One Nation One Poll ಜಾರಿಗೆ ತರಲು 3 ಮಸೂದೆ ಜಾರಿಗೆ ಕೇಂದ್ರ ಸರ್ಕಾರ ಚಿಂತನೆ

ಮಾಜಿ ರಾಷ್ಟ್ರಪತಿ ರಾಮನಾಥ ಕೋವಿಂದ್‌ ನೇತೃತ್ವದ ಉನ್ನತ ಸಮಿತಿ ಏಕಕಾಲಕ್ಕೆ ಚುನಾವಣೆ ನಡೆಸುವುದಕ್ಕೆ ಸಂಬಂಧಿಸಿ ಸಲ್ಲಿಸಿದ್ದ ಶಿಫಾರಸುಗಳಿಗೆ ಇತ್ತೀಚೆಗೆ ಕೇಂದ್ರ ಸರ್ಕಾರ ಒಪ್ಪಿಗೆ ನೀಡಿತ್ತು.
One Nation One Poll
ಒಂದು ದೇಶ ಒಂದು ಚುನಾವಣೆ
Updated on

ನವದೆಹಲಿ: ನರೇಂದ್ರ ಮೋದಿ ಸರ್ಕಾರದ ಮಹತ್ವಾಕಾಂಕ್ಷಿ ‘One Nation One Poll’ ಜಾರಿಗೆ ತರಲು ಸಿದ್ಧತೆ ಮುಂದುವರೆದಿದ್ದು, ‘ಒಂದು ದೇಶ–ಒಂದು ಚುನಾವಣೆ’ ಅನುಷ್ಠಾನಕ್ಕೆ ದಾರಿ ಮಾಡಿಕೊಡುವ ಮೂರು ಮಸೂದೆಗಳ ಮಂಡನೆಗೆ ಕೇಂದ್ರ ಸರ್ಕಾರ ಮುಂದಾಗಿದೆ.

ಹೌದು... ತನ್ನ ಪ್ರಮುಖ ಕಾರ್ಯಸೂಚಿಯಾದ ‘ಒಂದು ದೇಶ–ಒಂದು ಚುನಾವಣೆ’ ಅನುಷ್ಠಾನಕ್ಕೆ ದಾರಿ ಮಾಡಿಕೊಡುವ ಮೂರು ಮಸೂದೆಗಳ ಮಂಡನೆಗೆ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಮುಂದಾಗಿದೆ. ಈ ಯೋಜನೆ ಅನುಷ್ಠಾನಕ್ಕಾಗಿ ಸಂವಿಧಾನದ ತಿದ್ದುಪಡಿಗೆ ಸಂಬಂಧಿಸಿದ ಎರಡು ಮಸೂದೆಗಳು ಸೇರಿ ಒಟ್ಟು ಮೂರು ಮಸೂದೆಗಳನ್ನು ಮಂಡಿಸಲು ಸರ್ಕಾರ ನಿರ್ಧರಿಸಿದೆ.

ಮಾಜಿ ರಾಷ್ಟ್ರಪತಿ ರಾಮನಾಥ ಕೋವಿಂದ್‌ ನೇತೃತ್ವದ ಉನ್ನತ ಸಮಿತಿ ಏಕಕಾಲಕ್ಕೆ ಚುನಾವಣೆ ನಡೆಸುವುದಕ್ಕೆ ಸಂಬಂಧಿಸಿ ಸಲ್ಲಿಸಿದ್ದ ಶಿಫಾರಸುಗಳಿಗೆ ಇತ್ತೀಚೆಗೆ ಕೇಂದ್ರ ಸರ್ಕಾರ ಒಪ್ಪಿಗೆ ನೀಡಿತ್ತು. ಈಗ, ಶಿಫಾರಸುಗಳ ಜಾರಿಗೆ ಮುಂದಡಿ ಇಟ್ಟಿದೆ.

ಕೋವಿಂದ್ ಸಮಿತಿಯು ಮೊದಲ ಹಂತವಾಗಿ ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಿಗೆ ಏಕಕಾಲದಲ್ಲಿ ಚುನಾವಣೆಗಳನ್ನು ಪ್ರಸ್ತಾಪಿಸಿತ್ತು. ಸಾರ್ವತ್ರಿಕ ಚುನಾವಣೆಯ 100 ದಿನಗಳಲ್ಲಿ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆಯನ್ನು ನಡೆಸಬೇಕು ಎಂದು ಹೇಳಿತ್ತು.

