
ನವದೆಹಲಿ: ಬಿಜೆಪಿಗೆ ಇದು ಐತಿಹಾಸಿಕ ಗೆಲುವಾಗಿದ್ದು, ಹರ್ಯಾಣದಲ್ಲಿ ಮೊದಲ ಬಾರಿಗೆ ಪಕ್ಷವೊಂದು 3ನೇ ಬಾರಿಗೆ ಅಧಿಕಾರಕ್ಕೇರಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಎಲ್ಲ ಚುನಾವಣೋತ್ತರ ಸಮೀಕ್ಷೆಗಳ ವರದಿ ಉಲ್ಟಾಹೊಡೆಯುವಂತೆ ಹರ್ಯಾಣದಲ್ಲಿ ಚುನಾವಣಾ ಫಲಿತಾಂಶ ಬಂದಿದ್ದು, ಮೊದಲ ಬಾರಿಗೆ ಪಕ್ಷವೊಂದು 3ನೇ ಬಾರಿಗೆ ಅಧಿಕಾರಕ್ಕೇರಿದೆ.
ಇದೇ ಖುಷಿಯಲ್ಲಿ ಬಿಜೆಪಿ ನಾಯಕರು ದೆಹಲಿಯ ಬಿಜೆಪಿ ಕೇಂದ್ರ ಕಚೇರಿಯಲ್ಲಿ ಸಂಭ್ರಮಾಚರಣೆ ಮಾಡಿದ್ದು, ಈ ಸಂಭ್ರಮಾಚರಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಸಚಿವ ಅಮಿತ್ ಶಾ ಸೇರಿದಂತೆ ಇತರೆ ನಾಯಕರು ಪಾಲ್ಗೊಂಡಿದ್ದರು.
ಬಳಿಕ ಪ್ರಧಾನಿ ನರೇಂದ್ರ ಮೋದಿ, ಕಾರ್ಯಕರ್ತರನ್ನುದ್ದೇಶಿಸಿ ಭಾಷಣ ಮಾಡಿದ್ದು, 'ಬಿಜೆಪಿಗೆ ಇದು ಐತಿಹಾಸಿಕ ಗೆಲುವಾಗಿದ್ದು, ಹರ್ಯಾಣದಲ್ಲಿ ಮೊದಲ ಬಾರಿಗೆ ಪಕ್ಷವೊಂದು 3ನೇ ಬಾರಿಗೆ ಅಧಿಕಾರಕ್ಕೇರಿದೆ' ಎಂದು ಹೇಳಿದ್ದಾರೆ.
'1966ರಲ್ಲಿ ಹರಿಯಾಣ ರಚನೆಯಾಗಿದ್ದು, ಈ ವರೆಗೂ 13 ಚುನಾವಣೆಗಳು ನಡೆದಿವೆ. ಈ 13 ಚುನಾವಣೆಗಳ ಪೈಕಿ 10 ಚುನಾವಣೆಯಲ್ಲಿ ಜನರು ಸರ್ಕಾರವನ್ನು ಬದಲಾಯಿಸಿದ್ದಾರೆ. ಆದರೆ ಕಳೆದ ಮೂರು ಚುನಾವಣೆಗಳಲ್ಲಿ ಆ ಬದಲಾವಣೆ ಆಗಿಲ್ಲ.
ಹರ್ಯಾಣದಲ್ಲಿ ಸರ್ಕಾರವೊಂದು ಎರಡು ಬಾರಿ ಅಧಿಕಾರ ಪಡೆದು ಮೂರನೇ ಬಾರಿಗೆ ಗೆದ್ದಿರುವುದು ಇದೇ ಮೊದಲು. ಹರಿಯಾಣದ ಜನರು ನಮ್ಮನ್ನು ಗೆಲ್ಲಿಸಿದ್ದು ಮಾತ್ರವಲ್ಲದೆ ನಮಗೆ ಹೆಚ್ಚಿನ ಸ್ಥಾನಗಳನ್ನು ಮತ್ತು ಹೆಚ್ಚಿನ ಮತ ಹಂಚಿಕೆಯನ್ನು ನೀಡಿದ್ದಾರೆ. ಅವರು ಮನಃಪೂರ್ವಕವಾಗಿ ನಮಗೆ ಮತ ಹಾಕಿದ್ದಾರೆ ಎಂದು ಹೇಳಿದರು.
