ಋತುಮತಿಯಾಗಿದ್ದ ವಿದ್ಯಾರ್ಥಿನಿಯನ್ನು ತರಗತಿ ಹೊರಗೆ ಕೂರಿಸಿ ಪರೀಕ್ಷೆ ಬರೆಸಿದ ಶಿಕ್ಷಕರು: ಕೊಯಮತ್ತೂರಿನ ಶಾಲೆಯಲ್ಲಿ ಅಮಾನವೀಯ ಕೃತ್ಯ!

ಕೊಯಮತ್ತೂರು ಮುಖ್ಯ ಶಿಕ್ಷಣಾಧಿಕಾರಿ (CEO) ಆರ್. ಬಾಲಮುರಳಿ ಮತ್ತು ಖಾಸಗಿ ಶಾಲೆಗಳ ಜಿಲ್ಲಾ ಶಿಕ್ಷಣಾಧಿಕಾರಿ (DEO) ಪುನಿತಾ ಅಂತೋಣಿಯಮ್ಮಳ್ ಅವರು ಇಂದು ಶಾಲೆಗೆ ಭೇಟಿ ನೀಡಿ ಶಾಲಾ ಆಡಳಿತ ಅಧಿಕಾರಿಗಳೊಂದಿಗೆ ಘಟನೆಯ ಬಗ್ಗೆ ವಿಚಾರಿಸಿದರು.
Student writing exam
ಪರೀಕ್ಷೆ ಬರೆಯುತ್ತಿರುವ ವಿದ್ಯಾರ್ಥಿನಿ
Updated on

ಕೊಯಮತ್ತೂರು: ಋತುಮತಿಯಾಗಿದ್ದ ಬಾಲಕಿಯೊಬ್ಬಳನ್ನು ಶಾಲೆಯ ಹೊರಗೆ ಕೂರಿಸಿ ಪರೀಕ್ಷೆ ಬರೆಸಿದ ಅಮಾನವೀಯ ಘಟನೆ ತಮಿಳು ನಾಡಿನ ಕೊಯಮತ್ತೂರಿನಲ್ಲಿ ನಡೆದಿದೆ. ಕೊಯಮತ್ತೂರಿನ ಖಾಸಗಿ ಶಾಲೆಯಲ್ಲಿ ನಿನ್ನೆ ಬುಧವಾರ ಎಂಟನೇ ತರಗತಿಯ ಪರಿಶಿಷ್ಟ ಜಾತಿ (SC) ವಿದ್ಯಾರ್ಥಿನಿ ಋತುಮತಿಯಾಗಿದ್ದಳು ಎಂಬ ಕಾರಣಕ್ಕೆ ತರಗತಿಯ ಹೊರಗೆ ಕೂರಿಸಿ ವಾರ್ಷಿಕ ಪರೀಕ್ಷೆ ಬರೆಸಿದ್ದಾರೆ. ತರಗತಿಯ ಹೊರಗೆ ಪರೀಕ್ಷೆ ಬರೆಯುತ್ತಿರುವ ಬಾಲಕಿಯ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಶಾಲಾ ಆಡಳಿತದ ವಿರುದ್ಧ ಅಧಿಕಾರಿಗಳು ತನಿಖೆ ಆರಂಭಿಸಿದ್ದಾರೆ.

ಪ್ರೌಢ ಶಿಕ್ಷಣ ಇಲಾಖೆ ನಿರ್ದೇಶಕ ಎ. ಪಳನಿಸಾಮಿ ಅವರನ್ನು ಸಂಪರ್ಕಿಸಿದಾಗ, ಶಿಕ್ಷಣ ಅಧಿಕಾರಿಗಳಿಗೆ ವಿಚಾರಣಾ ವರದಿಯನ್ನು ಸಲ್ಲಿಸಲು ಸೂಚಿಸಲಾಗಿದೆ, ಶಾಲೆಗೆ ಶೋಕಾಸ್ ನೋಟಿಸ್ ನೀಡುವಂತೆ ಕೇಳಲಾಗಿದೆ ಎಂದು ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ (New Indian Express) ಪತ್ರಿಕೆಗೆ ತಿಳಿಸಿದ್ದಾರೆ. ಭವಿಷ್ಯದಲ್ಲಿ ಶಾಲೆಗಳಲ್ಲಿ ಇಂತಹ ಘಟನೆಗಳು ನಡೆಯದಂತೆ ತಡೆಯಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಜಿಲ್ಲೆಯ ಎಲ್ಲಾ ಶಾಲೆಗಳಿಗೆ ಸುತ್ತೋಲೆ ಹೊರಡಿಸುವಂತೆ ಕೇಳಲಾಗಿದೆ ಎಂದು ಹೇಳಿದರು.