One Nation One Poll
'One nation, no election': ಏಕಕಾಲಕ್ಕೆ ಚುನಾವಣೆ ಕುರಿತು ಕೋವಿಂದ್ ವರದಿಗೆ ಕಾಂಗ್ರೆಸ್ ಕಿಡಿ

ಇದೀಗ ಒಂದುರಾಷ್ಚ್ರ ಒಂದು ಚುನಾವಣೆ ಜಾರಿಗೆ ಎರಡು ಸಂವಿಧಾನ ತಿದ್ದುಪಡಿ ಮಸೂದೆಗಳ ಮೂಲಕ ಸಂವಿಧಾನಕ್ಕೆ 15 ತಿದ್ದುಪಡಿಗಳನ್ನು ಕೈಗೊಳ್ಳಲು ಶಿಫಾರಸು ಮಾಡಿತ್ತು. ಕೋವಿಂದ್ ಸಮಿತಿಯ ಪ್ರಸ್ತಾವನೆಯನ್ನು 2029 ರಿಂದ ಜಾರಿಗೆ ತರಲು ಸರ್ಕಾರ ನಿರ್ಧರಿಸಿದರೆ, 17 ರಾಜ್ಯಗಳು ಮೂರು ವರ್ಷಗಳಿಗಿಂತ ಕಡಿಮೆ ಅವಧಿಗೆ ಅಸೆಂಬ್ಲಿಗಳ ಅಧಿಕಾರಾವಧಿಯನ್ನು ಹೊಂದಿರುತ್ತವೆ.

ಇನ್ನು ಕೋವಿಂದ್ ಸಮಿತಿಯು ಮೂರು ವಿಧಿಗಳಿಗೆ ತಿದ್ದುಪಡಿಗಳನ್ನು ಪ್ರಸ್ತಾಪಿಸಿದೆ, ಅಸ್ತಿತ್ವದಲ್ಲಿರುವ ಲೇಖನಗಳಲ್ಲಿ 12 ಹೊಸ ಉಪವಿಭಾಗಗಳನ್ನು ಸೇರಿಸುವುದು ಮತ್ತು ಶಾಸಕಾಂಗ ಸಭೆಗಳೊಂದಿಗೆ ಕೇಂದ್ರಾಡಳಿತ ಪ್ರದೇಶಗಳಿಗೆ ಸಂಬಂಧಿಸಿದ ಮೂರು ಕಾನೂನುಗಳನ್ನು ತಿದಿದ್ದುಪಡಿ ಮಾಡುವುದಾಗಿದೆ. ಆ ಮೂಲಕ ಒಟ್ಟು ತಿದ್ದುಪಡಿಗಳು ಮತ್ತು ಹೊಸ ಅಳವಡಿಕೆಗಳ ಸಂಖ್ಯೆ 18ಕ್ಕೆ ಏರಿದಂತಾಗುತ್ತದೆ.

ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಗಳೊಂದಿಗೆ ಸ್ಥಳೀಯ ಸಂಸ್ಥೆಗಳ ಚುನಾವಣೆಗಳನ್ನು ನಡೆಸುವುದು ಉದ್ದೇಶಿತ ಮಸೂದೆಗಳಲ್ಲೊಂದು. ಈ ಮಸೂದೆ ಅಂಗೀಕಾರಕ್ಕೆ ಕನಿಷ್ಠ ಶೇ 50ರಷ್ಟು ರಾಜ್ಯಗಳ ಒಪ್ಪಿಗೆ ಅಗತ್ಯ.

