Jama Masjid Row: ಡಿಸೆಂಬರ್ 10ರವರೆಗೆ ಸಂಭಾಲ್ ಗೆ ಹೊರಗಿನವರಿಗೆ ಪ್ರವೇಶ ನಿಷೇಧ!
ಸಂಭಾಲ್: ಜಾಮಾ ಮಸೀದಿ ವಿಚಾರಕ್ಕೆ ಸಂಬಂಧಿಸಿದಂತೆ ಸಂಭಾಲ್ ಜಿಲ್ಲೆಯಲ್ಲಿ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ಸಂಭಾಲ್ ಜಿಲ್ಲಾಡಳಿತ ಶನಿವಾರ ಡಿಸೆಂಬರ್ 10ರವರೆಗೆ ಹೊರಗಿನವರ ಪ್ರವೇಶವನ್ನು ನಿಷೇಧಿಸಿದೆ.
ಡಿಸೆಂಬರ್ 10 ರವರೆಗೆ ಸಕ್ಷಮ ಪ್ರಾಧಿಕಾರದ ಅನುಮತಿ ಪಡೆಯದೆ ಯಾವುದೇ ಹೊರಗಿನವರು, ಯಾವುದೇ ಸಾಮಾಜಿಕ ಸಂಘಟನೆ ಅಥವಾ ಯಾವುದೇ ಸಾರ್ವಜನಿಕ ಪ್ರತಿನಿಧಿಗಳು ಜಿಲ್ಲೆಯ ಗಡಿಯನ್ನು ಪ್ರವೇಶಿಸುವಂತಿಲ್ಲ ಎಂದು ಸಂಭಾಲ್ ಜಿಲ್ಲಾಧಿಕಾರಿ ರಾಜೇಂದ್ರ ಪೆನ್ಸಿಯಾ ಹೇಳಿಕೆ ನೀಡಿದ್ದಾರೆ.
ಶಾಹಿ ಜಾಮಾ ಮಸೀದಿ ಸಂಕೀರ್ಣದಲ್ಲಿ ನಡೆದ ಹಿಂಸಾಚಾರದ ಬಗ್ಗೆ ಮಾಹಿತಿ ಸಂಗ್ರಹಿಸಲು ಸಮಾಜವಾದಿ ಪಕ್ಷದ 15 ಸದಸ್ಯರ ನಿಯೋಗ ಸಂಭಾಲ್‌ಗೆ ಭೇಟಿ ನೀಡಲಿರುವ ದಿನದಂದು ಈ ಕ್ರಮವು ಮಹತ್ವವನ್ನು ಪಡೆದುಕೊಂಡಿದೆ.
15 ಸದಸ್ಯರ ಎಸ್‌ಪಿ ನಿಯೋಗದ ನೇತೃತ್ವ ವಹಿಸಲಿರುವ ಉತ್ತರ ಪ್ರದೇಶ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಮಾತಾ ಪ್ರಸಾದ್ ಪಾಂಡೆ ಅವರು ಲಕ್ನೋದಲ್ಲಿನ ತಮ್ಮ ನಿವಾಸದ ಹೊರಗೆ ಸುದ್ದಿಗಾರರೊಂದಿಗೆ ಮಾತನಾಡಿ, ಗೃಹ ಕಾರ್ಯದರ್ಶಿ ಸಂಜಯ್ ಪ್ರಸಾದ್ ಅವರು ತಮಗೆ ಕರೆ ಮಾಡಿ ಸಂಭಾಲ್‌ಗೆ ಭೇಟಿ ನೀಡದಂತೆ ವಿನಂತಿಸಿದ್ದಾರೆ ಎಂದು ಹೇಳಿದರು.
"ಡಿಎಂ ಸಂಭಾಲ್ ಕೂಡ ನನಗೆ ಕರೆ ಮಾಡಿ ಹೊರಗಿನವರ ಪ್ರವೇಶ ನಿಷೇಧವನ್ನು ಡಿಸೆಂಬರ್ 10 ರವರೆಗೆ ವಿಸ್ತರಿಸಲಾಗಿದೆ ಎಂದು ಹೇಳಿದ್ದರು. ಹಾಗಾಗಿ ನಾನು ಈಗ ಪಕ್ಷದ ಕಚೇರಿಗೆ ಭೇಟಿ ನೀಡಿ ನಮ್ಮ ಮುಂದಿನ ಕ್ರಮವನ್ನು ಚರ್ಚಿಸಿ ನಿರ್ಧರಿಸುತ್ತೇವೆ ಎಂದು ಪಾಂಡೆ ಹೇಳಿದರು.
"ನಮ್ಮ ಭೇಟಿಯು ತನ್ನ ಹಲವಾರು ತಪ್ಪುಗಳನ್ನು ಬಹಿರಂಗಪಡಿಸಬಹುದಾದ್ದರಿಂದ ಸಂಭಾಲ್‌ನಲ್ಲಿ ತನ್ನ ತಪ್ಪುಗಳನ್ನು ಮರೆಮಾಡಲು ಸರ್ಕಾರವು ನನ್ನನ್ನು ತಡೆಯಲು ಬಯಸಿದೆ" ಎಂದು ಅವರು ಹೇಳಿದರು.
ಶುಕ್ರವಾರ ರಾತ್ರಿಯಿಂದಲೇ ಪಾಂಡೆ ನಿವಾಸದ ಹೊರಗೆ ಭಾರೀ ಭದ್ರತೆಯನ್ನು ನಿಯೋಜಿಸಲಾಗಿತ್ತು.