ಸೆಮಿಕಂಡಕ್ಟರ್ ಘಟಕ ಕುರಿತು ಪ್ರಿಯಾಂಕ್ ಖರ್ಗೆ ಆಕ್ಷೇಪ; ಅಸ್ಸಾಂ ಬಿಜೆಪಿ ಶಾಸಕರ ಪ್ರತಿಭಟನೆ
ಮೊರಿಗಾಂವ್: ಅಸ್ಸಾಂನ ಜಾಗಿರೋಡ್ ನಲ್ಲಿ ರೂ.27,000 ಕೋಟಿ ಮೊತ್ತದ ಸೆಮಿ ಕಂಡಕ್ಟರ್ ಘಟಕ ಸ್ಥಾಪನೆಗೆ ಆಕ್ಷೇಪ ವ್ಯಕ್ತಪಡಿಸಿರುವ ಆರೋಪದ ಮೇಲೆ ಕರ್ನಾಟಕದ ಐಟಿ ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಮಂಗಳವಾರ ಅನೇಕ ಬಿಜೆಪಿ ಶಾಸಕರ ನೇತೃತ್ವದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು. ಜಾಗಿರೋಡ್ ಶಾಸಕ ಮತ್ತು ಕ್ಯಾಬಿನೆಟ್ ಸಚಿವ ಪಿಜೂಷ್ ಹಜಾರಿಕಾ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಸುಮಾರು 10 ಮಂದಿ ಬಿಜೆಪಿ ಶಾಸಕರು ಪಾಲ್ಗೊಂಡರು.
ಅಸ್ಸಾಂನಲ್ಲಿ ಸೆಮಿಕಂಡಕ್ಟರ್ ಘಟಕ ಸ್ಥಾಪನೆಯಾಗುತ್ತಿರುವುದು ಕಾಂಗ್ರೆಸ್ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಅವರು ಟೀಕಿಸಿದರು. ಪ್ರಿಯಾಂಕ್ ಖರ್ಗೆ ಅಸೂಯೆ ಪಟ್ಟಿದ್ದಾರೆ ಮತ್ತು ಕಾಂಗ್ರೆಸ್ ಅಧಿಕಾರಾವಧಿಯಲ್ಲಿ ಸಾಧಿಸಲಾಗದ್ದು ಈಗಲೂ ಆಗಬಾರದು ಎಂಬುದು ಅವರ ಬಯಕೆಯಾಗಿದೆ ಎಂದು ಹಜಾರಿಕಾ ಹೇಳಿದರು.
ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಪುತ್ರ ಪ್ರಿಯಾಂಕ್ ಖರ್ಗೆ, ಇತ್ತೀಚೆಗೆ ಸಂದರ್ಶನವೊಂದರಲ್ಲಿ, ರಾಜಕೀಯ ಪ್ರಭಾವದಿಂದಾಗಿ ಗುಜರಾತ್ ಮತ್ತು ಅಸ್ಸಾಂನಲ್ಲಿ ಸೆಮಿಕಂಡಕ್ಟರ್ ಘಟಕಗಳು ಸ್ಥಾಪನೆಯಾಗುತ್ತಿವೆ ಎಂದು ಹೇಳಿದ್ದರು.
ಐದು ಸೆಮಿಕಾನ್ ಉತ್ಪಾದನಾ ಘಟಕಗಳ ಪೈಕಿ ನಾಲ್ಕು ಗುಜರಾತ್‌ನಲ್ಲಿದ್ದು, ಒಂದು ಅಸ್ಸಾಂನಲ್ಲಿ ಸ್ಥಾಪನೆಯಾಗುತ್ತಿದೆ. ಆದರೆ ಅಲ್ಲಿ ಅವರಿಗೆ ಸೂಕ್ತ ಕೌಶಲ್ಯಗಳ ವ್ಯವಸ್ಥೆ ಇಲ್ಲ. ಸಂಶೋಧನಾ ಪರಿಸರ ವ್ಯವಸ್ಥೆ ಇಲ್ಲ. ಅವರು ನಾವೀನ್ಯತೆಯ ಪರಿಸರ ವ್ಯವಸ್ಥೆಯನ್ನು ಹೊಂದಿಲ್ಲ. ಶೇ.70 ರಷ್ಟು ಚಿಪ್ ಡಿಸೈನಿಂಗ್ ಪ್ರತಿಭೆಗಳು ಕರ್ನಾಟಕದಲ್ಲಿ ಇರುವಾಗ ರಾಜಕೀಯ ಪ್ರಭಾವ ಬಳಸಿಕೊಂಡು ಕೇಂದ್ರ ಸರ್ಕಾರ ಬೇರೊಂದು ರಾಜ್ಯಕ್ಕೆ ಏಕೆ ತಳ್ಳುತ್ತದೆ ಎಂದು ನನಗೆ ಅರ್ಥವಾಗುತ್ತಿಲ್ಲ. ಅದು ಅನ್ಯಾಯ ಎಂದು ಪ್ರಿಯಾಂಕ್ ಖರ್ಗೆ ಹೇಳಿದ್ದರು. ಸಂದರ್ಶನದಲ್ಲಿನ ಹೇಳಿಕೆಗಳನ್ನು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಹಂಚಿಕೊಂಡಿದ್ದರು.
ಪ್ರಿಯಾಂಕ್ ಖರ್ಗೆ ಅವರ ಹೇಳಿಕೆ ಅಸ್ಸಾಂ ರಾಜ್ಯದ ಜನರನ್ನು ಅಪಮಾನಿಸಿದ್ದು, ಅವರು ಕೂಡಲೇ ರಾಜೀನಾಮೆ ನೀಡಬೇಕು. ಇಲ್ಲವಾದಲ್ಲಿ ಅಸ್ಸಾಂ ಕಾಂಗ್ರೆಸ್ ಅಧ್ಯಕ್ಷ ಭೂಪೇನ್ ಕುಮಾರ್ ಬೋರಾಹ್ ಮತ್ತು ಸಂಸದ ಗೌರವ್ ಗೊಗೋಯ್ ಕ್ಷಮೆಯಾಚಿಸಬೇಕು ಎಂದು ಹಜಾರಿಕಾ ಆಗ್ರಹಿಸಿದರು. ಅಸ್ಸಾಂ ಮುಖ್ಯಮಂತ್ರಿ ಹಿಮಾಂತ ಬಿಸ್ವಾ ಶರ್ಮಾ ಕೂಡಾ ಈ ಹಿಂದೆ ಪ್ರಿಯಾಂಕ್ ಖರ್ಗೆ ಹೇಳಿಕೆಯನ್ನು ಖಂಡಿಸಿದ್ದರು. ಅಸ್ಸಾಂ ಅಭಿವೃದ್ಧಿಯನ್ನು ವಿರೋಧಿಸುವ ಮೂಲಕ ಕಾಂಗ್ರೆಸ್ ತನ್ನ ನಿಜ ಬಣ್ಣವನ್ನು ತೋರಿಸಿದೆ ಎಂದು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಅವರು ಟೀಕಾ ಪ್ರಹಾರ ನಡೆಸಿದ್ದರು.

