
ನವದೆಹಲಿ: ನಿಷೇಧಿತ ಭಯೋತ್ಪಾದಕ ಸಂಘಟನೆ ಖಲಿಸ್ತಾನ್ ಟೈಗರ್ ಫೋರ್ಸ್ (ಕೆಟಿಎಫ್) ಮಾಜಿ ಮುಖ್ಯಸ್ಥ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯ ಬಗ್ಗೆ ಭಾರತದ ಮೇಲೆ ಕೆನಡಾ ಒತ್ತಡ ಹೇರುತ್ತಿದೆ, ಆದರೆ, ಪ್ರಕರಣದ ತನಿಖೆ ನಡೆಸುತ್ತಿರುವ ಭಾರತೀಯ ಏಜೆನ್ಸಿಗಳೊಂದಿಗೆ ಮಾತ್ರ ನಿಜ್ಜರ್ ಮರಣ ಪ್ರಮಾಣಪತ್ರವನ್ನು ಹಂಚಿಕೊಳ್ಳಲು ನಿರಾಕರಿಸುತ್ತಿದೆ.
ಕ್ರಿಮಿನಲ್ ಪ್ರಕರಣದಲ್ಲಿ ಆರೋಪಿಯೊಬ್ಬ ಮರಣ ಹೊಂದಿದ ಸಂದರ್ಭದಲ್ಲಿ, ತನಿಖಾ ಸಂಸ್ಥೆ ಅವನ ಮರಣ ಪ್ರಮಾಣಪತ್ರವನ್ನು ನ್ಯಾಯಾಲಯಕ್ಕೆ ಸಲ್ಲಿಸಬೇಕಾಗುತ್ತದೆ. ಇದು ಮುಂದಿನ ಕಾನೂನು ಪ್ರಕ್ರಿಯೆಗೆ ಪ್ರಮಖವಾಗಿರುತ್ತದೆ. ನಿಜ್ಜರ್ ಪ್ರಕರಣದಲ್ಲಿ ಮರಣ ಪ್ರಮಾಣಪತ್ರ ಸಲ್ಲಿಸುವಂತೆ ಕೇಳಿದ್ದೇವೆ. ಆದರೆ, ನಿಮಗೇಕೆ ಬೇಕೆಂದು ಪ್ರಶ್ನಿಸುತ್ತಿದ್ದಾರೆಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.
2021 ರಲ್ಲಿ ಪಂಜಾಬ್‌ನಲ್ಲಿ ನಿಜ್ಜರ್ ಮತ್ತು ಆತನ ಸಹಾಯಕರಾದ ಅರ್ಷದೀಪ್ ಸಿಂಗ್ ಅಲಿಯಾಸ್ ದಲ್ಲಾ ಮತ್ತು ಲಖ್ಬೀರ್ ಸಿಂಗ್ ಸಂಧು ಅಲಿಯಾಸ್ ಲಾಂಡಾ ವಿರುದ್ಧ ಮೂರು ಕ್ರಿಮಿನಲ್ ಮೊಕದ್ದಮೆಗಳನ್ನು ದಾಖಲಿಸಲಾಗಿತ್ತು. ದಲ್ಲಾ ಮತ್ತು ಲಾಂಡಾ ಇಬ್ಬರೂ ಭಯೋತ್ಪಾದಕರು ಎಂದು ಗುರುತಿಸಲಾಗಿದೆ.
ಜೂನ್ 2023 ರಲ್ಲಿ ನಿಜ್ಜರ್ ಸಾವಿನ ನಂತರ, ನಾವು ಕೆನಡಾದ ಅಧಿಕಾರಿಗಳ ಬಳಿ ಮರಣೋತ್ತರ ಪರೀಕ್ಷಾ ವರದಿ ಹಂಚಿಕೊಳ್ಳುವಂತೆ ಮನವಿ ಮಾಡಿಕೊಂಡಿದ್ದೆವು. ಕಾನೂನು ಪ್ರಕ್ರಿಯೆಗಳಿಗೆ ಮರಣ ಪ್ರಮಾಣಪತ್ರ ಅಗತ್ಯವಿದೆ ಎಂದು ತಿಳಿಸಿದ್ದೆವು. ಆದರೆ, ಇನ್ನೂ ದಾಖಲೆಗಳನ್ನು ನೀಡಿಲ್ಲ ಎಂದು ತಿಳಿಸಿದ್ದಾರೆ.
ಒಂದು ದಶಕಕ್ಕೂ ಹೆಚ್ಚು ಕಾಲ ಇಲ್ಲಿ ಅಪರಾಧ ಚಟುವಟಿಕೆಗಳಲ್ಲಿ ತೊಡಗಿರುವ ದುಷ್ಕರ್ಮಿಗಳನ್ನು ಭಾರತಕ್ಕೆ ಹಸ್ತಾಂತರಿಸುವಂತೆ ಕೆನಾಡಗೆ ಮನವಿ ಮಾಡಲಾಗಿತ್ತು. ಆದರೆ, ಅವರಿಂದ ಯಾವುದೇ ಪ್ರತಿಕ್ರಿಯೆಗಳು ಬಂದಿಲ್ಲ. ಇದೀಗ ಅವರಲ್ಲಿ ಬಹುತೇಕ ಮಂದಿ ಕೆನಡಾದ ನಾಗರೀಕರಾಗಿದ್ದಾರೆಂದು ಮತ್ತೊಬ್ಬ ಅಧಿಕಾರಿ ಹೇಳಿದ್ದಾರೆ.
