Maharashtra Elections: 'RSS ನಿಷೇಧ, ಮುಸ್ಲಿಮರಿಗೆ ಮೀಸಲಾತಿ'; ಮಹಾವಿಕಾಸ್ ಅಘಾಡಿ ಬೆಂಬಲಕ್ಕೆ ಷರತ್ತು ಮುಂದಿಟ್ಟ All India Ulama Board
ಮುಂಬೈ: ನೆರೆಯ ಮಹಾರಾಷ್ಟ್ರ ವಿಧಾನಸಭೆ ಚುನಾವಣೆಗೆ ದಿನಗಣನೆ ಆರಂಭವಾಗಿರುವಂತೆಯೇ ಕಾಂಗ್ರೆಸ್-ಶಿವಸೇನೆ ಉದ್ಧವ್ ಠಾಕ್ರೆ ಬಣ, ಸಮಾಜವಾದಿ ಪಕ್ಷಗಳ ಮಹಾವಿಕಾಸ್ ಅಘಾಡಿ ಮೈತ್ರಿಕೂಟಕ್ಕೆ ಬೆಂಬಲ ಸೂಚಿಸಲು All India Ulama Board ಆರ್ ಎಸ್ ಎಸ್ ನಿಷೇಧ ಸೇರಿದಂತೆ ಹಲವು ಷರತ್ತುಗಳನ್ನು ವಿಧಿಸಿದೆ.
ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಎಂವಿಎ ಮೈತ್ರಿಕೂಟಕ್ಕೆ ಷರತ್ತುಬದ್ಧ ಬೆಂಬಲ ನೀಡಲು ಅಖಿಲ ಭಾರತ ಉಲೇಮಾ ಬೋರ್ಡ್ ನಿರ್ಧರಿಸಿದ್ದು, ಮೂರು ಮೈತ್ರಿ ಪಕ್ಷಗಳ ನಾಯಕರಿಗೆ ಪತ್ರದ ಮೂಲಕ ಬೆಂಬಲದ ನಿರ್ಧಾರ ತಿಳಿಸಿರುವ ಬೋರ್ಡ್, ಇದಕ್ಕಾಗಿ ತನ್ನ 17 ಬೇಡಿಕೆಗಳನ್ನೂ ಮುಂದಿಟ್ಟಿದೆ.
ಶಿವಸೇನಾ ಮುಖ್ಯಸ್ಥ ಉದ್ಧವ್ ಠಾಕ್ರೆ, ಎನ್ಸಿಪಿ ಮುಖ್ಯಸ್ತ ಶರದ್ ಪವಾರ್ ಮತ್ತು ಕಾಂಗ್ರೆಸ್ ಮುಖಂಡ ನಾನಾ ಪಟೋಲೆ ಅವರಿಗೆ ಉಲಮಾ ಬೋರ್ಡ್ ಪತ್ರ ಬರೆದು, ತನ್ನ ನೆರವನ್ನು ಘೋಷಿಸಿದೆಯಾದರೂ, ಅದು ಷರತ್ತುಬದ್ಧ ಬೆಂಬಲ ಎಂದು ಸ್ಪಷ್ಟಪಡಿಸಿದೆ.
ಆರೆಸ್ಸೆಸ್ ನಿಷೇಧಿಸಬೇಕು, ವಕ್ಫ್ ಮಸೂದೆಯನ್ನು ವಿರೋಧಿಸಬೇಕು. ಮಹಾರಾಷ್ಟ್ರದ ಮುಸ್ಲಿಮರಿಗೆ ಮೀಸಲಾತಿ ನೀಡಬೇಕು. ಅತಿಕ್ರಮಗೊಂಡ ವಕ್ಫ್ ಆಸ್ತಿಗಳನ್ನು ಮರಳು ಕ್ರಮ ತೆಗೆದುಕೊಳ್ಳಬೇಕು ಎಂಬಿತ್ಯಾದಿ 17 ಬೇಡಿಕೆಗಳನ್ನು ಉಲೇಮಾ ಮಂಡಳಿ ಮುಂದಿಟ್ಟಿದೆ.
ಇದಲ್ಲದೆ ವಕ್ಫ್ ತಿದ್ದುಪಡಿ ಮಸೂದೆಯನ್ನು ವಿರೋಧಿಸಬೇಕು, ಮಹಾರಾಷ್ಟ್ರದಲ್ಲಿ ಉದ್ಯೋಗ ಮತ್ತು ಶಿಕ್ಷಣದಲ್ಲಿ ಮುಸ್ಲಿಮರಿಗೆ ಶೇ. 10 ಮೀಸಲಾತಿ ನೀಡಬೇಕು, ಮಹಾರಾಷ್ಟ್ರದ 48 ಜಿಲ್ಲೆಗಳಲ್ಲಿ ಅತಿಕ್ರಮಗೊಂಡಿರುವ ವಕ್ಫ್ ಆಸ್ತಿಗಳನ್ನು ಮರಳಿ ಕೊಡಲಾಗುವಂತೆ ಕಾನೂನು ರೂಪಿಸಬೇಕು. ಮಹಾರಾಷ್ಟ್ರ ವಕ್ಫ್ ಬೋರ್ಡ್ಗೆ 1,000 ಕೋಟಿ ರೂ ಹಣ ಒದಗಿಸಬೇಕು. ಮಹಾರಾಷ್ಟ್ರ ರಾಜ್ಯದಲ್ಲಿ ಪೊಲೀಸ್ ನೇಮಕಾತಿಯಲ್ಲಿ ಮುಸ್ಲಿಮರಿಗೆ ಆದ್ಯತೆ ಕೊಡಬೇಕು. ಎಂವಿಎ ಸರ್ಕಾರ ರಚನೆಯಾದರೆ ರಾಷ್ಟ್ರೀಯ ಸ್ವಯಂಸೇವಕ ಸಂಘವನ್ನು ನಿಷೇಧಿಸಬೇಕು.
