
ಜೈಪುರ: ಸಾಮೂಹಿಕ ವಿವಾಹದ ಹೆಸರಲ್ಲಿ ಬಡ ಯುವತಿಯರನ್ನು ಪುರುಷರಿಗೆ ಮಾರಾಟ ಮಾಡುತ್ತಿದ್ದ ಖತರ್ನಾಕ್ ಎನ್ ಜಿಒವನ್ನು ಪೊಲೀಸರು ಖೆಡ್ಡಾಕ್ಕೆ ಕೆಡವಿದ್ದಾರೆ.
ಹೌದು.. ರಾಜಸ್ತಾನ ರಾಜಧಾನಿ ಜೈಪುರ ಬಳಿ ಸಾಮೂಹಿಕ ವಿವಾಹದ ಹೆಸರಲ್ಲಿ ಬಡ ಕುಟುಂಬದ ಯುವತಿಯರನ್ನು ಪುರುಷರಿಗೆ ಮಾರಾಟ ಮಾಡುತ್ತಿದ್ದ ಖತರ್ನಾಕ್ ಜಾಲವನ್ನು ಪೊಲೀಸರು ಬೇದಿಸಿದ್ದಾರೆ.
ಆ ಮೂಲಕ ಬಹುದೊಡ್ಡ ಮಾನವ ಕಳ್ಳ ಸಾಗಣೆ ಜಾಲವನ್ನು ಬಯಲು ಮಾಡಿದ್ದಾರೆ. ಸಾಮೂಹಿಕ ವಿವಾಹ ಆಯೋಜನೆ ಮಾಡುತ್ತಿದ್ದ ಎನ್ ಜಿಒ ವೊಂದು ಯುವತಿಯರನ್ನು 2.5 ಲಕ್ಷ ರೂನಿಂದ 5 ಲಕ್ಷ ರೂಗಳಿಗೆ ಮಾರಾಟ ಮಾಡುತ್ತಿತ್ತು ಎಂದು ಹೇಳಲಾಗಿದೆ.
ವಿವಾಹದ ಹೆಸರಲ್ಲಿ ಯುವತಿಯರ ಮಾರಾಟ
ಬಡ ಕುಟುಂಬಗಳ ಮಹಿಳೆಯರಿಗೆ ಸಾಮೂಹಿಕ ವಿವಾಹಗಳನ್ನು ಆಯೋಜಿಸುವ ಎನ್‌ಜಿಒ ಸೋಗಿನಲ್ಲಿ ನಡೆಸಲಾಗುತ್ತಿದ್ದ ಮಾನವ ಕಳ್ಳಸಾಗಣೆ ಜಾಲ ಇದಾಗಿದ್ದು, ಎನ್‌ಜಿಒ ನಡೆಸುತ್ತಿದ್ದ ಮಹಿಳೆ, ಬಡ ಕುಟುಂಬಗಳಿಂದ ಹುಡುಗಿಯರನ್ನು ಕಳ್ಳಸಾಗಣೆ ಮಾಡುವ ಏಜೆಂಟ್‌ಗಳಿಂದ 'ಖರೀದಿಸಿ' ವಧುವನ್ನು ಹುಡುಕುತ್ತಿರುವ ಯುವಕರಿಗೆ 2.5-5 ಲಕ್ಷ ರೂ.ಗೆ 'ಮಾರಾಟ' ಮಾಡುತ್ತಿದ್ದಳು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಯಾವುದು ಈ ಎನ್ ಜಿಒ
ಜೈಪುರದಿಂದ ಸುಮಾರು 30 ಕಿ.ಮೀ ದೂರದಲ್ಲಿರುವ ಬಸ್ಸಿಯ ಸುಜನ್‌ಪುರ ಗ್ರಾಮದಲ್ಲಿರುವ ತೋಟದ ಮನೆಯಲ್ಲಿ ಗಾಯತ್ರಿ ಸರ್ವ ಸಮಾಜ ಪ್ರತಿಷ್ಠಾನ ತನ್ನ ಕಚೇರಿಯನ್ನು ಸ್ಥಾಪಿಸಲಾಗಿತ್ತು. ಈ ಸಂಸ್ಥೆ ಸಾಮೂಹಿಕ ವಿವಾಹಗಳನ್ನು ಆಯೋಜಿಸುವುದಾಗಿ ಹೇಳಿಕೊಂಡಿತ್ತು. ಈ ಎನ್ ಜಿಒಗೆ ಗಾಯತ್ರಿ ಎಂಬ ಮಹಿಳೆ ಮುಖ್ಯಸ್ಥಳಾಗಿದ್ದು, ಮದುವೆಯಾಗಲು ಬಯಸುತ್ತಿದ್ದ ಯುವಕರಿಗೆ ಹುಡುಗಿಯರ ಫೋಟೋ ತೋರಿಸಿ ಅವರಿಂದ ಹಣ ಪಡೆದು ಯುವತಿಯರನ್ನು ಮಾರಾಟ ಮಾಡುತ್ತಿದ್ದಳು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಗ್ಯಾಂಗ್‌ನ ಸದಸ್ಯರು ಬಿಹಾರ, ಪಶ್ಚಿಮ ಬಂಗಾಳ, ಒಡಿಶಾ ಮತ್ತು ಉತ್ತರ ಪ್ರದೇಶದ ಬಡ ಕುಟುಂಬಗಳ ಹುಡುಗಿಯರನ್ನು 'ಖರೀದಿಸಿ' 'ಎನ್‌ಜಿಒ' ನಿರ್ದೇಶಕಿ ಗಾಯತ್ರಿಗೆ ಒಪ್ಪಿಸುತ್ತಿದ್ದರು. ಬಳಿಕ ಆಕೆ ತನ್ನ ಸಂಸ್ಥೆಗೆ ಮದುವೆಯಾಗಲು ಬರುವ ಗಂಡುಮಕ್ಕಳಿಗೆ ಯುವತಿಯರ ಫೋಟೋ ತೋರಿಸಿ ಅವರ ಸೌಂದರ್ಯದ ಆಧಾರದ ಮೇಲೆ 2.5ಲಕ್ಷ ರೂನಿಂದ 5 ಲಕ್ಷ ರೂಗಳವರೆಗೆ ಬೆಲೆ ನಿರ್ಧರಿಸಿ ಮಾರಾಟ ಮಾಡುತ್ತಿದ್ದಳು ಎಂದು ಬಸ್ಸಿ ಪೊಲೀಸ್ ಠಾಣೆಯ ಉಸ್ತುವಾರಿ ಅಭಿಜಿತ್ ಪಾಟೀಲ್ ಹೇಳಿದ್ದಾರೆ.
