ಸಿಂಧೂ ನದಿ ನೀರಿನ 'ಒಂದು ಹನಿಯೂ' ಪಾಕಿಸ್ತಾನಕ್ಕೆ ಹೋಗಲ್ಲ: ಕೇಂದ್ರ ಸರ್ಕಾರ ವಾಗ್ದಾನ; ನೀರು ತಡೆಗೆ ಮೂರು ಅಂಶಗಳ ಕಾರ್ಯತಂತ್ರ!

ಗೃಹ ಸಚಿವ ಅಮಿತ್ ಶಾ ಅವರು ಜಲಸಂಪನ್ಮೂಲ ಸಚಿವ ಸಿ.ಆರ್. ಪಾಟೀಲ ಮತ್ತು ಸಚಿವಾಲಯದ ಅಧಿಕಾರಿಗಳೊಂದಿಗೆ 1960ರ ಸಿಂಧೂ ಜಲ ಒಪ್ಪಂದ ಸ್ಥಗಿತಗೊಳಿಸುವ ನಿರ್ಧಾರದ ಅನುಷ್ಠಾನ ಕುರಿತು ಶುಕ್ರವಾರ ಸಭೆ ನಡೆಸಿದರು.
ಸಿಂಧೂ ನದಿ (ಸಂಗ್ರಹ ಚಿತ್ರ)
ಸಿಂಧೂ ನದಿ (ಸಂಗ್ರಹ ಚಿತ್ರ)
Updated on

ನವದೆಹಲಿ: ಪಹಲ್ಗಾಮ್ ಭಯೋತ್ಪಾದನಾ ದಾಳಿ ಬಳಿಕ ಪಾಕಿಸ್ತಾನದ ಮೇಲೆ ರಾಜತಾಂತ್ರಿಕ ಒತ್ತಡ ಹೆಚ್ಚಿಸುತ್ತಿರುವ ಕೇಂದ್ರ ಸರ್ಕಾರ, ಭಾರತದಿಂದ ನೆರೆಯ ರಾಷ್ಟ್ರಕ್ಕೆ ಒಂದು ಹನಿ ನೀರನ್ನೂ ಹರಿಸದಿರಲು ಪ್ರತಿಜ್ಞೆ ಮಾಡಿದೆ.

ಗೃಹ ಸಚಿವ ಅಮಿತ್ ಶಾ ಅವರು ಜಲಸಂಪನ್ಮೂಲ ಸಚಿವ ಸಿ.ಆರ್. ಪಾಟೀಲ ಮತ್ತು ಸಚಿವಾಲಯದ ಅಧಿಕಾರಿಗಳೊಂದಿಗೆ 1960ರ ಸಿಂಧೂ ಜಲ ಒಪ್ಪಂದ ಸ್ಥಗಿತಗೊಳಿಸುವ ನಿರ್ಧಾರದ ಅನುಷ್ಠಾನ ಕುರಿತು ಶುಕ್ರವಾರ ಸಭೆ ನಡೆಸಿದರು.

ಸಭೆಯಲ್ಲಿ ಸಿಂಧೂ ನದಿಯಿಂದ ಒಂದು ಹನಿ ನೀರನ್ನೂ ಪಾಕಿಸ್ತಾನಕ್ಕೆ ಹರಿಯದಂತೆ ಮಾಡಲು ನಿರ್ಧಾರ ಕೈಗೊಳ್ಳಲಾಗಿದೆ. ಅಲ್ಲದೆ, ಜಲಸಂಪನ್ಮೂಲ ಮತ್ತು ವಿದ್ಯುತ್ ಸಚಿವಾಲಯಗಳ ಅಧಿಕಾರಿಗಳಿಗೆ ಅಲ್ಪಾವಧಿ, ಮಧ್ಯಮಾವಧಿ ಮತ್ತು ದೀರ್ಘಾವಧಿಯ ಮೂರು ಅಂಶಗಳ ಕಾರ್ಯತಂತ್ರ ಸಿದ್ಧಪಡಿಸಲು ಸೂಚಿಸಲಾಗಿದೆ.

ಸಭೆಯು ಅಮಿತ್ ಶಾ ಅವರ ನಿವಾಸದಲ್ಲಿ ನಡೆದಿದ್ದು, ವಿದೇಶಾಂಗ ಸಚಿವ ಎಸ್. ಜೈಶಂಕರ್, ಪಾಟೀಲ್ ಮತ್ತು ಇತರ ಹಿರಿಯ ಸರ್ಕಾರಿ ಅಧಿಕಾರಿಗಳು ಭಾಗವಹಿಸಿದ್ದರು. ಸುಮಾರು ಎರಡು ಗಂಟೆಗಳ ಕಾಲ ಸಭೆ ನಡೆಸಿರುವ ಅಧಿಕಾರಿಗಳು, ಮಹತ್ವದ ನಿರ್ಣಯಗಳನ್ನು ಕೈಗೊಂಡಿದ್ದಾರೆಂದು ತಿಳಿದುಬಂದಿದೆ.