ನಿಜ್ಜರ್ ಹತ್ಯೆ ಪ್ರಕರಣದಲ್ಲಿ ಭಾರತೀಯ ರಾಯಭಾರಿಗೆ ಕೆನಡಾ ಆಸಕ್ತಿಯ ವ್ಯಕ್ತಿ ಎಂದು ಹಣೆಪಟ್ಟಿ ನೀಡಿದ್ದು, ಇದಕ್ಕೆ ಭಾರತ ತೀವ್ರ ಖಂಡನೆ ವ್ಯಕ್ತಪಡಿಸಿದೆ. ಕೆನಡಾದ ಆರೋಪವನ್ನು ಅಸಂಬದ್ಧ ಎಂದು ತಳ್ಳಿಹಾಕಿದೆ.
ಕೆನಡಾದಲ್ಲಿ ಖಾಲಿಸ್ತಾನಿ ಭಯೋತ್ಪಾದಕ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯಲ್ಲಿ ಭಾರತ ಸರಕಾರದ ಏಜೆಂಟರು ಭಾಗಿಯಾಗಿದ್ದರು ಎಂದು ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೋ ಕಳೆದ ವರ್ಷದ ಸೆಪ್ಟಂಬರ್‌ನಲ್ಲಿ ಆರೋಪಿಸಿದ ಬಳಿಕ ಉಭಯ ದೇಶಗಳ ನಡುವಿನ ಸಂಬಂಧ ಹದಗೆಟ್ಟಿತ್ತು.
ಇತ್ತೀಚಿಗೆ ಕೆನಡಾ ನಿಜ್ಜರ್ ಹತ್ಯೆ ಕುರಿತು ತನ್ನ ತನಿಖೆಯಲ್ಲಿ ಭಾರತೀಯ ರಾಯಭಾರಿ ಸಂಜಯ್ ಕುಮಾರ್ ವರ್ಮಾ ಅವರನ್ನು ‘ಆಸಕ್ತಿಯ ವ್ಯಕ್ತಿ’ ಎಂದು ಹೆಸರಿಸಿದ ಬಳಿಕ ರಾಜತಾಂತ್ರಿಕ ವಿವಾದವು ಹೊಸ ತಿರುವನ್ನು ಪಡೆದುಕೊಂಡಿದೆ.
ಕೆನಡಾ ಆರೋಪಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ಭಾರತವು, ಪದೇ ಪದೇ ಮನವಿಗಳನ್ನು ಮಾಡಿಕೊಂಡರೂ ಕೆನಡಾ ಸರಕಾರವು ನಿಜ್ಜರ್ ಹತ್ಯೆಯಲ್ಲಿ ತನ್ನ ಕೈವಾಡವಿತ್ತು ಎನ್ನುವುದರ ಕುರಿತು ಯಾವುದೇ ಸಾಕ್ಷ್ಯಾಧಾರವನ್ನು ಹಂಚಿಕೊಂಡಿಲ್ಲ ಎಂದು ಹೇಳಿದೆ. ಟ್ರುಡೋ ಆರೋಪ ರಾಜಕೀಯ ಲಾಭಕ್ಕಾಗಿ ಭಾರತಕ್ಕೆ ಕಳಂಕವನ್ನುಂಟು ಮಾಡುವ ಉದ್ದೇಶಪೂರ್ವಕ ಕಾರ್ಯತಂತ್ರವಾಗಿದೆ ಎಂದು ಬಣ್ಣಿಸಿದೆ.
ಇದಲ್ಲದೆ, ಇತ್ತೀಚೆಗಷ್ಟೇ ಸಾರ್ವಜನಿಕ ವಿಚಾರಣೆಯ ಸಂದರ್ಭದಲ್ಲಿ ಮಾತನಾಡಿದ್ದ ಕೆನಡಾ ಪ್ರಧಾನಿ ಟ್ರೂಡೊ, ನಿಜ್ಜರ್ ಹತ್ಯೆಯಲ್ಲಿ ಭಾರತೀಯ ಅಧಿಕಾರಿಗಳ ಕೈವಾಡದ ಕುರಿತ ತಮ್ಮ ಹೇಳಿಕೆಗಳು ನಿರ್ಣಾಯಕ ಪುರಾವೆಗಳಿಗಿಂತ ಅಥವಾ ಸಾಕ್ಷ್ಯಾಧಾರಗಳಿಗಿಂತ ಗುಪ್ತಚರವನ್ನು ಆಧರಿಸಿ ಹೇಳಿದ್ದಾಗಿತ್ತು ಎಂದು ಬಹಿರಂಗಪಡಿಸಿದ್ದರು.
ನಿಜ್ಜರ್ ಹತ್ಯೆಯಲ್ಲಿ ಭಾರತೀಯ ಸರ್ಕಾರಿ ಏಜೆಂಟರ ಕೈವಾಡದ ಕುರಿತು ಕೆನಡಾದ ಬಳಿ ಯಾವುದೇ "ಕಠಿಣ ಪುರಾವೆ"ಗಳು ಇಲ್ಲ. ಈ ವಿಚಾರಕ್ಕೆ ಸಂಬಂಧಿಸಿದಂತೆ ಕೆನಡಾದಿಂದ ಗುಪ್ತಚರ ಮಾಹಿತಿ ಇತ್ತು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಲು ಕೆನಡಾ ಸರ್ಕಾರಕ್ಕೆ ಇದೊಂದೇ ಸಾಕಿತ್ತು ಎಂದು ಹೇಳಿದ್ದರು.
Advertisement