ಲಖನೌ: ದರೋಡೆ ಪ್ರಕರಣದಲ್ಲಿ ತನ್ನನ್ನು ಅಪರಾಧಿ ಎಂದು ತೀರ್ಪು ನೀಡಿದ ನ್ಯಾಯಾಧೀಶರ ಮೇಲೆಯೇ ಗ್ಯಾಂಗ್ ಸ್ಟರ್ ಗಳು ಓರ್ವ ದಾಳಿ ಮಾಡಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.
ಉತ್ತರ ಪ್ರದೇಶದ ಫರೂಕಾಬಾದ್ ಜಿಲ್ಲೆಯಲ್ಲಿ ಅಕ್ಟೋಬರ್ 29 ರಂದು ಈ ಘಟನೆ ನಡೆದಿದ್ದು, ಗ್ಯಾಂಗ್ ಸ್ಟರ್ ಸುಂದರ್ ಭಾಟಿ ಗ್ಯಾಂಗ್‌ನ ಸದಸ್ಯ ನ್ಯಾಯಾಧೀಶರ ಮೇಲೆ ಹಲ್ಲೆ ನಡೆಸಿದ್ದಾರೆ.
ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಅನಿಲ್ ಕುಮಾರ್ ಸಿಂಗ್ ಅವರು ದೀಪಾವಳಿಗೆ ಅಲಿಗಢದ ಮೂಲಕ ನೋಯ್ಡಾದ ಮನೆಗೆ ಹೋಗುತ್ತಿದ್ದಾಗ ಜಟ್ಟಾರಿ ಬಳಿ ಅವರ ವಾಹನವನ್ನು ಬಿಳಿ ಬಣ್ಣದ ಎಸ್‌ಯುವಿಯಲ್ಲಿ ಬಂದ ಐವರು ಅಪರಿಚಿತ ದುಷ್ಕರ್ಮಿಗಳು ಅಡ್ಡಗಟ್ಟಿ ಅವರ ಕಾರಿನ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ.
ಅದೃಷ್ಟವಶಾತ್ ಈ ದಾಳಿಯಲ್ಲಿ ನ್ಯಾಯಾಧೀಶರು ಪ್ರಾಣಾಪಾಯದಿಂದ ಪಾರಾಗಿದ್ದು, ಘಟನೆಗೆ ಸಂಬಂಧಿಸಿದಂತೆ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ.
ಈ ಕುರಿತು ನ್ಯಾಯಾಧೀಶರಾದ ಅನಿಲ್ ಕುಮಾರ್ ಸಿಂಗ್ ಪೊಲೀಲ್ ದೂರು ದಾಖಲಿಸಿದ್ದು, 'ಐವರು ಅಪರಿಚಿತ ವ್ಯಕ್ತಿಗಳು ನನ್ನನ್ನು ಉದ್ದೇಶಪೂರ್ವಕವಾಗಿ ಭಯಭೀತಗೊಳಿಸಿದರು ಮತ್ತು ನನ್ನನ್ನು ಕೊಲ್ಲುವ ಉದ್ದೇಶದಿಂದ ದಾಳಿ ಮಾಡಿದರು. ನನಗೆ ಯಾರೊಂದಿಗೂ ದ್ವೇಷವಿಲ್ಲ. ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶನಾಗಿ, ಗೌತಮ್ ಬುದ್ಧನಗರದ ಜಿಲ್ಲಾ ನ್ಯಾಯಾಲಯದಲ್ಲಿ, ನಾನು 2015 ಮತ್ತು 2016 ರ ಬಹು ಪ್ರಕರಣಗಳ ಸೆಷನ್ಸ್ ವಿಚಾರಣೆಯನ್ನು ನಡೆಸಿದ್ದೆ.
ಈ ಸೆಷನ್ ವಿಚಾರಣೆಗಳಲ್ಲಿ, ಆರೋಪಿ ಸುಂದರ್ ಭಾಟಿ ಮತ್ತು ಅವರ 11 ಗ್ಯಾಂಗ್ ಸದಸ್ಯರು ರಿಷಿ ಪಾಲ್, ಸಿಂಗ್ ರಾಜ್, ಯೋಗೇಶ್, ವಿಕಾಸ್ ಪಂಡಿತ್, ಕಲು ಭಾಟಿ, ಬೀಲ್, ಕವೀಂದ್ರ, ದಿನೇಶ್ ಭಾಟಿ, ಅನೂಪ್ ಭಾಟಿ, ಯತೇಂದ್ರ ಚೌಧರಿ, ಸೋನು, ಬಾಬಿ ಅಲಿಯಾಸ್ ಶೇರ್ ಸಿಂಗ್ ಮತ್ತು ಸುರೇಂದರ್ ಪಂಡಿತ್ ಅವರನ್ನು ತಪ್ಪಿತಸ್ಥರೆಂದು ಪರಿಗಣಿಸಿ ನಾನು ಜೀವಾವಧಿ ಶಿಕ್ಷೆಗೆ ಗುರಿಪಡಿಸಿದ್ದೆ.
ಸುಂದರ್ ಭಾಟಿ ಮತ್ತು ಅವನ ಗ್ಯಾಂಗ್ ಸದಸ್ಯರು ತಮ್ಮ ಅಪರಾಧದ ಪೂರ್ವಾಪರಗಳನ್ನು ಹೊಂದಿದ್ದರೂ ಈ ವ್ಯಕ್ತಿಗಳು ಎಂದಿಗೂ ಶಿಕ್ಷೆಗೊಳಗಾಗದ ಕಾರಣ ಅವರ ಅಪರಾಧ ಮತ್ತು ಶಿಕ್ಷೆಗೆ ಸೇಡು ತೀರಿಸಿಕೊಳ್ಳಲು ಕೊಲ್ಲುವ ಉದ್ದೇಶದಿಂದ ನನ್ನ ಮೇಲೆ ದಾಳಿ ಮಾಡಲು ಸಂಚು ರೂಪಿಸಿದ್ದಾರೆ ಎಂದು ದೂರಿದ್ದಾರೆ.
ನ್ಯಾಯಾಧೀಶರ ದೂರಿನ ಆಧಾರದ ಮೇಲೆ ನವೆಂಬರ್ 9 ರಂದು ಖೇರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ವೃತ್ತಾಧಿಕಾರಿ ಎನ್ ಕೆ ಸಿಂಗ್ ತಿಳಿಸಿದ್ದಾರೆ.
Advertisement