ಉಗ್ರರ ದಾಳಿಯನ್ನು ಗಂಭೀರವಾಗಿ ಪರಿಗಣಿಸಿರುವ ಪ್ರಧಾನಿ ಮೋದಿಯವರು ಹಲವಾರು ನಿರ್ದೇಶನಗಳನ್ನು ನೀಡಿದ್ದು, ಅವುಗಳನ್ನು ಅನುಸರಿಸಲು ಈ ಸಭೆ ನಡೆಸಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ.

ಮೋದಿಯವರ ನಿರ್ದೇಶನಗಳನ್ನು ಪರಿಣಾಮಕಾರಿ ಅನುಷ್ಠಾನಕ್ಕಾಗಿ ಅಮಿತಾ ಶಾ ಅವರು ಹಲವಾರು ಸಲಹೆಗಳನ್ನು ನೀಡಿದ್ದಾರೆ ಎಂದು ಕೇಂದ್ರ ಜಲಸಂಪನ್ಮೂಲ ಸಚಿವ ಸಿ.ಆರ್.ಪಾಟಿಲ್ ಅವರು ಹೇಳಿದ್ದಾರೆ.

ಸಭೆಯ ನಂತರ ಪ್ರತಿಕ್ರಿಯೆ ನೀಡಿರುವ ಪಾಟೀಲ್ ಅವರು, ಸಿಂಧೂ ನದಿಯ ಒಂದು ಹನಿ ನೀರು ಕೂಡ ಪಾಕಿಸ್ತಾನಕ್ಕೆ ತಲುಪದಂತೆ ನೋಡಿಕೊಳ್ಳಲು ಸಭೆಯಲ್ಲಿ ಮಾರ್ಗಸೂಚಿ ಸಿದ್ಧಪಡಿಸಲಾಗಿದೆ. ಇದಕ್ಕಾಗಿ ಸರ್ಕಾರವು ಅಲ್ಪಾವಧಿಯ, ಮಧ್ಯಮ ಅವಧಿಯ ಮತ್ತು ದೀರ್ಘಕಾಲೀನ ಕ್ರಮಗಳನ್ನು ಕೈಗೆತ್ತಿಕೊಂಡಿದೆ. ಇದರಿಂದಾಗಿ ಒಂದು ಹನಿ ನೀರು ಕೂಡ ಪಾಕಿಸ್ತಾನಕ್ಕೆ ಹೋಗದು ಎಂದು ಹೇಳಿದ್ದಾರೆ.

ಪಾಕಿಸ್ತಾನಕ್ಕೆ ನೀರು ಹರಿಯದಂತೆ ತಡೆಯಲು ನದಿ ನೀರನ್ನು ಬೇರೆಡೆ ತಿರುಗಿಸಲು ಮತ್ತು ನದಿಗಳ ಹೂಳು ತೆಗೆಯುವಂತಹ ತಕ್ಷಣದ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು. ಸಿಂಧೂ ನದಿ ನೀರಿನ ಒಪ್ಪಂದದ ಬಗ್ಗೆ ಮೋದಿ ಸರ್ಕಾರ ತೆಗೆದುಕೊಂಡ ಐತಿಹಾಸಿಕ ನಿರ್ಧಾರದಲ್ಲಿ ಸಂಪೂರ್ಣ ರಾಷ್ಟ್ರೀಯ ಹಿತಾಸಕ್ತಿ ಇದೆ. ಸಿಂಧೂ ನದಿಯ ನೀರಿನ ಒಂದು ಹನಿಯು ಪಾಕಿಸ್ತಾನವನ್ನು ತಲುಪುವುದಿಲ್ಲವೆಂದು ನಾವು ಖಾತ್ರಿಪಡಿಸುತ್ತೇವೆಂದು ತಿಳಿಸಿದ್ದಾರೆ.