ಕೊಯಮತ್ತೂರು ಮುಖ್ಯ ಶಿಕ್ಷಣಾಧಿಕಾರಿ (CEO) ಆರ್. ಬಾಲಮುರಳಿ ಮತ್ತು ಖಾಸಗಿ ಶಾಲೆಗಳ ಜಿಲ್ಲಾ ಶಿಕ್ಷಣಾಧಿಕಾರಿ (DEO) ಪುನಿತಾ ಅಂತೋಣಿಯಮ್ಮಳ್ ಅವರು ಇಂದು ಶಾಲೆಗೆ ಭೇಟಿ ನೀಡಿ ಶಾಲಾ ಆಡಳಿತ ಅಧಿಕಾರಿಗಳೊಂದಿಗೆ ಘಟನೆಯ ಬಗ್ಗೆ ವಿಚಾರಿಸಿದರು.

ಮಾಧ್ಯಮ ಪ್ರತಿನಿಧಿಗಳನ್ನು ಉದ್ದೇಶಿಸಿ ಮಾತನಾಡಿದ ವಿ. ಸೆಂಥಿಲ್‌ಬಾಲಾಜಿ, ಪೊಲೀಸರು ಈ ವಿಷಯದ ಬಗ್ಗೆ ತನಿಖೆ ನಡೆಸುತ್ತಿದ್ದು, ಅಗತ್ಯವಿದ್ದರೆ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ಸಹಾಯಕ ಪೊಲೀಸ್ ವರಿಷ್ಠಾಧಿಕಾರಿ ಶ್ರೀಷ್ಟಿ ಸಿಂಗ್ ಕೂಡ ಈ ವಿಷಯದ ಬಗ್ಗೆ ಶಾಲಾ ಆಡಳಿತ ಮಂಡಳಿಯೊಂದಿಗೆ ವಿಚಾರಣೆ ನಡೆಸುತ್ತಿದ್ದಾರೆ. ಈ ಬಗ್ಗೆ TNIE ಜೊತೆ ಮಾತನಾಡಿದ ಬಾಲಕಿ ತಂದೆ, ಮಗಳು ಕೊಯಮತ್ತೂರು ಜಿಲ್ಲೆಯ ಪೊಲ್ಲಾಚಿ ಬಳಿಯ ಸೆಂಗುಟ್ಟೈಪಾಳ್ಯಂನಲ್ಲಿರುವ ಮೆಟ್ರಿಕ್ಯುಲೇಷನ್ ಹೈಯರ್ ಸೆಕೆಂಡರಿ ಶಾಲೆಯಲ್ಲಿ 8ನೇ ತರಗತಿಯಲ್ಲಿ ಓದುತ್ತಿದ್ದಾಳೆ ಎಂದು ಹೇಳಿದ್ದಾರೆ.

ಮಗಳು ಕಳೆದ ವಾರ ಋತುಮತಿಯಾದ ನಂತರ ಒಂದು ವಾರ ಶಾಲೆಗೆ ಹೋಗಿರಲಿಲ್ಲ. ಈ ವಾರ ಎರಡು ವಾರ್ಷಿಕ ಪರೀಕ್ಷೆ ಇದ್ದ ಕಾರಣ ಹೋಗಲೇ ಬೇಕಾಗಿತ್ತು. ಪರೀಕ್ಷಾ ಹಾಲ್‌ನಲ್ಲಿ ಬರೆಯಲು ಪ್ರತ್ಯೇಕ ಮೇಜು ಮತ್ತು ಬೆಂಚ್ ವ್ಯವಸ್ಥೆ ಮಾಡಿಕೊಡಿ, ಅವಳಿಗೆ ಆರೋಗ್ಯ ಚೆನ್ನಾಗಿಲ್ಲ ಎಂದು ನಾವು ಕೇಳಿಕೊಂಡಿದ್ದೆವು.

