ಮಂಗಳೂರು: ಮಂಗಳೂರಿನ ಇತಿಹಾಸದಲ್ಲೇ ಅತೀ ದೊಡ್ಡ ಡ್ರಗ್ಸ್ ಜಾಲವನ್ನು ಪೊಲೀಸರು ಪತ್ತೆ ಮಾಡಿದ್ದು, ಬರೋಬ್ಬರಿ 6 ಕೋಟಿ ರೂ. ಮೌಲ್ಯದ ಆರು ಕೆ.ಜಿಗೂ ಅಧಿಕ ಎಂಡಿಎಂಎ ಡ್ರಗ್ಸ್ ವಶಪಡಿಸಿಕೊಂಡಿದ್ದಾರೆ.
ಅಂತೆಯೇ ಈ ಸಂಬಂಧ ಮಂಗಳೂರು ಸಿಸಿಬಿ ಪೊಲೀಸರು ಬೆಂಗಳೂರಿನಲ್ಲಿ ಕಾರ್ಯಾಚರಣೆ ನಡೆಸಿ ನೈಜೀರಿಯಾ ಪ್ರಜೆಯನ್ನು ವಶಕ್ಕೆ ಪಡೆದಿದ್ದಾರೆ.
ಈ ಸಂಬಂಧ ಮಾಹಿತಿ ನೀಡಿದ ನೀಡಿದ ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್, 'ಮಂಗಳೂರು ಕಮಿಷನರೇಟ್ ವ್ಯಾಪ್ತಿಯ ಇತಿಹಾಸದಲ್ಲೇ ದೊಡ್ಡ ಮೌಲ್ಯದ ಡ್ರಗ್ ದಂಧೆ ಬಯಲಿಗೆಳೆದ ಪ್ರಕರಣ ಇದಾಗಿದೆ. ಒಟ್ಟು ಆರು ಕೆ.ಜಿ.ಯ ಆರು ಕೋಟಿ ಮೌಲ್ಯದ ಎಂಡಿಎಂ ಡ್ರಗ್ ವಶಕ್ಕೆ ಪಡೆಯಲಾಗಿದೆ.
ವಾರದ ಹಿಂದೆ ಹೈದರ್ ಅಲಿ ಎಂಬಾತನನ್ನು ವಶಕ್ಕೆ ಪಡೆದು 15 ಗ್ರಾಂ ಎಂಡಿಎಂ ವಶಕ್ಕೆ ಪಡೆಯಲಾಗಿತ್ತು. ಈತನನ್ನ ವಶಕ್ಕೆ ಪಡೆದು ತನಿಖೆ ನಡೆಸಿದಾಗ ಮಾಹಿತಿ ಲಭ್ಯವಾಗಿದೆ ಎಂದರು. ಅಂತೆಯೇ ಒಂದು ಬ್ಯಾಂಕ್ ವಿವರದಡಿ ಅಳವಾಗಿ ತನಿಖೆ ನಡೆಸಿದಾಗ ನೈಜೀರಿಯನ್ ಪ್ರಜೆಯ ಕೈವಾಡ ಇರುವುದು ಬೆಳಕಿಗೆ ಬಂದಿತ್ತು. ಆತನ ಜಾಡು ಹಿಡಿದು ಬೆಂಗಳೂರಿಗೆ ತೆರಳಿ ಆತನನ್ನ ಸಿಸಿಬಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಸಿಸಿಬಿ ಪೊಲೀಸರ ಅತ್ಯುತ್ತಮ ಕಾರ್ಯಾಚರಣೆ ಇದಾಗಿದೆ ಎಂದು ಅನುಪಮ್ ಅಗರ್ವಾಲ್ ಹೇಳಿದರು.
ಕಸದಂತೆ ಡ್ರಗ್ಸ್ ಎಸೆದು ಹೋಗುತ್ತಿದ್ದ!
ಕಾರ್ಯಾಚರಣೆ ವೇಳೆ ಪೊಲೀಸ್ ಅಧಿಕಾರಿಗಳು 35 ಡೆಬಿಟ್ ಕಾರ್ಡ್ ಗಳು, 10 ಬ್ಯಾಂಕ್ ಪಾಸ್ ಪುಸ್ತಕಗಳು, 17 ಇನ್ ಆಕ್ಟಿವ್ ಸಿಮ್ ಕಾರ್ಡ್ ಗಳನ್ನು ವಶಕ್ಕೆ ಪಡೆದಿದ್ದಾರೆ. ಅಲ್ಲದೆ ಬಂಧಿತನ ಪಾಸ್‌ಪೋರ್ಟ್ ಸಹಿತ ಎಲ್ಲಾ ದಾಖಲೆ ವಶಕ್ಕೆ ಪಡೆಯಲಾಗಿದೆ. ಈತ ಸಣ್ಣ ಸಣ್ಣ ಪ್ಯಾಕೆಟ್ ಗಳ ಮೂಲಕ ರಾಜ್ಯದ ಹಲವಡೆ ಆತ ಡ್ರಗ್ ಪೂರೈಕೆ ಮಾಡುತ್ತಿದ್ದ.
