ಅಮರಾವತಿ: ಬೀದಿಯಲ್ಲಿ ಆಟವಾಡುತ್ತಿದ್ದ 14 ತಿಂಗಳ ಮಗುವಿನ ಮೇಲೆ ಬೀದಿನಾಯಿಗಳು ದಾಳಿ ಮಾಡಿ ಕೊಂದು ಹಾಕಿರುವ ಭೀಕರ ಘಟನೆ ಆಂಧ್ರ ಪ್ರದೇಶದಲ್ಲಿ ನಡೆದಿದೆ.
ಆಂಧ್ರ ಪ್ರದೇಶದ ಎನ್ ಟಿಆರ್ ಜಿಲ್ಲೆಯ ಸೋಮವಾರಪೇಟೆ ಪೆನುಗಂಚಿಪ್ರೋಲು ಪ್ರದೇಶದ ಮಾಡೆಲ್ ಕಾಲೋನಿಯಲ್ಲಿ ಈ ಹೃದಯವಿದ್ರಾವಕ ಘಟನೆ ನಡೆದಿದ್ದು, ಮನೆ ಮುಂದಿನ ಬೀದಿಯಲ್ಲಿ ಇತರೆ ಮಕ್ಕಳೊಂದಿಗೆ 14 ತಿಂಗಳ ಮಗು ಆಟವಾಡುತ್ತಿದ್ದಾಗ ಅಲ್ಲಿನ ಬೀದಿನಾಯಿಗಳ ಗುಂಪು ಏಕಾಏಕಿ ಮಗುವಿನ ಮೇಲೆ ದಾಳಿ ಮಾಡಿವೆ.
ಈ ವೇಳೆ ಸ್ಥಳದಲ್ಲಿದ್ದ ಇತರ ಮಕ್ಕಳು ಓಡಿ ಹೋಗಿದ್ದು, ಈ ವೇಳೆ ಓಡಲಾಗದೇ ಅಲ್ಲಿಯೇ ಇದ್ದ 14 ತಿಂಗಳ ಮಗುವಿನ ಮೇಲೆ ಬೀದಿನಾಯಿಗಳು ಮುಗಿಬಿದ್ದಿವೆ.
ಮಗುವನ್ನು ಬೀದಿನಾಯಿಗಳು ಕಚ್ಚಿ ಎಳೆದಾಡಿದ್ದು, ಈ ವೇಳೆ ಮಗುವಿನ ಕುತ್ತಿಗೆ, ಕೈ, ಕಾಲು ಮತ್ತು ಬೆನ್ನು ಮತ್ತು ಸೊಂಟದಲ್ಲಿ ನಾಯಿಗಳು ತೀವ್ರ ಪ್ರಮಾಣದಲ್ಲಿ ಕಚ್ಚಿವೆ. ಸ್ಥಳೀಯರು ಬೀದಿ ನಾಯಿಗಳನ್ನು ಓಡಿಸಿದ್ದು ಈ ವೇಳೆ ಮಗು ನಿತ್ರಾಣವಾಗಿತ್ತು ಎನ್ನಲಾಗಿದೆ.
ಕೂಡಲೇ ವಿಚಾರ ತಿಳಿದು ಸ್ಥಳಕ್ಕೆ ದೌಡಾಯಿಸಿದ ಪೋಷಕರು ಮಗುವನ್ನು ಸಮೀಪದ ನಂದೀಗಾಮ ಸರ್ಕಾರಿ ಆಸ್ಪತ್ರೆಗೆ ಸಾಗಿಸಿದ್ದಾರೆಯಾದರೂ ಮಗು ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದೆ.
ಇನ್ನು ಮಗು ಸಾವಿನ ಬಳಿಕ ಆಕ್ರೋಶಗೊಂಡ ಪೋಷಕರು ಮತ್ತು ಸ್ಥಳೀಯರು ಪೆನುಗಂಚಿಪ್ರೋಲು ಪ್ರದೇಶದ ಹಳೆಯ ಚಿತ್ರಮಂದಿರದ ಬಳಿ ಅಧಿಕಾರಿಗಳ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ. ಕೂಡಲೇ ಈ ಪ್ರದೇಶದ ಬೀದಿ ನಾಯಿ ಹಾವಳಿಯನ್ನು ತಪ್ಪಿಸಬೇಕು. ಅಲ್ಲದೆ ಮಗು ಸಾವಿಗೆ ನ್ಯಾಯ ದೊರಕಿಸಿಕೊಡುವಂತೆ ಆಗ್ರಹಿಸಿದ್ದಾರೆ.
ಈ ಪ್ರದೇಶದಲ್ಲಿ ಹೆಚ್ಚಿನ ಬೀದಿನಾಯಿಗಳಿದ್ದು, ಕಾರ್ಪೋರೇಷನ್ ಅಧಿಕಾರಿಗಳು ಎಲ್ಲಿಂದಲೋ ತಂದ ನಾಯಿಗಳನ್ನು ಅಕ್ಕಪಕ್ಕದ ಪ್ರದೇಶಗಳಲ್ಲಿ ಬಿಟ್ಟು ಹೋಗುತ್ತಾರೆ. ಇದರಿಂದ ಈ ಪ್ರದೇಶದಲ್ಲಿ ನಾಯಿಗಳ ಕಾಟ ಹೆಚ್ಚಾಗಿದೆ. ಇಂದು ನನ್ನ ಮಗು ಸಾವನ್ನಪ್ಪಿದೆ. ಈ ಹಿಂದೆಯೂ ಸಾಕಷ್ಟು ಬಾರಿ ಈ ಪ್ರದೇಶದಲ್ಲಿ ಮಕ್ಕಳ ಮೇಲೆ ನಾಯಿಗಳು ದಾಳಿ ಮಾಡಿ ಹಲ್ಲೆ ಮಾಡಿವೆ. ಮಕ್ಕಳ ಮೇಲೆ ಮಾತ್ರವಲ್ಲ ದೊಡ್ಡವರ ಮೇಲೂ ದಾಳಿ ಮಾಡಿವೆ. ಈ ಬೀದಿಯಲ್ಲಿ ಜನರು ಭಯದಿಂದ ಓಡಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಮೃತ ಬಾಲಕ ತಂದೆ ಗೋಪಾಲ್ ರಾವ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
Advertisement