ಪಾಟ್ನಾ: ಬಿಹಾರ ಮಾಜಿ ಉಪಮುಖ್ಯಮಂತ್ರಿ ಹಾಗೂ ಆರ್ ಜೆಡಿ ನಾಯಕ ತೇಜಸ್ವಿ ಯಾದವ್ ತೆರವು ಮಾಡಿದ್ದ ಸರ್ಕಾರ ಬಂಗಲೆಯಲ್ಲಿನ ಹಲವು ದುಬಾರಿ ವಸ್ತುಗಳು ನಾಪತ್ತೆಯಾಗಿವೆ ಎಂದು ಬಿಜೆಪಿ ಆರೋಪಿಸಿದೆ.
ತೇಜಸ್ವಿ ಯಾದವ್(Tejaswi Yadav) ಅವರು ತೆರವುಗೊಳಿಸಿರುವ ಅಧಿಕೃತ ಬಂಗಲೆಯಲ್ಲಿ ಸೋಫಾಗಳು, ನೀರಿನ ನಲ್ಲಿಗಳು, ವಾಶ್ ಬೇಸಿನ್‌ಗಳು, ಹವಾನಿಯಂತ್ರಣಗಳು(AC), ವಿದ್ಯುತ್ ಅಲಂಕಾರಿಕ ದೀಪಗಳು, ಹಾಸಿಗೆಗಳು ಕಾಣೆಯಾಗಿವೆ. ಆ ವಸ್ತುಗಳು ಕಳ್ಳತನವಾಗಿದೆ ಎಂದು ಬಿಜೆಪಿ(BJP) ಆರೋಪಿಸಿದೆ.
ಮಾತ್ರವಲ್ಲದೇ ತೇಜಸ್ವಿ ಯಾದವ್ ಅವರ ರಾಷ್ಟ್ರೀಯ ಜನತಾ ದಳ ಅಥವಾ ಆರ್‌ಜೆಡಿ ಪಕ್ಷವು ತಕ್ಷಣ ಆ ವಸ್ತುಗಳನ್ನು ಮರಳಿಸಬೇಕೆಂದು ಪಟ್ಟು ಹಿಡಿದಿದೆ.
ಸಿಎಂ ನಿತೀಶ್ ಕುಮಾರ್ ಅವರ ಜೆಡಿಯು ಪಕ್ಷವು ಮೈತ್ರಿಯಲ್ಲಿದ್ದಾಗ ಅವರು ಹೊಂದಿದ್ದ 5 ದೇಶ್ರತಾನ್ ರಸ್ತೆಯಲ್ಲಿರುವ ಬಂಗಲೆಯನ್ನು ತೇಜಸ್ವಿ ಯಾದವ್ ಅವರು ಖಾಲಿ ಮಾಡಿದ್ದಾರೆ. ಪ್ರಸ್ತುತ ಉಪಮುಖ್ಯಮಂತ್ರಿಯಾಗಿರುವ ಸಾಮ್ರಾಟ್ ಚೌಧರಿ ವಿಜಯದಶಮಿಯ ಶುಭ ಸಂದರ್ಭದಲ್ಲಿ ಹೊಸ ಮನೆಗೆ ತೆರಳಲಿದ್ದು, ಇದಕ್ಕೂ ಮುನ್ನವೇ ಡಿಸಿಎಂ ನಿವಾಸದ ವಸ್ತುಗಳು ಕಳ್ಳತನವಾಗಿವೆ ಎಂದು ಬಿಜೆಪಿ ನಾಯಕರು ಆರೋಪಿಸಿದ್ದಾರೆ.
