ನಂದೂರ್‌ಬಾರ್: ಪ್ರಧಾನಿ ನರೇಂದ್ರ ಮೋದಿ ಅವರು ಜೀವನದಲ್ಲಿ ಎಂದೂ ಸಂವಿಧಾನವನ್ನು ಓದಿಲ್ಲ. ಹೀಗಾಗಿ ನನ್ನ ಬಳಿ ಇರುವ ಕೆಂಪು ಪುಸ್ತಕ ಖಾಲಿ ಇದೆ ಎಂದು ಭಾವಿಸಿದ್ದಾರೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಗುರುವಾರ ವಾಗ್ದಾಳಿ ನಡೆಸಿದರು.
ಇಂದು ಮಹಾರಾಷ್ಟ್ರದ ನಂದೂರ್‌ಬಾರ್‌ನಲ್ಲಿ ಚುನಾವಣಾ ಸಭೆಯನ್ನುದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ, ಸಂವಿಧಾನವು ಭಾರತದ ಆತ್ಮವನ್ನು ಒಳಗೊಂಡಿದೆ ಮತ್ತು ರಾಷ್ಟ್ರೀಯ ಐಕಾನ್‌ಗಳಾದ ಬಿರ್ಸಾ ಮುಂಡಾ, ಡಾ. ಬಿ ಆರ್ ಅಂಬೇಡ್ಕರ್ ಮತ್ತು ಮಹಾತ್ಮ ಗಾಂಧಿಯವರು ರೂಪಿಸಿದ ತತ್ವಗಳನ್ನು ಒಳಗೊಂಡಿದೆ ಎಂದರು.
“ಈ ಪುಸ್ತಕದ ಕೆಂಪು ಬಣ್ಣಕ್ಕೆ ಬಿಜೆಪಿಯ ಆಕ್ಷೇಪವಿದೆ. ಆದರೆ ಈ ಪುಸ್ತಕದ ಬಣ್ಣ ಕೆಂಪು ಅಥವಾ ನೀಲಿ ಎಂಬುದರ ಬಗ್ಗೆ ನಮಗೆ ಚಿಂತೆ ಇಲ್ಲ. ಅದನ್ನು (ಸಂವಿಧಾನ) ರಕ್ಷಿಸಲು ನಾವು ಬದ್ಧರಾಗಿದ್ದೇವೆ ಮತ್ತು ಅದಕ್ಕಾಗಿ ಪಣತೊಟ್ಟಿದ್ದೇವೆ. ನನ್ನ ಬಳಿ ಇರುವ ಸಂವಿಧಾನ ಪುಸ್ತಕವೂ ಖಾಲಿ ಇದೆ ಎಂದು ಮೋದಿ ಜೀ ಭಾವಿಸಿದ್ದಾರೆ. ಏಕೆಂದರೆ ಅವರು ಅದನ್ನು ತಮ್ಮ ಜೀವನದಲ್ಲಿ ಎಂದೂ ಓದಿಲ್ಲ” ಎಂದು ರಾಹುಲ್ ಗಾಂಧಿ ಹೇಳಿದರು.
"ಆದರೆ ಮೋದಿಜಿ ಅವರೇ, ಈ ಪುಸ್ತಕ ಖಾಲಿ ಇಲ್ಲ. ಇದು ಭಾರತದ ಆತ್ಮ ಮತ್ತು ಜ್ಞಾನವನ್ನು ಹೊಂದಿದೆ. ಇದು ಬಿರ್ಸಾ ಮುಂಡಾ, ಬುದ್ಧ, ಮಹಾತ್ಮ ಫುಲೆ, ಡಾ. ಅಂಬೇಡ್ಕರ್, ಮಹಾತ್ಮ ಗಾಂಧಿಯವರಂತಹ ಮಹಾನ್ ನಾಯಕರು ರೂಪಿಸಿದ ತತ್ವಗಳನ್ನು ಒಳಗೊಂಡಿದೆ. ಈ ಪುಸ್ತಕನು ಖಾಲಿ ಎಂದು ಕರೆದರೆ ನೀವು ಅವಮಾನಿಸಿದ್ದೀರಿ ಎಂದರು.
ಆದಿವಾಸಿಗಳು, ದಲಿತರು ಮತ್ತು ಹಿಂದುಳಿದ ವರ್ಗದವರು ಪ್ರಮುಖ ನಿರ್ಧಾರ ಕೈಗೊಳ್ಳುವಲ್ಲಿ ಪ್ರಾತಿನಿಧ್ಯವನ್ನು ಪಡೆಯಬೇಕೆಂದು ಕಾಂಗ್ರೆಸ್ ಬಯಸುತ್ತದೆ. ಆದರೆ ಆದಿವಾಸಿಗಳು ಕಾಡಿನಲ್ಲೇ ಉಳಿಯಬೇಕು ಎಂದು ಬಿಜೆಪಿ ಬಯಸುತ್ತದೆ ಎಂದು ಲೋಕಸಭೆ ಪ್ರತಿಪಕ್ಷದ ನಾಯಕ ಆರೋಪಿಸಿದರು.
Advertisement