
ಇಂಫಾಲ: ಮಣಿಪುರದಲ್ಲಿ ಮತ್ತೆ ಹಿಂಸಾಚಾರ ಭುಗಿಲೆದ್ದಿದ್ದು, ಹಿಂಸಾಚಾರದಲ್ಲಿ ಹಲವು ಮಂದಿ ಮೃತಪಟ್ಟಿದ್ದು, ಈ ಹಿನ್ನೆಲೆಯಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮಣಿಪುರದ ಜಿರಿಬಾಮ್ ಜಿಲ್ಲೆಯಲ್ಲಿ ಶನಿವಾರ ಬೆಳಿಗ್ಗೆ ಎರಡು ಗುಂಪುಗಳ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ಆರು ಜನರು ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.
ಗಲಭೆ ಪೀಡಿತ ಪ್ರದೇಶಗಳಲ್ಲಿ ಸೇನಾ ಹೆಲಿಕಾಫ್ಟರ್ ಮೂಲಕ ಕಣ್ಗಾವಲಿಡಲು ಮತ್ತು ಡ್ರೋನ್ ಪತ್ತೆ ವ್ಯವಸ್ಥೆಯೊಂದಿಗೆ ಬೃಹತ್ ಕೂಂಬಿಂಗ್ ಕಾರ್ಯಾಚರಣೆ ನಡೆಸಲು ಭದ್ರತಾ ಪಡೆಗಳನ್ನು ನಿಯೋಜಿಸಲು ಸರ್ಕಾರ ನಿರ್ಧರಿಸಿದೆ.
ಶುಕ್ರವಾರ ಬಿಶನ್‌ಪುರ ಜಿಲ್ಲೆಯ ಮೊಯಿರಾಂಗ್ ಪಟ್ಟಣದಲ್ಲಿ ಶಂಕಿತ ಬಂಡುಕೋರರು ನಡೆಸಿದ್ದ ರಾಕೆಟ್ ದಾಳಿಯಲ್ಲಿ ಒಬ್ಬರು ಪಾದ್ರಿ ಸಾವನ್ನಪ್ಪಿದ್ದರು ಮತ್ತು ಐವರು ಗಾಯಗೊಂಡಿದ್ದರು. ಈ ಬೆನ್ನಲ್ಲೇ ಶನಿವಾರ ಬೆಳಿಗ್ಗೆ ಅಸ್ಸಾಂಗೆ ಹೊಂದಿಕೊಂಡಿರುವ ಜಿರಿಬಾಮ್ ಜಿಲ್ಲೆಯಲ್ಲಿ ಗುಂಡಿ ಕಾಳಗ ನಡೆದಿದೆ. ಈ ಘಟನೆಯಲ್ಲಿ ಮೃತರ ಸಂಖ್ಯೆ 6ಕ್ಕೆ ಏರಿಕೆಯಾಗಿದೆ ಎಂದು ಭದ್ರತಾ ಪಡೆಗಳು ಹೇಳಿದೆ.
ನಿರಂತರ ಮೇಲ್ವಿಚಾರಣೆ
‘ರಾಜ್ಯದಲ್ಲಿ ಪರಿಸ್ಥಿತಿ ಉದ್ವಿಗ್ನಗೊಂಡಿದ್ದರೂ ನಿಯಂತ್ರಣದಲ್ಲಿದೆ. ಇಂದು (ಭಾನುವಾರ) ಯಾವುದೇ ಹೊಸ ಹಿಂಸಾಚಾರ ಘಟನೆಗಳು ವರದಿಯಾಗಿಲ್ಲ. ವಿವಿಧ ಜಿಲ್ಲೆಗಳ ಪೊಲೀಸ್ ವರಿಷ್ಠಾಧಿಕಾರಿಗಳು ಭದ್ರತಾ ಪಡೆಗಳ ಸಮನ್ವಯದೊಂದಿಗೆ ಪರಿಸ್ಥಿತಿಯನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡುತ್ತಿದ್ದಾರೆ. ಅನಧಿಕೃತ ಡ್ರೋನ್ ಹೊಡೆದುರುಳಿಸುವ ಉದ್ದೇಶದಿಂದ ಅಸ್ಸಾಂ ರೈಫಲ್ಸ್ ಇಂಫಾಲ್ ಕಣಿವೆ ಪ್ರದೇಶಗಳಲ್ಲಿ ಆ್ಯಂಟಿ ಡ್ರೋನ್ ಸಿಸ್ಟಮ್ ಅನ್ನು ನಿಯೋಜಿಸಿದೆ ಎಂದು ಅವರು ಹೇಳಿದ್ದಾರೆ.
