ಬಾರಾಬಂಕಿ(ಉತ್ತರ ಪ್ರದೇಶ): ನಿನ್ನೆ ಗುರುವಾರ ತಡರಾತ್ರಿ ಉತ್ತರ ಪ್ರದೇಶದ ಬಾರಾಬಂಕಿಯಲ್ಲಿ ವೇಗವಾಗಿ ಬಂದ ಕಾರು ಇತರ ಎರಡು ವಾಹನಗಳಿಗೆ ಡಿಕ್ಕಿ ಹೊಡೆದ ಪರಿಣಾಮ ಕನಿಷ್ಠ ಐವರು ಮೃತಪಟ್ಟಿದ್ದು, ಹಲವರು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ರಾಜ್ಯ ರಾಜಧಾನಿ ಲಕ್ನೋದಿಂದ 533 ಕಿಮೀ ದೂರದಲ್ಲಿರುವ ಇನಾಯತ್‌ಪುರ ಗ್ರಾಮದ ಲಕ್ನೋ ಮಹಮೂದಾಬಾದ್ ರಸ್ತೆಯಲ್ಲಿ ಈ ಅಪಘಾತ ಸಂಭವಿಸಿದ್ದು, ಕಾರೊಂದು ಇ-ರಿಕ್ಷಾಕ್ಕೆ ಡಿಕ್ಕಿ ಹೊಡೆದು ನಂತರ ವಿರುದ್ಧ ದಿಕ್ಕಿನಿಂದ ಬರುತ್ತಿದ್ದ ಮತ್ತೊಂದು ಕಾರಿಗೆ ಡಿಕ್ಕಿ ಹೊಡೆದಿದೆ.
ಡಿಕ್ಕಿಯ ಪರಿಣಾಮ ಒಂದು ಕಾರು ಸಮೀಪದ ಹೊಂಡಕ್ಕೆ ಹಾರಿಬಿದ್ದಿದೆ. ರಸ್ತೆಯಲ್ಲಿ ಹಾದುಹೋಗುವ ಇತರ ವಾಹನಗಳು ಮೃತರ ಮೇಲೆ ಹಾದುಹೋದವು. ಮಾಹಿತಿ ಪಡೆದ ಅಧಿಕಾರಿಗಳು ಮತ್ತು ಪೊಲೀಸರು ಕಾರ್ಯಪ್ರವೃತ್ತರಾಗಿ, ಅಪಘಾತ ಸ್ಥಳಕ್ಕೆ ಧಾವಿಸಿ ಪರಿಹಾರ ಮತ್ತು ರಕ್ಷಣಾ ಕಾರ್ಯವನ್ನು ಪ್ರಾರಂಭಿಸಿದರು. ಗಾಯಾಳುಗಳ ಸ್ಥಿತಿ ಚಿಂತಾಜನಕವಾಗಿದ್ದು, ವೈದ್ಯಕೀಯ ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ.
ತಡರಾತ್ರಿ ಇ-ರಿಕ್ಷಾಗೆ ಕಾರೊಂದು ಡಿಕ್ಕಿ ಹೊಡೆದಿದೆ. ಪೊಲೀಸ್ ತಂಡ ಸ್ಥಳಕ್ಕಾಗಮಿಸಿದಾಗ ರಸ್ತೆ ಪಕ್ಕದ ಹೊಂಡಕ್ಕೆ ಬಿದ್ದಿದ್ದ ಕಾರನ್ನು ಹೊರತೆಗೆದು ರಕ್ಷಿಸಿದ ಜನರನ್ನು ಕೂಡಲೇ ಆಸ್ಪತ್ರೆಗೆ ರವಾನಿಸಲಾಯಿತು.
ಮೂರು ವಾಹನಗಳು ಅಪಘಾತಕ್ಕೀಡಾಗಿದ್ದು, ಐವರು ಮೃತಪಟ್ಟಿದ್ದಾರೆ. ಮೂವರ ಸ್ಥಿತಿ ಗಂಭೀರವಾಗಿದೆ, ಅವರಿಗೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಅಪಘಾತದಲ್ಲಿ ಮೃತಪಟ್ಟವರೆಲ್ಲರೂ ಕುರ್ಸಿ ಪೊಲೀಸ್ ಠಾಣೆ ವ್ಯಾಪ್ತಿಯ ಉಮ್ರಾ ಗ್ರಾಮದ ನಿವಾಸಿಗಳು ಎಂದು ಬಾರಾಬಂಕಿ ಜಿಲ್ಲಾ ಮ್ಯಾಜಿಸ್ಟ್ರೇಟ್ ಸತ್ಯೇಂದ್ರ ಕುಮಾರ್ ತಿಳಿಸಿದ್ದಾರೆ.
Advertisement