
ಹೈದರಾಬಾದ್: ಬರ್ತ್ ಡೇ ಪಾರ್ಟಿ ಮಾಡಲು ಖಾಸಗಿ ಹೊಟೆಲ್ ಗೆ ಆಗಮಿಸಿದ್ದ ವ್ಯಕ್ತಿಯೋರ್ವ ನಾಯಿಯನ್ನು ಓಡಿಸುವ ಭರದಲ್ಲಿ 3ನೇ ಅಂತಸ್ತಿನಿಂದ ಕೆಳಗೆ ಬಿದ್ದು ಸಾವನ್ನಪ್ಪಿರುವ ಘಟನೆ ಹೈದರಾಬಾದ್ ನಲ್ಲಿ ನಡೆದಿದೆ.
ಹೈದರಾಬಾದ್ ನ ಚಂದಾನಗರ ಪೊಲೀಸ್ ಠಾಣೆ ವ್ಯಾಪ್ತಿಯ ವಿವಿ ಪ್ರೈಡ್ ಹೋಟೆಲ್ ನಲ್ಲಿ ಈ ಘಟನೆ ನಡೆದಿದ್ದು, ಘಟನೆಯ ಸಂಪೂರ್ಣ ವಿಡಿಯೋ ಅಲ್ಲಿನ ಸಿಸಿಟಿವಿ ಕ್ಯಾಮೆರಾದಲ್ಲಿ ದಾಖಲಾಗಿದೆ. ಅಂತೆಯೇ ಮೃತ ವ್ಯಕ್ತಿಯನ್ನು 24 ವರ್ಷದ ಉದಯ್ ಕುಮಾರ್ ಎಂದು ಗುರುತಿಸಲಾಗಿದ್ದು. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸಿದ್ದಾರೆ.
ಏನಿದು ಘಟನೆ?
ರಾಮಚಂದ್ರಾಪುರದ ಅಶೋಕನಗರದಲ್ಲಿ ನೆಲೆಸಿರುವ ಉದಯ್ ಕುಮಾರ್ ಎಂಬುವರು ತಮ್ಮ ಸ್ನೇಹಿತರೊಂದಿಗೆ ವಿವಿ ಪ್ರೈಡ್ ಹೋಟೆಲ್ ಗೆ ತೆರಳಿದ್ದರು. ಗೆಳೆಯನ ಹುಟ್ಟುಹಬ್ಬದ ನಿಮಿತ್ತ ಚಂದಾನಗರದ ವಿವಿ ಪ್ರೈಡ್ ನ ಮೂರನೇ ಮಹಡಿಯ ಕೊಠಡಿಯಲ್ಲಿ ಪಾರ್ಟಿ ಮಾಡಲಾಗಿತ್ತು.
ಪಾರ್ಟಿ ಮಧ್ಯೆ ಹೋಟೆಲ್ ಕೊಠಡಿಯಿಂದ ಹೊರಬಂದ ಉದಯ್ ಕುಮಾರ್ ಅಲ್ಲಿದ್ದ ನಾಯಿಯನ್ನು ನೋಡಿದ್ದು, ಕೂಡಲೇ ಅದನ್ನು ಅಲ್ಲಿಂದ ಓಡಿಸಲು ಮುಂದಾಗಿದ್ದಾರೆ. ಈ ವೇಳೆ ನಾಯಿ ಓಡಿದ್ದು ಅದರ ಹಿಂದೆಯೇ ಉದಯ್ ಕುಮಾರ್ ಕೂಡ ಓಡಿದ್ದಾರೆ. ಈ ವೇಳೆ ಉದಯ್ ಕುಮಾರ್ ಹೊಟೆಲ್ ನ ಗೋಡೆಯ ತೆರೆದ ಕಿಟಕಿಗೆ ಢಿಕ್ಕಿಯಾಗಿ ಆಯ ತಪ್ಪಿ ಕಿಟಕಿ ಒಳಗಿನಿಂದ ಕೆಳಗೆ ಬಿದ್ದಿದ್ದಾರೆ.
ಬಿದ್ದ ರಭಸಕ್ಕೆ ಉದಯ್ ಕುಮಾರ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮಾಹಿತಿ ಪಡೆದ ಪೊಲೀಸರು ಅಲ್ಲಿಗೆ ಆಗಮಿಸಿ ವಿವರ ಸಂಗ್ರಹಿಸಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಮೃತರ ಉದಯ್ ಪಾಲಿಟೆಕ್ನಿಕ್ ವಿದ್ಯಾರ್ಥಿ ಎಂದು ತಿಳಿದುಬಂದಿದೆ.
ಪೊಲೀಸರು ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಗಾಂಧಿ ಆಸ್ಪತ್ರೆಗೆ ರವಾನಿಸಿದ್ದಾರೆ. ಇದು ಸೋಮವಾರ ನಡೆದಿದ್ದರೂ ತಡವಾಗಿ ಬೆಳಕಿಗೆ ಬಂದಿದೆ. ಆದರೆ ಈ ಘಟನೆಗೆ ಸಂಬಂಧಿಸಿದ ದೃಶ್ಯಗಳು ಅಲ್ಲಿನ ಸಿಸಿಟಿವಿಯಲ್ಲಿ ದಾಖಲಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಹೈದರಾಬಾದ್ ನಲ್ಲಿ 2ನೇ ಘಟನೆ
ಇನ್ನು ಈ ಹಿಂದೆಯೂ ಕೂಡ ಇಂತಹುದೇ ಘಟನೆ ಹೈದರಾಬಾದ್ ನಲ್ಲಿ ವರದಿಯಾಗಿತ್ತು. ಈ ಹಿಂದೆ ಡೆಲಿವರಿಗೆ ಎಂದು ಹೋಗಿದ್ದ ಝೊಮಾಟೊ ಹುಡುಗನನ್ನು ನಾಯಿ ಹಿಂಬಾಲಿಸಿದ ಕಾರಣ ಆತ ಭಯಗೊಂಡು ಓಡುವ ವೇಳೆ 3ನೇ ಮಹಡಿಯ ಮೇಲಿನಿಂದ ಕೆಳಗೆ ಬಿದ್ದಿದ್ದ.
Advertisement