ನಗರದಲ್ಲಿ ಬಿಸ್ಕಿಟ್ ಪ್ಯಾಕೆಟ್, ಗುಟ್ಕ, ಚಿಪ್ಸ್ ನ ಪ್ಯಾಕೆಟ್ ಗಳಲ್ಲಿ ಕಸ ಎಸೆಯೋ ಜಾಗದಲ್ಲಿ ಎಸೆದು, ಬಳಿಕ ಪೆಡ್ಲರ್ ಗಳಿಗೆ ಅದರ ಫೋಟೊ ತೆಗೆದು ಪೂರೈಕೆದಾರನಿಗೆ ಮಾಹಿತಿ ರವಾನೆ ಮಾಡುತ್ತಿದ್ದ. ಅ ಬಳಿಕ ಅವರು ಅಲ್ಲಿಂದ ಅದನ್ನು ತೆಗೆದುಕೊಂಡು ಗ್ರಾಹಕರಿಗೆ ಪೂರೈಕೆ ಮಾಡುತ್ತಿದ್ದರು ಎನ್ನಲಾಗಿದೆ.
ಹೀಗೆ ಮಂಗಳೂರು ನಗರದಲ್ಲಿ ಐವತ್ತಕ್ಕೂ ಅಧಿಕ ಪ್ಯಾಕೆಟ್ ಡ್ರಗ್ಸ್ ವಶಕ್ಕೆ ಪಡೆಯಲಾಗಿದೆ. ಬಂಧಿತ ಆರೋಪಿಯ ವಿಸಾ ಅವಧಿ ಮುಕ್ತಾಯ ಆಗಿದೆ. ಸಿಸಿಬಿ ತಂಡಕ್ಕೆ ಡಿಜಿಪಿ ಒಂದು ಲಕ್ಷ ರೂ. ಬಹುಮಾನ ಘೋಷಿಸಿದ್ದಾರೆ. ಕಮಿಷನರೇಟ್ ನಿಂದ ಪ್ರತ್ಯೇಕ ಒಂದು ಲಕ್ಷ ರೂ. ಬಹುಮಾನ ಘೋಷಿಸುತ್ತಿರುವುದಾಗಿ ಅನುಪಮ್ ಅಗರ್ವಾಲ್ ತಿಳಿಸಿದರು.
ಬೆಂಗಳೂರಿನಲ್ಲಿ ಬಂಧನ
ಇತ್ತೀಚೆಗೆ ಮಂಗಳೂರು ಪೂರ್ವ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿನ ಪಂಪ್ವೆಲ್ ಬಳಿಯ ಲಾಡ್ಜ್ವೊಂದರಲ್ಲಿ ಇದ್ದುಕೊಂಡು ಸಾರ್ವಜನಿಕರಿಗೆ ಮಾದಕ ವಸ್ತು ಮಾರಾಟ ಮಾಡುತ್ತಿದ್ದ ಹೈದರ್ ಯಾನೆ ಹೈದರ್ ಆಲಿ(51) ಎಂಬಾತನನ್ನು ಬಂಧಿಸಿ, ಆತನಿಂದ 75,000 ಮೌಲ್ಯದ 15 ಗ್ರಾಂ ಎಂಡಿಎಂಎ ವಶಪಡಿಸಿಕೊಳ್ಳಲಾಗಿತ್ತು. ಈ ಪ್ರಕರಣದ ಮುಂದಿನ ತನಿಖೆಯನ್ನು ಮಂಗಳೂರು ಸಿಸಿಬಿ ಘಟಕಕ್ಕೆ ಹಸ್ತಾಂತರಿಸಲಾಗಿತ್ತು. ಈ ಪ್ರಕರಣದಲ್ಲಿ ಮಾದಕ ವಸ್ತುವನ್ನು ಪೂರೈಕೆ ಮಾಡುವ ಡ್ರಗ್ಸ್ ಪೆಡ್ಲರ್ಗಳನ್ನು ಪತ್ತೆ ಹಚ್ಚುವ ಸಲುವಾಗಿ ಮಂಗಳೂರು ಸಿಸಿಬಿ ಪೊಲೀಸರು ಕಾರ್ಯಾಚರಣೆ ಕೈಗೊಂಡಿದ್ದರು.
ಈ ತನಿಖೆಯ ವೇಳೆ ಆರೋಪಿ ಹೈದರ್ ಯಾನೆ ಹೈದರ್ ಆಲಿಗೆ ಮಾದಕ ವಸ್ತು ಮಾರಾಟ ಮಾಡುತ್ತಿದ್ದ ಇನ್ನಿತರ ಡ್ರಗ್ ಪೆಡ್ಲರ್ಗಳ ಬಗ್ಗೆ ಮಾಹಿತಿ ಸಂಗ್ರಹಿಸಿದಾಗ ಪ್ರಮುಖ ಆರೋಪಿ ಬೆಂಗಳೂರಿನಲ್ಲಿ ವಾಸ್ತವ್ಯವಿರುವ ನೈಜೇರಿಯಾ ದೇಶದ ವಿದೇಶಿ ಪ್ರಜೆ ಎಂದು ತಿಳಿದುಬಂದಿತ್ತು. ಅದರಂತೆ ಬೆಂಗಳೂರು ನಗರದ ದೊಮ್ಮಸಂದ್ರ ಗ್ರಾಮದ ಸ್ವಾಮಿ ವಿವೇಕಾನಂದ ನಗರದ ಬಾಡಿಗೆ ಮನೆಯೊಂದರ ಮೇಲೆ ದಾಳಿ ನಡೆಸಿ, ಮಾದಕ ವಸ್ತುವನ್ನು ಹೊಂದಿದ್ದ ನೈಜಿರಿಯಾ ಪ್ರಜೆಯನ್ನು ಬಂಧಿಸಿದ್ದಾರೆ.
Advertisement