ನವದೆಹಲಿ: ಮಾದಕವಸ್ತು ಕಳ್ಳಸಾಗಣೆ ವಿರುದ್ಧ ದಾಳಿ ಮುಂದುವರೆಸಿರುವ ದೆಹಲಿ ಪೊಲೀಸರು 2ನೇ ಬಾರಿಗೆ ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಬರೊಬ್ಬರಿ 2 ಸಾವಿರ ಕೋಟಿ ರೂ ಮೌಲ್ಯದ ಮಾದಕವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ.
ದೆಹಲಿ ಪೊಲೀಸ್ ವಿಶೇಷ ಘಟಕವು ಗುರುವಾರ ಮತ್ತೊಂದು ಬೃಹತ್ ಮಾದಕವಸ್ತು ಕಳ್ಳಸಾಗಣೆ ಜಾಲ ಭೇದಿಸಿದ್ದು, ದೆಹಲಿಯ ರಮೇಶ್ ನಗರ ಪ್ರದೇಶದಲ್ಲಿರುವ ಗೋದಾಮಿನಿಂದ 2000 ಕೋಟಿ ರೂ. ಮೌಲ್ಯದ ಸುಮಾರು 200 ಕೆಜಿಗಳಷ್ಟು ಕೊಕೇನ್ ಅನ್ನು ವಶಪಡಿಸಿಕೊಂಡಿದೆ.
ಅಲ್ಲದೆ ತುಷಾರ್ ಗೋಯಲ್ (40), ಹಿಮಾಂಶು ಕುಮಾರ್ (27) ಮತ್ತು ಔರಂಗಜೇಬ್ ಸಿದ್ದಿಕಿ (23) ಮತ್ತು ಭರತ್ ಕುಮಾರ್ ಜೈನ್ (48) ಎಂದು ಗುರುತಿಸಲಾದ ನಾಲ್ವರನ್ನು ಸ್ಥಳದಲ್ಲೇ ಬಂಧಿಸಲಾಗಿದ್ದು, ಇಬ್ಬರನ್ನು ಅಮೃತಸರ ಮತ್ತು ಚೆನ್ನೈನಲ್ಲಿ ಬಂಧಿಸಲಾಗಿದೆ. ಉತ್ತರ ಪ್ರದೇಶದ ಹಾಪುರ್‌ನಲ್ಲಿ ಅಖ್ಲಾಕ್ ಎಂಬ ಮತ್ತೊಬ್ಬ ವ್ಯಕ್ತಿಯನ್ನು ಬೆಳಗ್ಗೆ ಬಂಧಿಸಲಾಗಿದೆ.
ಪೊಲೀಸ್ ಮೂಲಗಳ ಪ್ರಕಾರ, ಬಂಧಿತ ಅಖ್ಲಾಕ್ ಉತ್ತರ ಭಾರತದಲ್ಲಿ ಡ್ರಗ್ಸ್ ಸಾಗಿಸಲು ಪ್ರಮುಖ ಪಾತ್ರ ವಹಿಸಿದ್ದ. 5,620 ಕೋಟಿ ರೂಪಾಯಿಗಳ ಡ್ರಗ್ ಕಾರ್ಟೆಲ್‌ನಲ್ಲಿ ಭಾಗಿಯಾಗಿರುವ ಶಂಕಿತ ಭಾರತೀಯ ಮೂಲದ ದುಬೈ ಮೂಲದ ಉದ್ಯಮಿ ವೀರೇಂದ್ರ ಬಸೋಯಾ ವಿರುದ್ಧ ದೆಹಲಿ ಪೊಲೀಸರು ಲುಕ್‌ಔಟ್ ಸುತ್ತೋಲೆ ಹೊರಡಿಸಿದ್ದಾರೆ.
ಜಿಪಿಎಸ್ ಆಧರಿಸಿ ಕಾರ್ಯಾಚರಣೆ
ಇನ್ನು ಇಂದಿನ ಕಾರ್ಯಾಚರಣೆಯಲ್ಲಿ ಕೊಕೇನ್ ಸಾಗಿಸಲು ಬಳಸಿದ ಕಾರಿನಲ್ಲಿ ಜಿಪಿಎಸ್ ಅಳವಡಿಸಲಾಗಿತ್ತು. ಪೊಲೀಸರು ತಮ್ಮ ಕಾರ್ಯಾಚರಣೆಯನ್ನು ಕೈಗೊಳ್ಳಲು ಜಿಪಿಎಸ್ ಮೂಲಕ ಸ್ಥಳವನ್ನು ಟ್ರ್ಯಾಕ್ ಮಾಡಿ ಡ್ರಗ್ಸ್ ಅನ್ನು ವಶಪಡಿಸಿಕೊಂಡಿದ್ದಾರೆ ಎನ್ನಲಾಗಿದೆ. 'ಕೊಕೇನ್ ಅನ್ನು ದೆಹಲಿಗೆ ತಂದಿದ್ದ ಆರೋಪಿ ಲಂಡನ್‌ಗೆ ಪರಾರಿಯಾಗಿದ್ದು, ದಕ್ಷಿಣ ದೆಹಲಿಯ ಮಹಿಪಾಲ್‌ಪುರದ ಗೋಡೌನ್‌ನಿಂದ ಅಕ್ಟೋಬರ್ 2 ರಂದು 5,620 ಕೋಟಿ ಮೌಲ್ಯದ ಅಂದಾಜು 560 ಕೆಜಿ ಕೊಕೇನ್ ಮತ್ತು 40 ಕೆಜಿ ಹೈಡ್ರೋಪೋನಿಕ್ ಗಾಂಜಾವನ್ನು ವಶಪಡಿಸಿಕೊಂಡ ಬೆನ್ನಲ್ಲೇ ಈ ಕಾರ್ಯಾಚರಣೆ ನಡೆದಿದೆ.
Advertisement