ಹುಡುಗಿಯರ ಮೈಬಣ್ಣ, ಎತ್ತರ ಮತ್ತು ವಯಸ್ಸಿಗೆ ಅನುಗುಣವಾಗಿ 'ಬೆಲೆ'ಯನ್ನು ನಿರ್ಧರಿಸಲಾಗುತ್ತಿತ್ತು. ಗಾಯತ್ರಿ ಅಪ್ರಾಪ್ತ ವಯಸ್ಕರಿಗೆ 18 ವರ್ಷಕ್ಕಿಂತ ಮೇಲ್ಪಟ್ಟವರು ಎಂದು ತೋರಿಸಲು ನಕಲಿ ಆಧಾರ್ ಕಾರ್ಡ್‌ಗಳನ್ನು ಕೂಡ ವ್ಯವಸ್ಥೆ ಮಾಡುತ್ತಿದ್ದಳು. ಅವಳು ಈ ರೀತಿ ಸುಮಾರು 1,500 ವಿವಾಹಗಳನ್ನು ಮಾಡಿಸಿದ್ದಾಳೆ. ಆಕೆಯ ವಿರುದ್ಧ ಹತ್ತು ಪ್ರಕರಣಗಳು ದಾಖಲಾಗಿವೆ ಎಂದು ಹೇಳಿದ್ದಾರೆ.
ಪರಾರಿಯಾಗಿದ್ದ ಸಂತ್ರಸ್ತೆಯಿಂದಲೇ 'ಖತರ್ನಾಕ್ NGO' ಖೆಡ್ಡಾಕ್ಕೆ!
ಇನ್ನು ಖತರ್ನಾಕ್ ಎನ್ ಜಿಒವನ್ನು ಪೊಲೀಸ್ ಖೆಡ್ಡಾಗೆ ಬೀಳಿಸಿದ್ದು ಕೂಡ ಓರ್ವ ಸಂತ್ರಸ್ಥ ಯುವತಿ ಎಂದು ತಿಳಿದುಬಂದಿದೆ. ಉತ್ತರ ಪ್ರದೇಶದ 16 ವರ್ಷದ ಬಾಲಕಿ ಭಾನುವಾರ ಇದೇ ಗಾಯತ್ರಿಯ ಫಾರ್ಮ್‌ಹೌಸ್‌ನಿಂದ ತಪ್ಪಿಸಿಕೊಂಡು ಪೊಲೀಸರನ್ನು ಸಂಪರ್ಕಿಸಿದ್ದಳು. ಬಳಿಕ ಆಕೆ ಪೊಲೀಸರಿಗೆ ಸಂಪೂರ್ಣ ಮಾಹಿತಿ ನೀಡಿದ್ದು, ಯುವತಿಯ ಹೇಳಿಕೆಯ ಆಧಾರದ ಮೇಲೆ, ಪೊಲೀಸರು ಫಾರ್ಮ್‌ಹೌಸ್ ಮೇಲೆ ದಾಳಿ ನಡೆಸಿ ಗಾಯತ್ರಿ, ಅವಳ ಸಹಚರ ಹನುಮಾನ್ ಮತ್ತು ಯುವತಿಯರನ್ನು 'ಖರೀದಿಸಲು' ಅಲ್ಲಿಗೆ ಹೋಗಿದ್ದ ಭಗವಾನ್ ದಾಸ್ ಮತ್ತು ಮಹೇಂದ್ರ ಎಂಬುವವರನ್ನು ಬಂಧಿಸಿದ್ದಾರೆ.
ಈ ಫಾರ್ಮ್ ಹೌಸ್ ಗ್ರಾಮದ ಹೊರವಲಯದಲ್ಲಿರುವುದರಿಂದ ಇಲ್ಲಿ ಏನಾಗುತ್ತಿದೆ? ಒಳಗೆ ಯಾರಿದ್ದಾರೆ ಎಂಬುದು ಗ್ರಾಮಸ್ಥರಿಗೆ ತಿಳಿಯುತ್ತಿರಲಿಲ್ಲ. ಈ 'ಎನ್‌ಜಿಒ' ಬಡ ಕುಟುಂಬಗಳ ಹುಡುಗಿಯರಿಗೆ ಮದುವೆಗಳನ್ನು ಏರ್ಪಡಿಸುತ್ತದೆ ಎಂಬುದಷ್ಟೇ ನಮಗೆ ತಿಳಿದಿತ್ತು ಎಂದು ಸ್ಥಳೀಯ ಗ್ರಾಮಸ್ಥರು ಹೇಳಿದ್ದಾರೆ.
Advertisement