ಹರ್ಯಾಣ ಗೆಲುವು ದೇಶದಾದ್ಯಂತ ಪ್ರತಿಧ್ವನಿಸಲಿದೆ
ಹರಿಯಾಣ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯ ಗೆಲುವು ಅಭಿವೃದ್ಧಿ ಮತ್ತು ಉತ್ತಮ ಆಡಳಿತದ ರಾಜಕೀಯದ ಗೆಲುವಾಗಿದ್ದು, ಹರಿಯಾಣದ ಜನರು ಅದ್ಭುತ ಫಲಿತಾಂಶವನ್ನು ನೀಡಿದ್ದಾರೆ. ಇಂದು ನವರಾತ್ರಿಯ ಆರನೇ ದಿನ. ಮಾತಾ ಕಾತ್ಯಾಯನಿಯ ದಿನ. ಮಾತಾ ಕಾತ್ಯಾಯನಿ ಕೈಯಲ್ಲಿ ಕಮಲ ಹಿಡಿದು ಸಿಂಹದ ಮೇಲೆ ಕುಳಿತಿದ್ದಾಳೆ. ಅವಳು ನಮ್ಮೆಲ್ಲರನ್ನು ಆಶೀರ್ವದಿಸುತ್ತಿದ್ದಾಳೆ. ಇಂತಹ ಪವಿತ್ರ ದಿನದಂದು ಹರಿಯಾಣದಲ್ಲಿ ಮೂರನೇ ಬಾರಿಗೆ ಕಮಲ ಅರಳಿದೆ. ಹರಿಯಾಣದಲ್ಲಿ ಕೇಸರಿ ಪಕ್ಷದ ಗೆಲುವು “ದೇಶದಾದ್ಯಂತ ಪ್ರತಿಧ್ವನಿಸಲಿದೆ” ಎಂದು ಮೋದಿ ಸಂತಸ ವ್ಯಕ್ತಪಡಿಸಿದರು.
ಅಧಿಕಾರ ಇಲ್ಲದೇ ನೀರಿನಿಂದ ಹೊರ ಬಿದ್ದ ಮೀನಿನಂತಾಗಿದೆ ಕಾಂಗ್ರೆಸ್
ಅಂತೆಯೇ ಕಾಂಗ್ರೆಸ್ ಹೆಸರು ಹೇಳದೇ ಆ ಪಕ್ಷದ ವಿರುದ್ಧ ಕಿಡಿಕಾರಿದ ಪ್ರಧಾನಿ ಮೋದಿ, 'ಭಾರತದ ಆರ್ಥಿಕತೆ, ಪ್ರಜಾಪ್ರಭುತ್ವ ಮತ್ತು ಸಾಮಾಜಿಕ ರಚನೆಯನ್ನು ದುರ್ಬಲಗೊಳಿಸಲು ಜಾಗತಿಕ ಪಿತೂರಿಗಳನ್ನು ರೂಪಿಸಲಾಗುತ್ತಿದೆ. ಈ ಪ್ರಯತ್ನದಲ್ಲಿ ಕಾಂಗ್ರೆಸ್ ಮತ್ತು ಅದರ ಮಿತ್ರಪಕ್ಷಗಳು ಭಾಗಿಯಾಗಿವೆ. ಚುನಾವಣಾ ಆಯೋಗ, ಪೊಲೀಸ್, ನ್ಯಾಯಾಂಗ ಸೇರಿದಂತೆ ದೇಶದ ಪ್ರಮುಖ ಸಂಸ್ಥೆಗಳ ಪ್ರತಿಷ್ಠೆಗೆ ಧಕ್ಕೆ ತರುವ ಪ್ರಯತ್ನವನ್ನು ಕಾಂಗ್ರೆಸ್ ಮಾಡುತ್ತಿದೆ ಎಂದು ಟೀಕಿಸಿದ್ದಾರೆ.
ಮೊದಲು ಕಾಂಗ್ರೆಸ್ ಕೆಲಸ ಮಾಡದರೂ, ಮಾಡಿದಿದ್ದರೂ ಜನರು ಮತ ಕೊಡ್ತಾರೆ ಅನ್ನುವ ಮನಸ್ಥಿತಿ ಇತ್ತು. ಸರ್ಕಾರ ತಮ್ಮ ಜನ್ಮಸಿದ್ಧ ಹಕ್ಕು ಎಂದು ಭಾವಿಸುತ್ತಿತ್ತು. ಅಧಿಕಾರ ಇಲ್ಲದೇ ನೀರಿನಿಂದ ಹೊರ ಬಿದ್ದ ಮೀನಿನಂತೆ ಕಾಂಗ್ರೆಸ್ ಆಗಿದೆ. ಈಗ ಅವರ ಪರಿಸ್ಥಿತಿ ಬದಲಾಗಿದೆ. ಕಾಂಗ್ರೆಸ್ ಹೇಗೆ ವಿಷ ಬೀಜ ಬಿತ್ತಿದೆ ಎಂದು ಇಡೀ ದೇಶವೇ ನೋಡಿದೆ. ಹಲವು ತಲೆಮಾರುಗಳನ್ನು ಜಾತಿ ಹೆಸರಿನಲ್ಲಿ ಹೊಡೆದಾಡಲು ಬಿಟ್ಟಿದೆ. ಹಿಂದುಳಿದ ವರ್ಗ, ದಲಿತರ ಮೇಲೆ ಹೆಚ್ಚು ಶೋಷಣೆ ಮಾಡಿದೆ. ಅಧಿಕಾರ ಸಿಕ್ಕಾಗ ಎಂದು ದಲಿತ ಹಿಂದುಳಿದ ವರ್ಗದವರಿಗೆ ಅಧಿಕಾರ ನೀಡಲಿಲ್ಲ. ಕಾಂಗ್ರೆಸ್ ಪರಿವಾರ ದಲಿತ ಹಿಂದುಳಿದ ಆದಿವಾಸಿಗಳನ್ನು ದ್ವೇಷ ಮಾಡುತ್ತದೆ. ಈ ಎಲ್ಲ ವರ್ಗದ ಜನರು ಉನ್ನತ ಸ್ಥಾನಕ್ಕೆ ಹೋಗ್ತಿದ್ದರೆ ಇವರ ಹೊಟ್ಟೆಯಲ್ಲಿ ಇಲಿ ಓಡಾಡುತ್ತವೆ ಎಂದರು.
