ ಬಂಡಾಯ ಅಭ್ಯರ್ಥಿಗಳನ್ನು ಆರು ವರ್ಷಗಳ ಅವಧಿಗೆ ಅಮಾನತುಗೊಳಿಸಲಾಗಿದೆ ಎಂದು ಕಾಂಗ್ರೆಸ್ ನಾಯಕ ರಮೇಶ್ ಚೆನ್ನಿಟಾಲ ಹೇಳಿದ ಕೆಲವೇ ದಿನಗಳಲ್ಲಿ ಈ ಬೆಳವಣಿಗೆ ನಡೆದಿದೆ.
ನವೆಂಬರ್ 20 ರ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಗೆ ಇನ್ನೂ ಕಣದಲ್ಲಿರುವ ಬಂಡಾಯಗಾರರ ಪಟ್ಟಿಯನ್ನು ಸಿದ್ಧಪಡಿಸಲು ಮತ್ತು ಅವರಿಗೆ ನೋಟಿಸ್ ನೀಡಲು ಜಿಲ್ಲಾ ಘಟಕಗಳಿಗೆ ತಿಳಿಸಲಾಗಿದೆ ಎಂದು ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಚೆನ್ನಿಟಾಲ ಹೇಳಿದರು.
"ಎಂವಿಎ ಅಧಿಕೃತ ಅಭ್ಯರ್ಥಿಗಳ ವಿರುದ್ಧ ಸ್ಪರ್ಧಿಸುತ್ತಿರುವ ಎಲ್ಲಾ ಬಂಡಾಯಗಾರರನ್ನು ಅಮಾನತುಗೊಳಿಸಲಾಗಿದೆ" ಎಂದು ಮಹಾರಾಷ್ಟ್ರದ ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ಉಸ್ತುವಾರಿ ಹೇಳಿದ್ದಾರೆ.
Advertisement