AAP ಸಚಿವ ಸ್ಥಾನಕ್ಕೆ Kailash Gahlot ರಾಜೀನಾಮೆ: ನಾವೀಗ 'ಆಮ್ ಆದ್ಮಿ' ಆಗಿ ಉಳಿದಿಲ್ಲ.. ಪಕ್ಷಕ್ಕೆ ಬದ್ಧತೆ ಬದಲು ರಾಜಕೀಯ ಹಿತಾಸಕ್ತಿ ಮುಖ್ಯವಾಗಿದೆ!
ನವದೆಹಲಿ: ದೆಹಲಿ ವಿಧಾನಸಭಾ ಚುನಾವಣೆಗೆ ಇನ್ನು ಕೆಲವೇ ತಿಂಗಳುಗಳಷ್ಟೇ ಬಾಕಿಯಿದ್ದು, ಈ ನಡುವಲ್ಲೇ ಆಮ್ ಆದ್ಮಿ ಪಕ್ಷಕ್ಕೆ ಭಾರೀ ಹಿನ್ನಡೆಯುಂಟಾಗಿದೆ. ಪಕ್ಷದ ಹಿರಿಯ ನಾಯಕ ಕೈಲಾಶ್ ಗಹ್ಲೋಟ್ ಅವರು ಪಕ್ಷ ಹಾಗೂ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಕೈಲಾಶ್ ಗೆಹ್ಲೋಟ್ ಅವರು ಗೃಹ, ಸಾರಿಗೆ, ಐಟಿ ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸೇರಿದಂತೆ ದಿಲ್ಲಿ ಸರಕಾರದಲ್ಲಿ ಪ್ರಮುಖ ಖಾತೆಗಳನ್ನು ನಿಭಾಯಿಸುತ್ತಿದ್ದರು.
ಎಎಪಿ ಸಂಚಾಲಕ ಅರವಿಂದ್ ಕೇಜ್ರಿವಾಲ್ ಅವರಿಗೆ ಈ ಕುರಿತು ಕೈಲಾಶ್ ಗಹ್ಲೋಟ್ ರಾಜೀನಾಮೆ ಪತ್ರವನ್ನು ಬರೆದಿದ್ದಾರೆ.
ಪತ್ರದಲ್ಲಿ ಪಕ್ಷದಲ್ಲಿನ ಗಂಭೀರ ಸವಾಲುಗಳನ್ನುಸೂಚಿಸಿದ್ದಾರೆ. ಇದಲ್ಲದೆ, ಎಎಪಿ ದೆಹಲಿ ಜನರಿಗೆ ನೀಡಿದ್ದ ಅನೇಕ ಭರವಸೆಗಳನ್ನು ಈಡೇರಿಸಿಲ್ಲ ಎಂದು ಉಲ್ಲೇಖಿಸಿದ್ದಾರೆ.
ಉದಾಹರಣೆಗೆ ಯಮುನಾ ನದಿಯನ್ನು ತೆಗೆದುಕೊಳ್ಳಿ, ನಾವು ಯಮುನಾ ನದಿಯನ್ನು ಶುದ್ಧ ನದಿಯಾಗಿ ಮಾರ್ಪಾಡು ಮಾಡುತ್ತೇವೆ ಎಂದು ಭರವಸೆ ನೀಡಿದ್ದೆವು. ಆದರೆ, ಅದನ್ನು ಮಾಡಲು ಸಾಧ್ಯವಾಗಲಿಲ್ಲ. ಈಗ ಯಮುನಾ ನದಿಯು ಮೊದಲಿಗಿಂತ ಹೆಚ್ಚು ಕಲುಷಿತವಾಗಿದೆ ಎಂದು ಬರೆದಿದ್ದಾರೆ.
ಎಎಪಿ ಜನರ ಹಕ್ಕುಗಳಿಗಾಗಿ ಹೋರಾಡುವ ಬದಲು ತನ್ನದೇ ಕಾರ್ಯಸೂಚಿಗಾಗಿ ಹೋರಾಡುವುದರಲ್ಲಿ ನಿರತವಾಗಿದೆ, ಇದು ದೆಹಲಿ ಜನರಿಗೆ ಮೂಲಭೂತ ಸೇವೆಗಳನ್ನು ಒದಗಿಸುವ ನಮ್ಮ ಸಾಮರ್ಥ್ಯವನ್ನು ತೀವ್ರವಾಗಿ ದುರ್ಬಲಗೊಳಿಸಿದೆ. ಸರ್ಕಾರವು ತನ್ನ ಬಹುಪಾಲು ಸಮಯವನ್ನು ಕೇಂದ್ರದೊಂದಿಗೆ ಹೋರಾಡುತ್ತಿದ್ದರೆ, ನಿಜವಾದ ಪ್ರಗತಿ ಸಾಧ್ಯವಿಲ್ಲ ಎಂಬುದು ಈಗ ಸ್ಪಷ್ಟವಾಗುತ್ತಿದೆ.
ನಾನು ದೆಹಲಿಯ ಜನರಿಗೆ ಸೇವೆ ಸಲ್ಲಿಸುವ ಬದ್ಧತೆಯೊಂದಿಗೆ ನನ್ನ ರಾಜಕೀಯ ಪ್ರಯಾಣವನ್ನು ಪ್ರಾರಂಭಿಸಿದ್ದೇನೆ. ಅದನ್ನು ಮುಂದುವರಿಸಲು ಬಯಸುತ್ತೇನೆ. ಹೀಗಾಗಿಯೇ ಎಎಪಿಯಿಂದ ಹಿಂದೆ ಸರಿಯುವುದನ್ನು ಬಿಟ್ಟು ಬೇರೆ ದಾರಿಯಿಲ್ಲ. ಆದ್ದರಿಂದ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡುತ್ತಿದ್ದೇನೆ. ಆಮ್ ಆದ್ಮಿ ಪಕ್ಷವು ನಿಮ್ಮ ಆರೋಗ್ಯ ಮತ್ತು ಭವಿಷ್ಯಕ್ಕಾಗಿ ನಾನು ಶುಭ ಹಾರೈಸುತ್ತೇನೆಂದು ತಿಳಿಸಿದ್ದಾರೆ.