ಮತ್ತೆ ಗ್ಯಾರಂಟಿ ಕಾಲೆಳದ ಮೋದಿ
ಇದೇ ವೇಳೆ ಮತ್ತೆ ಕಾಂಗ್ರೆಸ್ ಪಕ್ಷದ ಗ್ಯಾರಂಟಿ ಯೋಜನೆಗಳ ಕುರಿತು ಮಾತನಾಡಿದ ಮೋದಿ, 'ಸುಳ್ಳಿನ ರಾಶಿಯ ಮೇಲೆ ಅಭಿವೃದ್ಧಿ ಗ್ಯಾರಂಟಿ ಹೊರೆಯಾಯಿತು. ಹರಿಯಾಣ ಜನರು ಹೊಸ ಇತಿಹಾಸ ರಚಿಸಿದ್ದಾರೆ. 1966 ರಿಂದ ಸತತ ಮೂರನೇ ಬಾರಿಗೆ ಯಾವ ಪಕ್ಷ ಅಧಿಕಾರಕ್ಕೆ ಬಂದಿಲ್ಲ. ದೊಡ್ಡ ದೊಡ್ಡ ಪಕ್ಷಗಳು ಆಡಳಿತ ನಡೆಸಿವೆ. ಇದು ಯಾರಿಗೂ ಸಾಧ್ಯವಾಗಲಿಲ್ಲ. ಹರಿಯಾಣದ ಜನರು ಐದು ವರ್ಷಕ್ಕೊಮ್ಮೆ ಸರ್ಕಾರ ಬದಲಿಸುತ್ತಾರೆ. ಈ ಬಾರಿ ಹರಿಯಾಣದ ಜನರು ಮಾಡಿರುವುದು ಅಭೂತಪೂರ್ವವಾಗಿದೆ ಎಂದು ಹೇಳಿದರು.
ಕಾಶ್ಮೀರ ಜನತೆಗೂ ವಂದನೆಗಳು
ಜಮ್ಮು ಕಾಶ್ಮೀರ ಜನರು ಎನ್‌ಸಿ ಒಕ್ಕೂಟಕ್ಕೆ ಹೆಚ್ಚು ಸ್ಥಾನ ನೀಡಿದ್ದಾರೆ. ಅವರಿಗೂ ನಾನು ಅಭಿನಂದನೆ ಸಲ್ಲಿಸುತ್ತೇನೆ. ಎಷ್ಟು ಪಕ್ಷಗಳು ಚುನಾವಣಾ ಅಖಾಡದಲ್ಲಿದ್ದವು, ಅದರಲ್ಲಿ ಬಿಜೆಪಿ ಹೆಚ್ಚು ಮತ ಪಡೆದಿದೆ. ಅಲ್ಲಿ ಗೆಲವು ಸಾಧಿಸಿದ ಜನರಿಗೆ ಅಭಿನಂದನೆ ಹೇಳುತ್ತೇನೆ. ಎರಡು ರಾಜ್ಯದ ನಮ್ಮ ಕಾರ್ಯಕರ್ತರಿಗೆ ಧನ್ಯವಾದ ಹೇಳ್ತೀವಿ. ಇದು ಕಾರ್ಯಕರ್ತರ ಶ್ರಮದಿಂದ ಗೆಲುವು ಸಾಧ್ಯವಾಗಿದೆ. ನಡ್ಡಾ ಅವರ ತಂಡದ ಗೆಲುವಾಗಿದೆ. ನಮ್ಮ ಸಿಎಂ ಕರ್ತವ್ಯದ ಜಯವಾಗಿದೆ ಎಂದರು.
Advertisement