
ಮುಂಬೈ: ಭೂಗತ ಪಾತಕಿ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ನಿಂದ ಪ್ರಾಣಭೀತಿ ಎದುರಿಸುತ್ತಿರುವ ಬಾಲಿವುಡ್ ನಟ ಸಲ್ಮಾನ್ ಖಾನ್ ಹಾಗೂ ಇತ್ತೀಚೆಗೆ ಹತ್ಯೆಗೀಡಾಗಿದ್ದ ಎನ್ ಸಿಪಿ ನಾಯಕ ಬಾಬಾ ಸಿದ್ದಿಕಿ ಮಗ ಝೀಷನ್ ಸಿದ್ದಿಕಿಗೆ ಕೊಲೆ ಬೆದರಿಕೆ ಹಾಕಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಎನ್‌ಸಿಪಿ ನಾಯಕ ಬಾಬಾ ಸಿದ್ದಿಕ್ ಅವರ ಪುತ್ರ ಝೀಶಾನ್ ಸಿದ್ದಿಕಿ ಮತ್ತು ಬಾಲಿವುಡ್ ನಟ ಸಲ್ಮಾನ್ ಖಾನ್ ಅವರಿಗೆ ಜೀವ ಬೆದರಿಕೆ ಹಾಕಿದ ಪ್ರಕರಣಕ್ಕೆ ಸಂಬಂಧಿಸಿ ಮುಂಬೈ ಪೊಲೀಸರು ಮಂಗಳವಾರ(ಅ.29) ನೋಯ್ಡಾದಲ್ಲಿ 20 ವರ್ಷದ ಓರ್ವ ಯುವಕನನ್ನು ಬಂಧಿಸಿದ್ದಾರೆ.
ಮೂಲಗಳ ಪ್ರಕಾರ ಶುಕ್ರವಾರ (ಅಕ್ಟೋಬರ್ 25) ಸಂಜೆ ಬಾಂದ್ರಾ ಪೂರ್ವ ಕ್ಷೇತ್ರದ ಅಜಿತ್ ಪವಾರ್ ನೇತೃತ್ವದ ಎನ್‌ಸಿಪಿ ಶಾಸಕ ಜೀಶನ್ ಸಿದ್ದಿಕ್ ಅವರ ಕಚೇರಿಗೆ ಯುವಕನೊಬ್ಬ ಕರೆ ಮಾಡಿದ್ದು ಈ ವೇಳೆ ಜೀವ ಬೆದರಿಕೆ ಹಾಕಿದ್ದಾನೆ. ಈ ಕುರಿತು ಮುಂಬೈ ಪೊಲೀಸರಿಗೆ ದೂರು ನೀಡಲಾಗಿತ್ತು.
ಪ್ರಕರಣ ದಾಖಲಿಸಿಕೊಂಡ ಪೊಲೀಸರು ಕರೆ ಮಾಡಿದ ಯುವಕನ ಪತ್ತೆಗೆ ಬಲೆ ಬೀಸಿದ್ದರು. ಅದರಂತೆ ಇಂದು (ಮಂಗಳವಾರ) ನೋಯ್ಡಾದಲ್ಲಿ ಮೊಹಮ್ಮದ್ ತಯ್ಯಬ್ ಅಲಿಯಾಸ್ ಗುರ್ಫಾನ್(20) ಎಂಬಾತನನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಪ್ರಾಥಮಿಕ ವಿಚಾರಣೆ ವೇಳೆ ಆರೋಪಿ ನಟ ಸಲ್ಮಾನ್ ಖಾನ್ ಹಾಗೂ ಝೀಶಾನ್ ಸಿದ್ದಿಕಿ ಇಬ್ಬರಿಗೂ ಬೆದರಿಕೆ ಹಾಕಿರುವುದಾಗಿ ಒಪ್ಪಿಕೊಂಡಿದ್ದಾನೆ ಎನ್ನಲಾಗಿದೆ.
ಈ ಹಿಂದೆ ಮುಂಬೈ ಟ್ರಾಫಿಕ್ ಪೊಲೀಸರ ವಾಟ್ಸಾಪ್ ಹೆಲ್ಪ್‌ಲೈನ್‌ಗೆ ಬಂದ ಬೆದರಿಕೆ ಸಂದೇಶದ ಆಧಾರದ ಮೇಲೆ ಮುಂಬೈ ಪೊಲೀಸರು ಜೆಮ್‌ಶೆಡ್‌ಪುರದ 24 ವರ್ಷದ ತರಕಾರಿ ಮಾರಾಟಗಾರ ಶೇಖ್ ಹುಸೇನ್ ಶೇಖ್ ಮೌಸಿನ್ ಎಂಬಾತನನ್ನು ಬಂಧಿಸಿದ್ದರು. ಬೆದರಿಕೆ ಸಂದೇಶದಲ್ಲಿ ಈತ 5 ಕೋಟಿ ನೀಡಿದರೆ ಸಲ್ಮಾನ್ ಖಾನ್ ನನ್ನು ಕೊಲ್ಲುವುದಿಲ್ಲ ಎಂದು ಬೇಡಿಕೆ ಇಟ್ಟಿದ್ದ ಎನ್ನಲಾಗಿದೆ.
ಈ ಹಿಂದೆ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ನಿಂದ ಸಲ್ಮಾನ್ ಖಾನ್ ಗೆ ಕೊಲೆ ಬೆದರಿಕೆ ಬಂದಿತ್ತು. ಗ್ಯಾಂಗ್‌ನ ಶಂಕಿತ ಸದಸ್ಯರು ಏಪ್ರಿಲ್‌ನಲ್ಲಿ ನಟ ಸಲ್ಮಾನ್ ಖಾನ್ ರ ಬಾಂದ್ರಾ ಮನೆಯ ಹೊರಗೆ ಗುಂಡು ಹಾರಿಸಿದ್ದರು. ಬಳಿಕ ಬೆದರಿಕೆಗಳ ಸರಮಾಲೆಯ ಹಿನ್ನೆಲೆಯಲ್ಲಿ ನಟನ ಭದ್ರತೆಯನ್ನು ಹೆಚ್ಚಿಸಲಾಗಿದೆ.
ಇನ್ನು ಮಹಾರಾಷ್ಟ್ರ ವಿಧಾನ ಪರಿಷತ್ತಿನ ಚುನಾವಣೆಯಲ್ಲಿ ಅಡ್ಡ ಮತದಾನ ಮಾಡಿದ ಆರೋಪದ ಮೇಲೆ ಝೀಶಾನ್ ಸಿದ್ದಿಕಿ ಅವರನ್ನು ಕಾಂಗ್ರೆಸ್‌ನಿಂದ ಹೊರಹಾಕಲಾಗಿತ್ತು. ಇದಾದ ಬಳಿಕ ಅಕ್ಟೋಬರ್ 25 ರಂದು ಅಜಿತ್ ಪವಾರ್ ನೇತೃತ್ವದ ಎನ್‌ಸಿಪಿ ಬಣವನ್ನು ಔಪಚಾರಿಕವಾಗಿ ಸೇರಿದ್ದರು.
Advertisement