ದೆಹಲಿಯ ಉಸಿರುಗಟ್ಟಿಸುತ್ತಿದೆ ಮಾಲಿನ್ಯ: ಗಾಳಿಯ ಗುಣಮಟ್ಟ 'ತೀವ್ರ ಕಳಪೆ', GRAP-III ನಿರ್ಬಂಧಗಳು ಜಾರಿ
ನವದೆಹಲಿ: ವಾಯು ಮಾಲಿನ್ಯ ರಾಷ್ಟ್ರ ರಾಜಧಾನಿಯ ಉಸಿರುಗಟ್ಟಿಸುತ್ತಿದ್ದು, ಕೊನೆಗೂ ಎಚ್ಚೆತ್ತುಕೊಂಡ ದೆಹಲಿ ಸರ್ಕಾರ ಶುಕ್ರವಾರ GRAP-III(ಗ್ರೇಡೆಡ್ ರೆಸ್ಪಾನ್ಸ್ ಆ್ಯಕ್ಷನ್ ಪ್ಲಾನ್-3ನೇ ಹಂತ) ನಿರ್ಬಂಧಗಳನ್ನು ಜಾರಿಗೆ ತಂದಿದೆ.
ದೆಹಲಿಯ ಗಾಳಿಯ ಗುಣಮಟ್ಟವು ಸತತ ಮೂರನೇ ದಿನವೂ 'ತೀವ್ರ ಕಳಪೆ' ವಿಭಾಗದಲ್ಲಿಯೇ ಇದ್ದು, ಮಾಲಿನ್ಯ ಮಟ್ಟವನ್ನು ನಿಗ್ರಹಿಸಲು ಕಠಿಣ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ.
ಸಮೀರ್ ಆಪ್ ಪ್ರಕಾರ, ಬೆಳಗ್ಗೆ 9 ಗಂಟೆಗೆ ವಾಯು ಗುಣಮಟ್ಟ ಸೂಚ್ಯಂಕವು 'ತೀವ್ರ ಕಳಪೆ' ವಿಭಾಗದಲ್ಲಿ(400 ರಿಂದ 500), ಅಂದರೆ CAQM 411 ದಾಖಲಾಗಿದೆ.
ತಕ್ಷಣವೇ ಜಾರಿಗೆ ಬರುವಂತೆ ಮಾಲಿನ್ಯ-ವಿರೋಧಿ ಯೋಜನೆಯ ಹಂತ III ಅಡಿಯಲ್ಲಿ ನಿರ್ಬಂಧಗಳನ್ನು ಜಾರಿಗೊಳಿಸುವಂತೆ ದೆಹಲಿ-ಎನ್‌ಸಿಆರ್‌ನಲ್ಲಿರುವ ಅಧಿಕಾರಿಗಳಿಗೆ ಸರ್ಕಾರ ನಿರ್ದೇಶನ ನೀಡಿದೆ.
ಹಂತ III ಅಡಿಯಲ್ಲಿ, ಅನಿವಾರ್ಯವಲ್ಲದ ನಿರ್ಮಾಣ ಕಾಮಗಾರಿ ಸ್ಥಗಿತಗೊಳಿಸಬೇಕು ಮತ್ತು ಕಟ್ಟಡ ತೆರವುಗೊಳಿಸುವಿಕೆ, ಕಲ್ಲು ಕ್ರಷರ್‌ಗಳನ್ನು ಬಂದ್ ಮಾಡುವುದು, ದೆಹಲಿ-ರಾಷ್ಟ್ರೀಯ ರಾಜಧಾನಿ ಪ್ರದೇಶದಲ್ಲಿ (NCR) ಗಣಿಗಾರಿಕೆ ಚಟುವಟಿಕೆಗಳನ್ನು ಸ್ಥಗಿತಗೊಳಿಸುವುದು ಸೇರಿದಂತೆ ಹಲವು ನಿರ್ಬಂಧಗಳನ್ನು ವಿಧಿಸಲಾಗಿದೆ.
GRAP ಯ ಹಂತ-IV ನಿರ್ಬಂಧಗಳ ಅಡಿಯಲ್ಲಿ, 'ಎಲೆಕ್ಟ್ರಿಕ್ ವಾಹನಗಳು, CNG ವಾಹನಗಳು ಮತ್ತು BS-VI ಡೀಸೆಲ್ ಬಸ್‌ಗಳನ್ನು ಹೊರತುಪಡಿಸಿ' ಎನ್‌ಸಿಆರ್ ರಾಜ್ಯಗಳ ಎಲ್ಲಾ ಅಂತರ-ರಾಜ್ಯ ಬಸ್‌ಗಳು ದೆಹಲಿ ಪ್ರವೇಶಿಸುವುದನ್ನು ನಿಷೇಧಿಸಲಾಗಿದೆ. ಜೊತೆಗೆ ನಿರ್ಮಾಣ ಮತ್ತು ಕಟ್ಟಡ ತೆರವುಗೊಳಿಸುವಿಕೆ ಚಟುವಟಿಕೆಗಳ ಮೇಲೆ ಕಟ್ಟುನಿಟ್ಟಾದ ನಿಷೇಧ ವಿಧಿಸಲಾಗಿದೆ.
ಗ್ರಾಪ್-3 ಅನ್ವಯವಾದಂತೆ ದೆಹಲಿಯಲ್ಲಿ ಬಿಎಸ್-3 ಎಮಿಷನ್ ಗುಣಮಟ್ಟದ ಪೆಟ್ರೋಲ್ ಚಾಲಿತ ವಾಹನಗಳು ಹಾಗೂ ಬಿಎಸ್-4 ಎಮಿಷನ್ ಗುಣಮಟ್ಟದ ಡೀಸೆಲ್ ಚಾಲಿತ ವಾಹನಗಳಿಗಿಂತ ಹಳೆಯ ವಾಹನಗಳು ರಸ್ತೆಗೆ ಇಳಿಯುವಂತಿಲ್ಲ. ಕೇವಲ ದೆಹಲಿಗೆ ಮಾತ್ರವಲ್ಲದೇ ಗುರುಗ್ರಾಮ, ಘಾಜಿಯಾಬಾದ್, ಫರೀದಾಬಾದ್, ಗೌತಮಬುದ್ಧ ನಗರಕ್ಕೂ 'ಗ್ರಾಪ್-3' ಅನ್ವಯವಾಗಲಿದೆ.