ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಭೇಟಿಯ ವೇಳೆ ದೇಶದಿಂದ ಅಕ್ರಮವಾಗಿ ಸಾಗಿಸಲಾಗಿದ್ದ 297 ಪುರಾತನ ವಸ್ತುಗಳನ್ನು ಭಾರತಕ್ಕೆ ಅಮೆರಿಕ ಹಿಂದಿರುಗಿಸಿದೆ ಎಂದು ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ.
ಸಾಂಸ್ಕೃತಿಕ ಆಸ್ತಿಯ ಅಕ್ರಮ ಕಳ್ಳಸಾಗಣೆಯು ಇತಿಹಾಸದುದ್ದಕ್ಕೂ ಅನೇಕ ಸಂಸ್ಕೃತಿಗಳು ಮತ್ತು ದೇಶಗಳ ಮೇಲೆ ಪರಿಣಾಮ ಬೀರುವ ದೀರ್ಘಕಾಲದ ಸಮಸ್ಯೆಯಾಗಿದೆ. ಭಾರತವು ವಿಶೇಷವಾಗಿ ಪ್ರಭಾವಿತವಾಗಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಫೋಸ್ಟ್ ಮಾಡಿರುವ ಪ್ರಧಾನಿ ನರೇಂದ್ರ ಮೋದಿ, ಸಾಂಸ್ಕೃತಿಕ ಬಾಂಧವ್ಯವನ್ನು ಮತ್ತಷ್ಟು ಗಟ್ಟಿಗೊಳಿಸುವುದು ಮತ್ತು ಸಾಂಸ್ಕೃತಿಕ ಆಸ್ತಿಗಳ ಅಕ್ರಮ ಕಳ್ಳಸಾಗಣೆ ವಿರುದ್ಧ ಹೋರಾಟವನ್ನು ದೃಢಗೊಳಿಸುವ ನಿಟ್ಟಿನಲ್ಲಿ ಭಾರತಕ್ಕೆ 297 ಬೆಲೆಬಾಳುವ ಪ್ರಾಚೀನ ವಸ್ತುಗಳನ್ನು ಹಿಂದಿರುಗಿಸಲಿರುವ ಅಮೆರಿಕ ಸರ್ಕಾರ ಮತ್ತು ಅಧ್ಯಕ್ಷ ಜೋ- ಬೈಡನ್ ಅವರಿಗೆ ಅಭಿನಂದನೆ ಸಲ್ಲಿಸುವುದಾಗಿ ತಿಳಿಸಿದ್ದಾರೆ.
ಇದರೊಂದಿಗೆ, 2014 ರಿಂದ ಭಾರತವು ಒಟ್ಟು 640 ಪುರಾತನ ವಸ್ತುಗಳನ್ನು ವಶಕ್ಕೆ ಪಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಮೆರಿಕದಿಂದ ಹಿಂದಿರುಗಿದ ವಸ್ತುಗಳ ಸಂಖ್ಯೆ 578 ಆಗಿದೆ. ಪ್ರಧಾನಿ ಮೋದಿಯ ಈಗಿನ ಭೇಟಿ ಅಲ್ಲದೇ ಈ ಹಿಂದೆ ಭೇಟಿ ನೀಡಿದ್ದ ವೇಳೆಯಲ್ಲೂ ಪುರಾತನ ವಸ್ತುಗಳನ್ನು ದೇಶಕ್ಕೆ ಹಿಂದಿರುಗಿಸಲಾಗಿತ್ತು.
2021 ರಲ್ಲಿ ಪ್ರಧಾನಿ ಮೋದಿ ಯುಎಸ್‌ಗೆ ಭೇಟಿ ನೀಡಿದಾಗ, 12 ನೇ ಶತಮಾನದ ಸೊಗಸಾದ ಕಂಚಿನ ನಟರಾಜ ಪ್ರತಿಮೆ ಸೇರಿದಂತೆ 157 ಪುರಾತನ ವಸ್ತುಗಳನ್ನು ಯುಎಸ್ ಸರ್ಕಾರ ಹಸ್ತಾಂತರಿಸಿದೆ. ಅಲ್ಲದೆ 2023 ರಲ್ಲಿ ಅವರ ಯುಎಸ್ ಭೇಟಿಯ ಕೆಲವು ದಿನಗಳ ನಂತರ, 105 ಪ್ರಾಚೀನ ವಸ್ತುಗಳನ್ನು ಭಾರತಕ್ಕೆ ಹಿಂತಿರುಗಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಜುಲೈ 2024 ರಲ್ಲಿ, ನವದೆಹಲಿಯಲ್ಲಿ ಸಾಂಸ್ಕೃತಿಕ ಆಸ್ತಿಯ ಅಕ್ರಮ ಸಾಗಣೆ ತಡೆಯಲು ಮತ್ತು ಪುರಾತನ ವಸ್ತುಗಳನ್ನು ಮೂಲ ದೇಶಕ್ಕೆ ಹಿಂದಿರುಗಿಸುವ ಸಲುವಾಗಿ ಭಾರತ ಹಾಗೂ ಅಮೆರಿಕ ಜುಲೈ ತಿಂಗಳಲ್ಲಿ ಒಪ್ಪಂದಕ್ಕೆ ಸಹಿ ಹಾಕಿದ್ದವು.
Advertisement