ಮೂರು ತಿದ್ದುಪಡಿ

ಮೊದಲನೇ ತಿದ್ದುಪಡಿ-ಏಕಕಾಲಕ್ಕೆ ಚುನಾವಣೆ

ಈ ತಿದ್ದುಪಡಿಯು ಲೋಕಸಭೆ ಮತ್ತು ವಿಧಾನಸಭೆಗಳ ಚುನಾವಣೆಗಳನ್ನು ಏಕಕಾಲಕ್ಕೆ ನಡೆಸುವುದಕ್ಕೆ ಸಂಬಂಧಿಸಿದ್ದಾಗಿದೆ. ಸಂವಿಧಾನದ 82ಎ ವಿಧಿಗೆ ಉಪ ಕಲಂ (1) ಸೇರ್ಪಡೆ ಮಾಡುವುದನ್ನು ಈ ಉದ್ದೇಶಿತ ಮಸೂದೆ ಒಳಗೊಂಡಿದೆ. ಈ ಉಪ ಕಲಂ (1), ಯೋಜನೆ ಯಾವಾಗಿನಿಂದ ಜಾರಿಗೆ ಬಂದಿದೆ ಎಂಬುದನ್ನು ವಿವರಿಸುತ್ತದೆ. ಅದೇ ರೀತಿ, ಲೋಕಸಭೆ ಮತ್ತು ವಿಧಾನಸಭೆಗಳ ಅವಧಿಯು ಯಾವಾಗ ಅಂತ್ಯಗೊಳ್ಳಲಿದೆ ಎಂಬುದನ್ನು ಸೂಚಿಸುವ ಉಪ ಕಲಂ (2) ಅನ್ನು ಕೂಡ ಈ ವಿಧಿಗೆ ಸೇರ್ಪಡೆ ಮಾಡುವ ಅಂಶವನ್ನೂ ಒಳಗೊಂಡಿದೆ.

ಈ ಎರಡು ಉಪ ಕಲಂಗಳ ಸೇರ್ಪಡೆ ಕುರಿತು ಉನ್ನತ ಸಮಿತಿ ಶಿಫಾರಸು ಮಾಡಿದೆ. ಸಂವಿಧಾನದ 83(2) ವಿಧಿಗೆ ತಿದ್ದುಪಡಿ ತಂದು, ಅದಕ್ಕೆ, ಉಪ ಕಲಂ (3) ಹಾಗೂ (4) ಸೇರ್ಪಡೆ ಮಾಡುವುದು. ಈ ಉಪ ಕಲಂ ಗಳು ಲೋಕಸಭೆಯ ಅವಧಿ ಹಾಗೂ ಅದರ ವಿಸರ್ಜನೆ ಕುರಿತು ವಿವರಿಸುತ್ತವೆ. ಇನ್ನು, ವಿಧಾನಸಭೆಗಳ ವಿಸರ್ಜನೆಗೆ ಸಂಬಂಧಿಸಿದ ಅವಕಾಶಗಳನ್ನು ಕೂಡ ಈ ತಿದ್ದುಪಡಿ ಒಳಗೊಂಡಿದೆ. ಇದರ ಜೊತೆ, ‘ಏಕಕಾಲಿಕ ಚುನಾವಣೆಗಳು’ ಎಂಬ ಪದ ಸೇರ್ಪಡೆಗೆ ಅನುವು ಮಾಡಿ ಕೊಡಲು, 327ನೇ ವಿಧಿಗೆ ತಿದ್ದುಪಡಿ ತರುವುದಕ್ಕೆ ಸಂಬಂಧಿಸಿದ ಅವಕಾಶಗಳನ್ನು ಒಳಗೊಂಡಿದೆ. ಈ ಮಸೂದೆ ಅಂಗೀಕಾರಕ್ಕೆ ಕನಿಷ್ಠ ಶೇ 50ರಷ್ಟು ರಾಜ್ಯಗಳ ಒಪ್ಪಿಗೆಯ ಅಗತ್ಯವಿಲ್ಲ ಎಂದು ಸಮಿತಿಯ ಶಿಫಾರಸು ಹೇಳುತ್ತದೆ.