ಭಾರತ ಮತ್ತು ಪಾಕಿಸ್ತಾನದ ನಡುವಿನ ಸಿಂಧೂ ನದಿ ನೀರು ಹಂಚಿಕೆ ಒಪ್ಪಂದಕ್ಕೆ 1960ರಲ್ಲಿ ಸಹಿ ಹಾಕಲಾಯಿತು. ಸುದೀರ್ಘ 9 ವರ್ಷಗಳ ಕಾಲ ನಡೆದ ಮಾತುಕತೆಗಳ ಬಳಿಕ, ಉಭಯ ದೇಶಗಳು ಈ ಒಪ್ಪಂದಕ್ಕೆ ತಮ್ಮ ಸಮ್ಮತಿ ಸೂಚಿಸಿದ್ದವು. ವಿಶ್ವ ಬ್ಯಾಂಕ್ ಸಿಂಧು ನದಿ ಒಪ್ಪಂದಕ್ಕೆ ಸಾಕ್ಷಿಯಾಗಿದೆ. ಸಿಂಧು ನದಿ ಒಪ್ಪಂದವು ಭಾರತ-ಪಾಕಿಸ್ತಾನ ದೇಶಗಳು ಈ ನದಿ ನೀರನ್ನು ಹೇಗೆ ಬಳಸಿಕೊಳ್ಳಬೇಕು ಎಂಬುದರ ಬಗ್ಗೆ ನಿಯಮಗಳನ್ನು ರೂಪಿಸುತ್ತದೆ. ಗಡಿಯಾಚೆಗಿನ ನದಿಗಳ ನೀರಿನ ಬಳಕೆಯ ಕುರಿತು ಎರಡೂ ಕಡೆಯವರ ನಡುವೆ ಸಹಕಾರ ಮತ್ತು ಮಾಹಿತಿ ವಿನಿಮಯಕ್ಕಾಗಿ ಒಂದು ಕಾರ್ಯವಿಧಾನವನ್ನು ರೂಪಿಸುತ್ತದೆ.

ಸಿಂಧೂ ನದಿ (ಸಂಗ್ರಹ ಚಿತ್ರ)
ಸಿಂಧೂ ನದಿ ಜಲ ಒಪ್ಪಂದ ರದ್ದು: ಏನಿದರ ಅರ್ಥ, ಇದರಿಂದ ಏನಾಗುತ್ತದೆ?

ಒಪ್ಪಂದದ ಪ್ರಕಾರ, ಪೂರ್ವದ ನದಿಗಳ ನೀರನ್ನು ಭಾರತವು ಬಳಸಿಕೊಳ್ಳಬಹುದು. ಪಶ್ಚಿಮದ ನದಿಗಳ ನೀರನ್ನು ಪಾಕಿಸ್ತಾನವು ಹೆಚ್ಚಾಗಿ ಬಳಸುತ್ತದೆ. ಭಾರತವು ಪಶ್ಚಿಮ ನದಿಗಳ ಮೇಲೆ ಜಲವಿದ್ಯುತ್ ಯೋಜನೆಗಳನ್ನು ನಿರ್ಮಿಸಬಹುದು. ಆದರೆ, ಕೆಲವು ನಿಯಮಗಳನ್ನು ಪಾಲಿಸಬೇಕು. ಪಾಕಿಸ್ತಾನವು ಭಾರತದ ಯೋಜನೆಗಳ ಬಗ್ಗೆ ಆಕ್ಷೇಪಣೆಗಳನ್ನು ಸಲ್ಲಿಸಬಹುದು. ಭಾರತ ಸರ್ಕಾರ ಮತ್ತು ಪಾಕಿಸ್ತಾನ ಸರ್ಕಾರವು ಸಿಂಧೂ ನದಿ ವ್ಯವಸ್ಥೆಯ ನೀರನ್ನು ಸಂಪೂರ್ಣವಾಗಿ ಮತ್ತು ತೃಪ್ತಿಕರವಾಗಿ ಬಳಸಲು ಬಯಸುತ್ತವೆ. ಈ ನಿಟ್ಟಿನಲ್ಲಿ, ಪರಸ್ಪರ ಸ್ನೇಹ ಮತ್ತು ಸೌಹಾರ್ದತೆಯಿಂದ ಹಕ್ಕುಗಳು ಮತ್ತು ಕಟ್ಟುಪಾಡುಗಳನ್ನು ನಿರ್ಧರಿಸಲು ಮತ್ತು ಈ ಒಪ್ಪಂದದ ವ್ಯಾಖ್ಯಾನ ಅಥವಾ ಅನ್ವಯಕ್ಕೆ ಸಂಬಂಧಿಸಿದಂತೆ ಉದ್ಭವಿಸುವ ಎಲ್ಲಾ ಪ್ರಶ್ನೆಗಳನ್ನು ಸಹಕಾರ ಮನೋಭಾವದಿಂದ ಇತ್ಯರ್ಥಪಡಿಸಲು ನಿರ್ಧರಿಸಿವೆ. ಈ ಉದ್ದೇಶಗಳನ್ನು ಈಡೇರಿಸಲು ಒಂದು ಒಪ್ಪಂದವನ್ನು ತೀರ್ಮಾನಿಸಲು ನಿರ್ಧರಿಸಲಾಗಿದೆ" ಎಂದು ಸಿಂಧು ನದಿ ಒಪ್ಪಂದದ ಪ್ರಸ್ತಾವನೆಯಲ್ಲಿ ಹೇಳಲಾಗಿದೆ.

