ಉತ್ತರ ಪ್ರದೇಶ: ಜುಲೈ ತಿಂಗಳ ಮಧ್ಯದಿಂದ ಎಂಟು ಜನರನ್ನು ಕೊಂದು 20ಕ್ಕೂ ಹೆಚ್ಚು ಮಂದಿಯನ್ನು ಗಾಯಗೊಳಿಸಿದ ಆರು ತೋಳಗಳ ಗುಂಪನ್ನು ಹಿಡಿಯಲು ಬಹ್ರೈಚ್‌ನ ಮಹಾಸಿ ತಹಸಿಲ್‌ನಲ್ಲಿ ನಡೆಯುತ್ತಿರುವ 'ಆಪರೇಷನ್ ಭೇದಿಯಾ' ಭಾಗವಾಗಿ ಐದನೇ ತೋಳವನ್ನು ಮಂಗಳವಾರ ಸೆರೆಹಿಡಿಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬಹ್ರೈಚ್ ನಲ್ಲಿ ತೋಳಗಳ ಕಾಟ ಮಿತಿ ಮೀರಿದ್ದು. ಐದನೇ ನರಭಕ್ಷಕ ತೋಳವನ್ನು ಹರಬನ್ಸ್‌ಪುರ ಗ್ರಾಮದ ಸಮೀಪವಿರುವ ಘಾಘ್ರಾ ನದಿಯ ಬಳಿ ಸೆರೆಹಿಡಿಯಲಾಗಿದೆ ಎಂದು ವಿಭಾಗೀಯ ಅರಣ್ಯಾಧಿಕಾರಿ ಅಜಿತ್ ಪ್ರತಾಪ್ ಸಿಂಗ್ ಪಿಟಿಐಗೆ ತಿಳಿಸಿದ್ದಾರೆ. ಇಲ್ಲಿಯವರೆಗೆ ಒಟ್ಟು ಐದು ತೋಳಗಳನ್ನು ಸೆರೆ ಹಿಡಿಯಲಾಗಿದೆ. ಇದೀಗ ತೋಳಗಳನ್ನು ಅರಣ್ಯ ಇಲಾಖೆಯ ರಕ್ಷಣಾ ಆಶ್ರಯಕ್ಕೆ ಕೊಂಡೊಯ್ಯಲಾಗಿದೆ.
ಒಟ್ಟು ಆರು ತೋಳಗಳು ಈ ಭಾಗದಲ್ಲಿ ದಾಳಿ ನಡೆಸುತ್ತಿವೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ದೊರೆತಿತ್ತು. ಅರಣ್ಯ ಇಲಾಖೆ ತಂಡ ಸೋಮವಾರ ರಾತ್ರಿ ಪ್ರದೇಶದಲ್ಲಿ ತೋಳದ ಹೆಜ್ಜೆ ಗುರುತುಗಳನ್ನು ಪತ್ತೆ ಮಾಡಿದೆ. ಆದರೆ ರಾತ್ರಿ ವೇಳೆ ಕಾರ್ಯಾಚರಣೆ ನಡೆಸಲು ಸಾಧ್ಯವಾಗದ ಕಾರಣ ಬೆಳಗ್ಗೆ ಅರಣ್ಯ ಇಲಾಖೆಯ ನಾಲ್ಕು ತಂಡಗಳು ಆಗಮಿಸಿ ಸುತ್ತುವರಿದಿವೆ. ಓಡಿಹೋಗಲು ಯತ್ನಿಸಿದ ತೋಳ ಅರಣ್ಯ ಇಲಾಖೆ ಹಾಕಿದ ಬಲೆಯಲ್ಲಿ ಸಿಕ್ಕಿಬಿದ್ದಿದೆ. ಗ್ರಾಮಸ್ಥರ ನೆರವಿನಿಂದ ಅರಣ್ಯ ಸಿಬ್ಬಂದಿ ತೋಳವನ್ನು ಹಿಡಿದು ಬೋನಿಗೆ ಹಾಕುವಲ್ಲಿ ಯಶಸ್ವಿಯಾದರು ಎಂದು ವಿಭಾಗೀಯ ಅರಣ್ಯಾಧಿಕಾರಿ ತಿಳಿಸಿದ್ದಾರೆ.
ಅರಣ್ಯ ಇಲಾಖೆ ತಂಡ ಆಗಸ್ಟ್ 29 ರಂದು ನಾಲ್ಕನೇ ತೋಳವನ್ನು ಸೆರೆ ಹಿಡುಯಲಾಗಿತ್ತು. ತೋಳಗಳ ಆಗಾಗ್ಗೆ ಗ್ರಾಮಗಳಿಗೆ ನುಗ್ಗಿ ದಾಳಿ ನಡೆಸುತ್ತಿದ್ದು, ಕಳೆದ ಒಂದು ತಿಂಗಳಿಂದ ಈ ಪ್ರದೇಶದ ಗ್ರಾಮಸ್ಥರಲ್ಲಿ ಭೀತಿಯನ್ನು ಸೃಷ್ಟಿಸಿತ್ತು. ಆದ್ದರಿಂದ ಅರಣ್ಯ ಇಲಾಖೆಯು ತೋಳಗಳನ್ನು ಸೆರೆ ಹಿಡಿಯಲು ಒಂಬತ್ತು ಜನರ ತಂಡವನ್ನು ನಿಯೋಜಿಸಿ ಕಾರ್ಯಾಚರಣೆ ಪ್ರಾರಂಭಿಸಿತು.
Advertisement