Student writing exam
'ಪುರುಷರು ಋತುಮತಿಯಾಗುತ್ತಿದ್ದರೆ, ಅವರಿಗೆ ಅರ್ಥವಾಗುತ್ತಿತ್ತು': ನ್ಯಾಯಾಧೀಶೆಯರ ವಜಾಗೊಳಿಸಿದ ಹೈಕೋರ್ಟ್‌ಗೆ 'ಸುಪ್ರೀಂ' ತರಾಟೆ

ಸೋಮವಾರ ಸಮಾಜ ವಿಜ್ಞಾನ ಪರೀಕ್ಷೆಯನ್ನು ಬರೆಯಲು ಅವಳು ಶಾಲೆಗೆ ಹೋದಾಗ, ಶಾಲೆಯಲ್ಲಿ ಅವಳಿಗೆ ಪ್ರತ್ಯೇಕವಾಗಿ ಕೂರಲು ವ್ಯವಸ್ಥೆ ಮಾಡಿರಲಿಲ್ಲ. ಬದಲಾಗಿ, ಶಾಲಾ ಆಡಳಿತವು ಅವಳನ್ನು ತರಗತಿಯ ಹೊರಗಿನ ಮೆಟ್ಟಿಲುಗಳ ಮೇಲೆ ಕುಳ್ಳಿರಿಸಿ ಪರೀಕ್ಷೆ ಬರೆಸಿತು. ಅವಳು ಮೆಟ್ಟಿಲುಗಳ ಮೇಲೆ ಕುಳಿತು ಎರಡೂವರೆ ಗಂಟೆಗಳ ಕಾಲ ಪರೀಕ್ಷೆಯನ್ನು ಬರೆಯುತ್ತಿದ್ದಾಗ, ಕಾಲು ನೋವು ಬಂತು.

ನಿನ್ನೆ ನಾವು ಶಾಲೆಗೆ ಹೋಗಿ ನೋಡಿದಾಗ ಮಗಳು ಮತ್ತೊಂದು ತರಗತಿಯ ಮೆಟ್ಟಿಲುಗಳ ಮೇಲೆ ಕುಳಿತು ಪರೀಕ್ಷೆ ಬರೆಯುತ್ತಿರುವುದನ್ನು ಕಂಡಾಗ ಆಘಾತವುಂಟಾಯಿತು. ನಾವು ಶಾಲೆಯ ಅಧಿಕಾರಿಗಳನ್ನು ಈ ಬಗ್ಗೆ ವಿಚಾರಿಸಿದಾಗ, ಇದು ದೊಡ್ಡ ಸಮಸ್ಯೆಯೇ ಅಲ್ಲ ಎಂಬರ್ಥದಲ್ಲಿ ಉಡಾಫೆಯಿಂದ ಮಾತನಾಡಿದರು.

ಮಗಳು ಮೆಟ್ಟಿಲು ಮೇಲೆ ಕುಳಿತು ಪರೀಕ್ಷೆ ಬರೆಯುತ್ತಿರುವ ವಿಡಿಯೊವನ್ನು ನಮ್ಮ ಸಂಬಂಧಿಯೊಬ್ಬರು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡರು ಎಂದು ಹೇಳಿದರು.

ಕೊಯಮತ್ತೂರಿನ ಶಾಲೆಯ ಶಿಕ್ಷಣ ಅಧಿಕಾರಿಗಳು ಮತ್ತು ಪ್ರಾಂಶುಪಾಲರು ಪ್ರತಿಕ್ರಿಯೆಗೆ ಸಿಗಲಿಲ್ಲ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com