ಗುಜರಾತ್: ಗುಜರಾತ್‌ನ ಭರೂಚ್ ಜಿಲ್ಲೆಯಲ್ಲಿ ಖಾಸಗಿ ವ್ಯಾನ್ ವೊಂದು ನಿಂತಿದ್ದ ಟ್ರಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ಮೂವರು ಮಕ್ಕಳು ಸೇರಿದಂತೆ ಆರು ಮಂದಿ ಸಾವನ್ನಪ್ಪಿದ್ದು, ನಾಲ್ವರು ಗಾಯಗೊಂಡಿದ್ದಾರೆ ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ.
ವೇದಾಚ್ ಗ್ರಾಮದ 10 ಜನರು ಶುಕ್ಲತೀರ್ಥ ಕಡೆಗೆ ಹೋಗುತ್ತಿದ್ದಾಗ ಸೋಮವಾರ ರಾತ್ರಿ 11 ಗಂಟೆ ಸುಮಾರಿಗೆ ಮಗ್ನಾಡ್ ಗ್ರಾಮದ ಬಳಿಯ ಜಂಬೂಸರ್-ಅಮೋದ್ ರಸ್ತೆಯಲ್ಲಿ ಈ ಅಪಘಾತ ಸಂಭವಿಸಿದೆ ಎಂದು ಜಂಬೂಸರ್ ಪೊಲೀಸ್ ಠಾಣೆ ಇನ್ಸ್‌ಪೆಕ್ಟರ್ ಎವಿ ಪನಾಮಿಯಾ ತಿಳಿಸಿದ್ದಾರೆ.
"ಪ್ಯಾಸೆಂಜರ್ ವ್ಯಾನ್ ಮಗ್ನಾಡ್ ಗ್ರಾಮದ ಬಳಿ ರಸ್ತೆಯ ಎಡ ಲೇನ್‌ನಲ್ಲಿ ನಿಂತಿದ್ದ ಟ್ರಕ್‌ಗೆ ಡಿಕ್ಕಿ ಹೊಡೆದಿದೆ. ಭೀಕರ ಅಪಘಾತದಲ್ಲಿ ಆರು ಪ್ರಯಾಣಿಕರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಮತ್ತು ನಾಲ್ವರು ಗಾಯಗೊಂಡಿದ್ದಾರೆ. ಗಾಯಗೊಂಡವರನ್ನು ಜಂಬೂಸರ್‌ನ ಆಸ್ಪತ್ರೆಗೆ ದಾಖಲಿಸಲಾಗಿದೆ" ಎಂದು ಪನಾಮಿಯಾ ಹೇಳಿದ್ದಾರೆ.
ಮೃತರನ್ನು ಜಯದೇವ್ ಗೋಹಿಲ್(23), ಸರಸ್ವತಿ ಗೋಹಿಲ್(21), ಹಂಸಾ ಜಾದವ್(35), ಸಂಧ್ಯಾ ಜಾದವ್ (11), ವಿವೇಕ್ ಗೋಹಿಲ್ (16) ಮತ್ತು ಕೀರ್ತಿ ಗೋಹಿಲ್(6) ಎಂದು ಗುರುತಿಸಲಾಗಿದೆ.
ಘಟನೆಯ ನಂತರ, ಜಂಬೂಸರ್ ಪೊಲೀಸರು ಟ್ರಕ್‌ನ ಅಪರಿಚಿತ ಚಾಲಕನ ವಿರುದ್ಧ ಭಾರತೀಯರ ಸೆಕ್ಷನ್ 125(ಮಾನವ ಜೀವಕ್ಕೆ ಅಪಾಯವನ್ನುಂಟುಮಾಡುವ ದುಡುಕಿನ ಅಥವಾ ನಿರ್ಲಕ್ಷ್ಯದ ಕೃತ್ಯಗಳು) ಮತ್ತು 285 (ಸಾರ್ವಜನಿಕ ಮಾರ್ಗ ಅಥವಾ ಸಂಚಾರ ಮಾರ್ಗದಲ್ಲಿ ಅಪಾಯ ಅಥವಾ ಅಡಚಣೆ ಉಂಟು ಮಾಡುವುದು) ಅಡಿಯಲ್ಲಿ ಎಫ್‌ಐಆರ್ ದಾಖಲಿಸಿದ್ದಾರೆ.
ಟ್ರಕ್ ಚಾಲಕನನ್ನು ಇನ್ನೂ ಬಂಧಿಸಿಲ್ಲ ಎಂದು ಅವರು ಹೇಳಿದ್ದಾರೆ.
Advertisement