ಮಣಿಪುರದ ಜಿರಿಬಾಮ್ ಜಿಲ್ಲೆಯಲ್ಲಿ ಶನಿವಾರ ನಡೆದ ಹಿಂಸಾಚಾರದಲ್ಲಿ ಐದು ಮಂದಿ ಮೃತಪಟ್ಟಿದ್ದಾರೆ. ಅಲ್ಲದೆ, ಬಿಷ್ಣುಪುರ ಜಿಲ್ಲೆಯಲ್ಲಿ ಉಗ್ರರು ನಡೆಸಿದ ರಾಕೆಟ್ ದಾಳಿಗೆ ಭದ್ರತಾ ಪಡೆಗಳು ತಿರುಗೇಟು ನೀಡಿದ್ದು, ಚುರ್‌ಚಂದಪುರ ಜಿಲ್ಲೆಯಲ್ಲಿ ಉಗ್ರರಿಗೆ ಸೇರಿದ 3 ಬಂಕರ್‌ಗಳನ್ನು ಸೇನಾಪಡೆಗಳು ಧ್ವಂಸಗೊಳಿಸಿವೆ. ಹಿಂಸಾಚಾರ ಬೆನ್ನಲ್ಲೇ ಮಣಿಪುರದ ಜಿರಿಬಾಮ್ ಜಿಲ್ಲೆಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಐದು ಅಥವಾ ಅದಕ್ಕಿಂತ ಹೆಚ್ಚು ಜನರು ಗುಂಪು ಸೇರುವುದನ್ನು ನಿಷೇಧಿಸಲಾಗಿದೆ.
ರಾಜ್ಯಪಾಲರ ಭೇಟಿ ಮಾಡಿದ ಸಿಎಂ
ಏತನ್ಮಧ್ಯೆ ಮುಖ್ಯಮಂತ್ರಿ ಎನ್.ಬಿರೇನ್ ಸಿಂಗ್ ಅವರು ಪಕ್ಷದ ಮತ್ತು ಆಡಳಿತಾರೂಢ ಮೈತ್ರಿಕೂಟದ ಘಟಕ ಪಕ್ಷಗಳಾದ ನಾಗಾ ಪೀಪಲ್ಸ್ ಫ್ರಂಟ್ ಮತ್ತು ನ್ಯಾಷನಲ್ ಪೀಪಲ್ಸ್ ಪಾರ್ಟಿ ಶಾಸಕರ ಜೊತೆ ಶನಿವಾರ ರಾತ್ರಿ ತುರ್ತು ಸಭೆ ನಡೆಸಿದ್ದಾರೆ. ಅಂತೆಯೇ ಮಣಿಪುರ ಸಿಎಂ ಎನ್ ಬಿರೇನ್ ಸಿಂಗ್ ಅವರು ಭಾನುವಾರ ಬೆಳಗ್ಗೆ 20ಕ್ಕೂ ಹೆಚ್ಚು ಶಾಸಕರೊಂದಿಗೆ ರಾಜ್ಯಪಾಲ ಎಲ್ ಆಚಾರ್ಯ ಅವರನ್ನು ಭೇಟಿಯಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬೆಳಗ್ಗೆ 11 ಗಂಟೆ ಸುಮಾರಿಗೆ ಶಾಸಕರೊಂದಿಗೆ ಸಿಂಗ್ ರಾಜಭವನ ತಲುಪಿದ್ದು, ಸುಮಾರು ಒಂದು ಗಂಟೆ ಸಭೆ ನಡೆದಿದ್ದು, ಬಳಿಕ ರಾಜಭವನದಿಂದ ನಿರ್ಗಮಿಸಿದ್ದಾರೆ. ಸಭೆಯಲ್ಲಿ ಸಭೆಯಲ್ಲಿ ಏನು ಚರ್ಚೆಯಾಗಿದೆ ಎಂಬುದು ತಿಳಿದುಬಂದಿಲ್ಲ.
Advertisement