ಸಿಂಧು ನದಿ ಒಪ್ಪಂದಕ್ಕೆ ಭಾರತದ ಪ್ರಥಮ ಪ್ರಧಾನಮಂತ್ರಿ ಜವಾಹರಲಾಲ್ ನೆಹರು ಮತ್ತು ಪಾಕಿಸ್ತಾನದ ಫೀಲ್ಡ್ ಮಾರ್ಷಲ್ ಮೊಹಮ್ಮದ್ ಆಯುಬ್ ಖಾನ್ ಸಹಿ ಹಾಕಿದ್ದರು. ಒಪ್ಪಂದದ ಪ್ರಕಾರ, ಉಭಯ ದೇಶಗಳ ಆಯುಕ್ತರು ವರ್ಷಕ್ಕೊಮ್ಮೆಯಾದರೂ ಭೇಟಿಯಾಗಬೇಕು. ಆದರೆ ಕೋವಿಡ್-19 ಸಾಂಕ್ರಾಮಿಕ ರೋಗದಿಂದಾಗಿ 2020ರಲ್ಲಿ ನಡೆಯಬೇಕಿದ್ದ ಸಭೆ ರದ್ದಾಯಿತು. ಈ ಒಪ್ಪಂದವನ್ನು ಎರಡೂ ಸರ್ಕಾರಗಳು ತಿದ್ದುಪಡಿ ಮಾಡುವ ಅಧಿಕಾರವನ್ನು ಹೊಂದಿವೆ. ಸಿಂಧು ನದಿ ಒಪ್ಪಂದದನ್ವಯ ಭಾರತಕ್ಕೆ ಪೂರ್ವ ನದಿಗಳಾದ ಸಟ್ಲೆಜ್, ಬಿಯಾಸ್ ಮತ್ತು ರಾವಿ ನದಿಗಳ ನೀರನ್ನು ಬಳಸುವ ಹಕ್ಕಿದೆ. ಇದು ಸುಮಾರು 33 ಮಿಲಿಯನ್‌ ಎಕರೆ ಫೀಟ್ (MAF)ನಷ್ಟು ನೀರನ್ನು ಬಳಸಬಹುದಾಗಿದೆ. ಅದೇ ರೀತಿ ಪಾಕಿಸ್ತಾನಕ್ಕೆ ಪಶ್ಚಿಮ ನದಿಗಳಾದ ಸಿಂಧೂ, ಝೀಲಂ ಮತ್ತು ಚೆನಾಬ್ ನದಿಗಳ ನೀರನ್ನು ಬಳಸುವ ಹಕ್ಕಿದೆ. ಇದು ಸುಮಾರು 135 ಮಿಲಿಯನ್‌ ಎಕರೆ ಫೀಟ್ (MAF)‌ ನೀರನ್ನು ಬಳಸಿಕೊಳ್ಳುತ್ತದೆ.

ಭಾರತವು ಪಶ್ಚಿಮ ನದಿಗಳ ಮೇಲೆ ಜಲವಿದ್ಯುತ್ ಯೋಜನೆಗಳನ್ನು ನಿರ್ಮಿಸಬಹುದು. ಆದರೆ ಕೆಲವು ನಿಯಮಗಳನ್ನು ಪಾಲಿಸಬೇಕು. ಈ ಯೋಜನೆಗಳು ನದಿಯ ಹರಿವನ್ನು ಬದಲಾಯಿಸಬಾರದು. ಭಾರತದ ಜಲವಿದ್ಯುತ್ ಯೋಜನೆಗಳ ಬಗ್ಗೆ ಆಕ್ಷೇಪಣೆಗಳನ್ನು ಸಲ್ಲಿಸುವ ಹಕ್ಕನ್ನು ಪಾಕಿಸ್ತಾನ ಹೊಂದಿದೆ. ಅಲ್ಲದೇ ಈ ಆಕ್ಷೇಪಣೆಗಳನ್ನು ಪರಿಶೀಲಿಸಲು ಒಂದು ತಾಂತ್ರಿಕ ಸಮಿತಿಯನ್ನು ರಚಿಸಲಾಗುತ್ತದೆ. ಸಮಿತಿಯ ತೀರ್ಮಾನವನ್ನು ಎರಡೂ ದೇಶಗಳು ಒಪ್ಪಿಕೊಳ್ಳಬೇಕು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com