One Nation One Poll
ಪ್ರಸಕ್ತ ಆಡಳಿತಾವಧಿಯಲ್ಲೇ 'ಒಂದು ದೇಶ, ಒಂದು ಚುನಾವಣೆ' ಜಾರಿ; ಮೋದಿ ಸರ್ಕಾರ ವಿಶ್ವಾಸ

ಎರಡನೇ ತಿದ್ದುಪಡಿ-ರಾಜ್ಯಗಳ ಒಪ್ಪಿಗೆ

ಈ ತಿದ್ದುಪಡಿಯು ರಾಜ್ಯಗಳ ವಿದ್ಯಮಾನಗಳಿಗೆ ಸಂಬಂಧಿಸಿದ್ದರಿಂದ, ಇದಕ್ಕೆ ಕನಿಷ್ಠ ಶೇ 50ರಷ್ಟು ರಾಜ್ಯಗಳ ಒಪ್ಪಿಗೆ ಅಗತ್ಯ ಎಂದು ಸಮಿತಿ ಹೇಳಿದೆ. ಈ ತಿದ್ದುಪಡಿಯು, ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆಸುವುದಕ್ಕಾಗಿ, ಚುನಾವಣಾ ಆಯೋಗವು (ಇ.ಸಿ) ರಾಜ್ಯ ಚುನಾವಣಾ ಆಯೋಗಗಳ (ಎಸ್‌.ಇ.ಸಿ) ಜೊತೆ ಸಮಾಲೋಚನೆ ನಡೆಸಿ, ಮತದಾರರ ಪಟ್ಟಿಗಳನ್ನು ಸಿದ್ಧಪಡಿಸುವ ಅವಕಾಶಗಳಿಗೆ ಸಂಬಂಧಿಸಿದ್ದಾಗಿದೆ. ಸಾಂವಿಧಾನಿಕವಾಗಿ ಕೇಂದ್ರ ಚುನಾವಣಾ ಆಯೋಗ (ಇ.ಸಿ) ಮತ್ತು ರಾಜ್ಯ ಚುನಾವಣಾ ಆಯೋಗಗಳು (ಎಸ್‌.ಇ.ಸಿ) ಪ್ರತ್ಯೇಕ ಸಂಸ್ಥೆಗಳಾಗಿವೆ.

ರಾಷ್ಟ್ರಪತಿ ಮತ್ತು ಉಪರಾಷ್ಟ್ರಪತಿ ಸ್ಥಾನ, ಲೋಕಸಭೆ, ರಾಜ್ಯಸಭೆ ಹಾಗೂ ರಾಜ್ಯಗಳ ವಿಧಾನಸಭೆಗಳಿಗೆ ಚುನಾವಣೆ ನಡೆಸುವುದು ಕೇಂದ್ರ ಚುನಾವಣಾ ಆಯೋಗದ ಜವಾಬ್ದಾರಿ. ಇನ್ನು, ಮುನ್ಸಿಪಾಲಿಟಿಗಳು, ಪಂಚಾಯಿತಿಗಳು ಸೇರಿದಂತೆ ಸ್ಥಳೀಯ ಸಂಸ್ಥೆಗಳ ಚುನಾವಣೆಗಳನ್ನು ನಡೆಸುವ ಹೊಣೆ ಎಸ್‌.ಇ.ಸಿಗಳದ್ದು. ಹೀಗಾಗಿ, ಎರಡನೇ ಸಂವಿಧಾನ ತಿದ್ದುಪಡಿ ಮಸೂದೆಯು, ಲೋಕಸಭೆ ಮತ್ತು ವಿಧಾನಸಭೆಗಳ ಜೊತೆಗೆ ಸ್ಥಳೀಯ ಸಂಸ್ಥೆಗಳ ಚುನಾವಣೆಗಳನ್ನು ನಡೆಸುವುದಕ್ಕೆ ಸಂಬಂಧಿಸಿದ ಅವಕಾಶಗಳನ್ನು ಒಳಗೊಂಡಿದೆ. ಇದಕ್ಕೆ ಸಂಬಂಧಿಸಿದಂತೆ, ಹೊಸದಾಗಿ 324ಎ ವಿಧಿಯನ್ನು ಸೇರ್ಪಡೆ ಮಾಡಲಾಗುತ್ತದೆ.