ಪ್ರಚೋದನಕಾರಿ ಹೇಳಿಕೆ ನೀಡಿ ಬಂಧಿತರಾಗಿರುವ ಮೌಲಾನ ಸಲ್ಮಾನ್ ಅಝೇರಿ ಅವರನ್ನು ಬಿಡುಗಡೆ ಮಾಡಬೇಕು. ಬಿಜೆಪಿ ನಾಯಕ ನಿತೇಶ್ ರಾಣೆ ಮತ್ತು ರಾಮಗಿರಿ ಮಹಾರಾಜ್ ಅವರನ್ನು ಕೂಡಲೇ ಬಂಧಿಸಬೇಕು ಎಂದು ಹೇಳಿದೆ.
ಅಂತೆಯೇ 2012ರಿಂದ 2024ರವರೆಗೆ ಗಲಭೆ ಪ್ರಕರಣಗಳಲ್ಲಿ ಬಂಧಿತರಾಗಿರುವ ಅಮಾಯಕ ಮುಸ್ಲಿಮರನ್ನು ಬಿಡುಗಡೆ ಮಾಡಬೇಕು. ಮಹಾರಾಷ್ಟ್ರ ಮಸೀದಿಗಳ ಇಮಾಮರು ಮತ್ತು ಮೌಲಾನಗಳಿಗೆ ಮಾಸಿಕ 15,000 ರೂ ಸಂಭಾವನೆ ನೀಡಬೇಕು. ಅಧಿಕಾರಕ್ಕೆ ಬಂದ ಬಳಿಕ ಅಖಿಲ ಭಾರತ ಉಲಮಾ ಮಂಡಳಿಯ ಮುಫ್ತಿ ಮೌಲಾನ, ಅಲೀಮ್ ಹಫೀಜ್ ಮಸೀದಿಯ ಇಮಾಮರನ್ನು ಸರ್ಕಾರದ ಸಮಿತಿಯಲ್ಲಿ ಸೇರಿಸಿಕೊಳ್ಳಬೇಕು. ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಮುಸ್ಲಿಮ್ ಸಮುದಾಯದ 50 ಅಭ್ಯರ್ಥಿಗಳಿಗೆ ಟಿಕೆಟ್ ನೀಡಬೇಕು.
ಮಹಾರಾಷ್ಟ್ರ ರಾಜ್ಯ ವಕ್ಫ್ ಬೋರ್ಡ್ನಲ್ಲಿ 500 ಉದ್ಯೋಗಿಗಳ ನೇಮಕಾತಿ ಆಗಬೇಕು. ಪ್ರವಾದಿ ಮೊಹಮ್ಮದ್ ಅವರನ್ನು ಅವಹೇಳನ ಮಾಡುವ ಜನರ ಮೇಲೆ ಕಠಿಣ ಕಾನೂನು ಕ್ರಮ ಜರುಗಿಸಬೇಕು. ಮಹಾರಾಷ್ಟ್ರದ 48 ಜಿಲ್ಲೆಗಳಲ್ಲಿ ಎಂವಿಎ ಪರವಾಗಿ ಪ್ರಚಾರ ಮಾಡಲು ಉಲಮಾ ಮಂಡಳಿಗೆ ಅಗತ್ಯವಾಗಿರುವ ಸಾಮಗ್ರಿಗಳನ್ನು ಒದಗಿಸಬೇಕು ಎಂದು ಷರತ್ತು ವಿಧಿಸಿದೆ.
ಅಂದಹಾಗೆ ನವೆಂಬರ್ 20ರಂದು ಮಹಾರಾಷ್ಟ್ರ ವಿಧಾನಸಭೆಗೆ ಒಂದೇ ಹಂತದಲ್ಲಿ ಚುನಾವಣೆ ಆಗುತ್ತಿದೆ. ನವೆಂಬರ್ 23ರಂದು ಮತ ಎಣಿಕೆಯಾಗಿ ಫಲಿತಾಂಶ ಹೊರಬರಲಿದೆ. ಮಹಾರಾಷ್ಟ್ರದಲ್ಲಿ ಮುಸ್ಲಿಂ ಜನಸಂಖ್ಯೆ 1.3 ಕೋಟಿಯಷ್ಟಿದೆ. ಆ ದೈತ್ಯರಾಜ್ಯದಲ್ಲಿ ಒಟ್ಟು 11.24 ಕೋಟಿ ಜನಸಂಖ್ಯೆ ಇದ್ದು ಮುಸ್ಲಿಮರ ಪ್ರಮಾಣ ಶೇ. 11.56ರಷ್ಟಿದೆ. ಕುತೂಹಲ ಎಂದರೆ ಅಲ್ಲಿನ 288 ವಿಧಾನಸಭಾ ಕ್ಷೇತ್ರಗಳ ಪೈಕಿ 38ರಲ್ಲಿ ಮುಸ್ಲಿಮ್ ಮತದಾರರ ಸಂಖ್ಯೆ ಶೇ. 20ರಷ್ಟಿದೆ. 9 ಕ್ಷೇತ್ರದಲ್ಲಿ ಇವರ ಬಾಹುಳ್ಯ ಶೇ. 40ಕ್ಕಿಂತಲೂ ಹೆಚ್ಚಿದೆ. ಮುಂಬೈನ 10 ಕ್ಷೇತ್ರಗಳಲ್ಲಿ ಶೇ. 25ಕ್ಕೂ ಹೆಚ್ಚು ಮುಸ್ಲಿಮರಿದ್ದಾರೆ.