ಸಾಮ್ರಾಟ್ ಚೌಧರಿ ಅವರ ಆಪ್ತ ಕಾರ್ಯದರ್ಶಿ ಶತ್ರುಘ್ನ ಪ್ರಸಾದ್ ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದು, 'ಉಪಮುಖ್ಯಮಂತ್ರಿಯವರ ಮನೆಯಲ್ಲಿ ಯಾವ ರೀತಿ ಕಳ್ಳತನವಾಗಿದೆ. ಅಲ್ಲಿ ಎರಡು ಹೈಡ್ರಾಲಿಕ್ ಬೆಡ್‌ಗಳು, ಅತಿಥಿಗಳಿಗಾಗಿ ಸೋಫಾ ಸೆಟ್‌ಗಳು ಇದ್ದವು.
ಆ ಎಲ್ಲಾ ವಸ್ತುಗಳು ಕಾಣೆಯಾಗಿವೆ. 20ಕ್ಕೂ ಹೆಚ್ಚು ಸ್ಪ್ಲಿಟ್ ಎಸಿಗಳು ಕಾಣೆಯಾಗಿವೆ. ಅಲ್ಲದೆ ಆಪರೇಟಿಂಗ್ ಕೋಣೆಯಲ್ಲಿ ಕಂಪ್ಯೂಟರ್ ಅಥವಾ ಕುರ್ಚಿ ಇಲ್ಲ, ಅಡುಗೆಮನೆಯಲ್ಲಿ ಫ್ರಿಜ್ ಇಲ್ಲ. ಗೋಡೆಗಳಿಂದ ಲೈಟ್‌ಗಳನ್ನು ತೆಗೆಯಲಾಗಿದೆ ಎಂದು ಆರೋಪಿಸಿದ್ದಾರೆ.
ಉಪಮುಖ್ಯಮಂತ್ರಿ ಅವರ ಸರ್ಕಾರಿ ಭವನದಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ, ಆದಾಗ್ಯೂ, ಕ್ಯಾಮೆರಾಗಳ ಹಾರ್ಡ್ ಡ್ರೈವ್ ಸಹ ಕಾಣೆಯಾಗಿದೆ ಎಂದು ಡ್ಯಾನಿಶ್ ಇಕ್ಬಾಲ್ ಹೇಳಿದ್ದಾರೆ.
ಆರೋಪ ಸುಳ್ಳು ಎಂದ ಆರ್ ಜೆಡಿ
ಇನ್ನು ಬಿಜೆಪಿ ಆರೋಪಿಯನ್ನು ಆರ್ ಜೆಡಿ ಅಲ್ಲಗಳೆದಿದ್ದು, 'ಭವನ ನಿರ್ಮಾಣ ವಿಭಾಗದಿಂದ ಪಡೆದ ಸೂಕ್ತ ದಾಖಲೆಯನ್ನು ಬಿಜೆಪಿ ನೀಡಬೇಕು. ಒಂದು ವೇಳೆ ಆರೋಪ ಸುಳ್ಳು ಎಂಬುದು ಸಾಬೀತಾದರೆ ತಕ್ಷಣ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದೆ. ಆರ್‌ಜೆಡಿಯ ರಾಷ್ಟ್ರೀಯ ವಕ್ತಾರ ಶಕ್ತಿ ಯಾದವ್ ಮಾತನಾಡಿ, ಬಿಹಾರ ವಿಧಾನಸಭೆಯ ಪ್ರತಿಪಕ್ಷದ ನಾಯಕ ತೇಜಸ್ವಿ ಯಾದವ್ ಅವರು 5 ದೇಶತನ್ ಮಾರ್ಗ್ ಬಂಗಲೆಯನ್ನು ಖಾಲಿ ಮಾಡಿದ್ದಾರೆ. ನಮ್ಮ ಬಳಿ ಈ ಸಂಬಂಧ ಎಲ್ಲಾ ಪುರಾವೆಗಳಿವೆ. ವಸ್ತುಗಳ ಕಳ್ಳತನವಾಗಿದೆ ಎಂಬುದಕ್ಕೆ ದಾಖಲೆ ಬಿಡುಗಡೆ ಮಾಡಿ ಎಂದು ಸವಾಲು ಹಾಕಿದ್ದಾರೆ.
Advertisement