One Nation One Poll
ಒಂದು ದೇಶ, ಒಂದು ಚುನಾವಣೆ ಪ್ರಸ್ತಾಪ ಒಕ್ಕೂಟ ವ್ಯವಸ್ಥೆಗೆ ವಿರುದ್ಧ: ಸಿಎಂ ಸಿದ್ದರಾಮಯ್ಯ ವಾಗ್ದಾಳಿ

ಮೂರನೇ ತಿದ್ದುಪಡಿ-ಕೇಂದ್ರಾಡಳಿತ ಪ್ರದೇಶಗಳು

ಇದು ಸಾಮಾನ್ಯ ತಿದ್ದುಪಡಿಯಾಗಿದ್ದು, ಈ ಮಸೂದೆಯು ಕೇಂದ್ರಾಡಳಿತ ಪ್ರದೇಶಗಳಾದ ಪುದುಚೇರಿ, ದೆಹಲಿ ಹಾಗೂ ಜಮ್ಮು–ಕಾಶ್ಮೀರ ವಿಧಾನಸಭೆಗಳಿಗೆ ಸಂಬಂಧಿಸಿದ್ದಾಗಿದೆ. ಈ ಮೂರು ಕೇಂದ್ರಾಡಳಿತ ಪ್ರದೇಶಗಳ ವಿಧಾನಸಭೆಗಳ ಅವಧಿಗಳನ್ನು ಇತರ ರಾಜ್ಯಗಳ ಶಾಸನಸಭೆಗಳು ಮತ್ತು ಲೋಕಸಭೆಯ ಅವಧಿಯೊಂದಿಗೆ ಸಮೀಕರಿಸುವುದಾಗಿದೆ. ಇದಕ್ಕಾಗಿ, ರಾಷ್ಟ್ರ ರಾಜಧಾನಿ ದೆಹಲಿ ಪ್ರದೇಶ ಸರ್ಕಾರ ಕಾಯ್ದೆ–1991, ಕೇಂದ್ರಾಡಳಿತ ಪ್ರದೇಶಗಳ ಸರ್ಕಾರ ಕಾಯ್ದೆ–1963 ಹಾಗೂ ಜಮ್ಮು–ಕಾಶ್ಮೀರ ಪುನರ್‌ರಚನೆ ಕಾಯ್ದೆ–2019ಕ್ಕೆ ತಿದ್ದುಪಡಿ ತರುವುದು ಅಗತ್ಯ. ಉದ್ದೇಶಿತ ಈ ಮಸೂದೆಯು ಸಾಮಾನ್ಯ ಮಸೂದೆಯಾಗಿರುವ ಕಾರಣ ಇದಕ್ಕೆ ಸಂವಿಧಾನದಲ್ಲಿ ತಿದ್ದುಪಡಿ ಮಾಡುವ ಅಗತ್ಯವಿರುವುದಿಲ್ಲ. ಅಲ್ಲದೇ, ರಾಜ್ಯಗಳ ಒಪ್ಪಿಗೆಯೂ ಬೇಕಾಗುವುದಿಲ್ಲ.

ಕಷ್ಟಸಾಧ್ಯ

ಸಂವಿಧಾನ ತಿದ್ದುಪಡಿ ಮಸೂದೆಗಳನ್ನು ಅಂಗೀಕರಿಸಲು, ಸದನದ ಮೂರನೇ ಎರಡರಷ್ಟು ವಿಶೇಷ ಬಹುಮತದ ಅಗತ್ಯವಿದೆ ಎಂದು ಹೇಳಿದ್ದಾರೆ. ಸದನದಲ್ಲಿ ಎನ್‌ಡಿಎ ಕೇವಲ 292 ಸದಸ್ಯರನ್ನು ಹೊಂದಿದ್ದರೂ ಸರ್ಕಾರಕ್ಕೆ 362 ಸದಸ್ಯರ ಬೆಂಬಲ ಅಗತ್ಯವಿದೆ. ಹೆಚ್ಚಿನ ವಿರೋಧ ಪಕ್ಷಗಳು ಮತ್ತು ಬಿಜೆಡಿಯಂತಹ 'ತಟಸ್ಥ' ಪಕ್ಷಗಳು ಮಸೂದೆಯನ್ನು ವಿರೋಧಿಸಿರುವುದರಿಂದ, ಸರ್ಕಾರಕ್ಕೆ ಇದು ಕೊಂಚ ಕಷ್ಟಸಾಧ್ಯವಾಗುತ್ತದೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com