
ಕೋಲ್ಕತಾ: ಕೋಲ್ತತಾದ RG Kar ಕಾಲೇಜಿನ ವೈದ್ಯೆಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಬಂಧನಕ್ಕೀಡಾಗಿರುವ ಕಾಲೇಜಿನ ಮಾಜಿ ಪ್ರಾಂಶುಪಾಲರ ವಿರುದ್ಧದ ಆರೋಪಗಳು ಗಂಭೀರವಾಗಿದ್ದು, ಸಾಬೀತಾದರೆ ಗಲ್ಲು ಶಿಕ್ಷೆಗೆ ಕಾರಣವಾಗಬಹುದು ಎಂದು ನ್ಯಾಯಾಲಯ ಹೇಳಿದೆ.
ಕೋಲ್ಕತ್ತಾ ಮೂಲದ ಆರ್‌ಜಿ ಕಾರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಮಾಜಿ ಪ್ರಾಂಶುಪಾಲ ಸಂದೀಪ್ ಘೋಷ್‌ಗೆ ಜಾಮೀನು ನೀಡಲು ಕೇಂದ್ರೀಯ ತನಿಖಾ ದಳಕ್ಕೆ (ಸಿಬಿಐ) ಸಂಬಂಧಿಸಿದ ಪ್ರಕರಣಗಳ ವಿಚಾರಣೆಯ ವಿಶೇಷ ನ್ಯಾಯಾಲಯ ನಿರಾಕರಿಸಿದೆ.
ಜಾಮೀನು ನಿರಾಕರಣೆ ವೇಳೆ ನ್ಯಾಯಾಲಯ ಸಾಕಷ್ಟು ಅಂಶಗಳನ್ನು ಉಲ್ಲೇಖಿಸಿದ್ದು ಪ್ರಮುಖವಾಗಿ ಸಂದೀಪ್ ಘೋಷ್ ವಿರುದ್ಧ ಗಂಭೀರ ಆರೋಪಗಳಿವೆ. ಅದು ಸಾಬೀತಾದರೆ ಮರಣದಂಡನೆಗೆ ಕಾರಣವಾಗಬಹುದು ಎಂದು ನ್ಯಾಯಾಲಯ ಹೇಳಿದೆ.
ಘೋಷ್ ಅವರ ಜಾಮೀನು ಅರ್ಜಿಯನ್ನು ತಿರಸ್ಕರಿಸಿದ ಹೆಚ್ಚುವರಿ ಮುಖ್ಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ಎಸ್ ಡೇ ಅವರು, 'ಆರೋಪಗಳು ಗಂಭೀರ ಸ್ವರೂಪದ್ದಾಗಿದ್ದು, ಸಾಬೀತಾದರೆ ಮರಣದಂಡನೆಗೆ ಗುರಿಯಾಗಬಹುದು, ಇದು ಅಪರೂಪದ ಪ್ರಕರಣಗಳಲ್ಲಿ ನೀಡಲಾಗುತ್ತದೆ. ಆರೋಪಿಯನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡುವುದರಿಂದ ಸಮಾನತೆಯ ತತ್ವದ ಉಲ್ಲಂಘನೆಯಾಗುತ್ತದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
ಒಬ್ಬ ವ್ಯಕ್ತಿ ಇತರರ ಸಹಾಯದಿಂದ ಅಪರಾಧ ಎಸಗಬಹುದಾಗಿದ್ದು, ಘಟನೆ ನಡೆದ ಸ್ಥಳದಲ್ಲಿ ಇತರ ಆರೋಪಿಗಳು ಹಾಜರಿರುವ ಅಗತ್ಯವಿಲ್ಲ ಎಂದು ಅವರು ಆದೇಶದಲ್ಲಿ ತಿಳಿಸಿದ್ದಾರೆ.
ಇದೇ ವೇಳೆ ಮತ್ತೋರ್ವ ಆರೋಪಿ ಪೊಲೀಸ್ ಅಧಿಕಾರಿ ಅಭಿಜೀತ್ ಮಂಡಲ್ ಅವರ ಜಾಮೀನು ಅರ್ಜಿಯನ್ನೂ ನ್ಯಾಯಾಲಯ ತಿರಸ್ಕರಿಸಿದೆ. ಆರೋಪಿಗಳಿಬ್ಬರನ್ನೂ ಸೆಪ್ಟೆಂಬರ್ 30ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸುವಂತೆ ಸಿಬಿಐ ಸಲ್ಲಿಸಿದ್ದ ಮನವಿಯನ್ನು ಅಂಗೀಕರಿಸಿದೆ.
ಘೋಷ್ ಅವರ ವಕೀಲರು ಇಲ್ಲಿನ ಸೀಲ್ದಾ ನ್ಯಾಯಾಲಯದಲ್ಲಿ ನ್ಯಾಯಾಧೀಶರ ಮುಂದೆ ಅವರನ್ನು ಪ್ರಕರಣದಲ್ಲಿ ತಪ್ಪಾಗಿ ಸಿಲುಕಿಸಲಾಗಿದೆ ಮತ್ತು ಆರೋಪಿಸಿದಂತೆ ಅಪರಾಧದಲ್ಲಿ ಯಾವುದೇ ಪಾತ್ರವಿಲ್ಲ ಎಂದು ಪ್ರತಿಪಾದಿಸಿದರು.
ಆಗಸ್ಟ್ 9 ರಂದು, ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯೆಯ ಮೇಲೆ ಅತ್ಯಾಚಾರ ಮತ್ತು ಕೊಲೆ ಆರೋಪದ ಪ್ರಕರಣದಲ್ಲಿ ಸಾಕ್ಷ್ಯಾಧಾರಗಳನ್ನು ನಾಶಪಡಿಸಿದ ಮತ್ತು ಎಫ್‌ಐಆರ್ ದಾಖಲಿಸಲು ವಿಳಂಬ ಮಾಡಿದ ಆರೋಪದ ಮೇಲೆ ಘೋಷ್ ಮತ್ತು ತಾಲಾ ಪೊಲೀಸ್ ಠಾಣೆಯ ಮಾಜಿ ಉಸ್ತುವಾರಿ ಅಭಿಜಿತ್ ಮೊಂಡಲ್ ಅವರನ್ನು ಸಿಬಿಐ ಬಂಧಿಸಿತ್ತು.
Advertisement