
ನವದೆಹಲಿ: ವಿಧಾನಸಭಾ ಚುನಾವಣೆಗೆ ಕೆಲ ದಿನಗಳು ಬಾಕಿಯಿರುವ ಬಿಹಾರದಲ್ಲಿ ಕರಡು ಮತದಾರರ ಪಟ್ಟಿಯಿಂದ ಕೈಬಿಟ್ಟಿರುವ ಸುಮಾರು 65 ಲಕ್ಷ ಮತದಾರರ ವಿವರಗಳನ್ನು ಆಗಸ್ಟ್ 9ರೊಳಗೆ ನೀಡುವಂತೆ ಸುಪ್ರೀಂ ಕೋರ್ಟ್ ಬುಧವಾರ ಚುನಾವಣಾ ಆಯೋಗಕ್ಕೆ ಸೂಚಿಸಿದೆ.
ಈಗಾಗಲೇ ರಾಜಕೀಯ ಪಕ್ಷಗಳೊಂದಿಗೆ ಮಾಹಿತಿ ಹಂಚಿಕೊಂಡಿರುವ ಡಿಲೀಟ್ ಆದ ಮತದಾರರ ವಿವರಗಳನ್ನು ಒದಗಿಸುವಂತೆ ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್, ಉಜ್ಜಲ್ ಭುಯಾನ್ ಮತ್ತು ಎನ್ ಕೋಟೀಶ್ವರ್ ಸಿಂಗ್ ಅವರನ್ನೊಳಗೊಂಡ ತ್ರಿಸದಸ್ಯ ಪೀಠ ಚುನಾವಣಾ ಆಯೋಗಕ್ಕೆ ಸೂಚಿಸಿತು. ಎನ್‌ಜಿಒ ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್‌ಗೆ (ADR)ಪ್ರತಿಯೊಂದನ್ನು ನೀಡುವಂತೆ ಹೇಳಿತು.
ಬಿಹಾರದಲ್ಲಿ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಗೆ ನಿರ್ದೇಶನ ನೀಡುವ ಚುನಾವಣಾ ಆಯೋಗದ ಜೂನ್ 24 ರ ಆದೇಶವನ್ನು ಪ್ರಶ್ನಿಸಿರುವ ಎನ್‌ಜಿಒ, ಸುಮಾರು 65 ಲಕ್ಷ ಡಿಲೀಟ್ ಆದ ಮತದಾರರು ಸಾವನ್ನಪ್ಪಿದ್ದಾರೆಯೇ ಅಥವಾ ಶಾಶ್ವತವಾಗಿ ವಲಸೆ ಹೋಗಿದ್ದಾರೆಯೇ, ಬೇರೆ ಯಾವುದೇ ಕಾರಣಕ್ಕಾಗಿ ಪರಿಗಣಿಸಿಲ್ಲವೇ ಎಂಬುದನ್ನು ನಮೂದಿಸಿ ಅವರ ಹೆಸರನ್ನು ಪ್ರಕಟಿಸುವಂತೆ ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡಬೇಕು ಎಂದು ಕೋರಿ ಹೊಸದಾಗಿ ಅರ್ಜಿ ಸಲ್ಲಿಸಿದೆ.
ಇದೀಗ ಕರಡು ಪಟ್ಟಿ ಮಾತ್ರ ಪ್ರಕಟಿಸಲು ಆಗಿರುವುದರಿಂದ ಯಾಕೆ ಡಿಲೀಟ್ ಮಾಡಲಾಗಿದೆ ಎಂಬುದರ ಮಾಹಿತಿ ಮುಂದಿನ ದಿನಗಳಲ್ಲಿ ಬರಲಿದೆ ಎಂದು ಎನ್‌ಜಿಒ ಪರ ವಾದ ಮಂಡಿಸಿದ ವಕೀಲ ಪ್ರಶಾಂತ್ ಭೂಷಣ್ ಅವರಿಗೆ ಪೀಠ ತಿಳಿಸಿದೆ. ಆದಾಗ್ಯೂ, ಕೆಲವು ರಾಜಕೀಯ ಪಕ್ಷಗಳಿಗೆ ಡಿಲೀಟ್ ಆದ ಮತದಾರರ ಪಟ್ಟಿಯನ್ನು ನೀಡಲಾಗಿದೆ ಆದರೆ ಈ ಮತದಾರರು ಮೃತಪಟ್ಟಿದ್ದಾರೆಯೇ ಅಥವಾ ವಲಸೆ ಹೋಗಿದ್ದಾರೆಯೇ ಎಂಬುದನ್ನು ಸ್ಪಷ್ಟಪಡಿಸಿಲ್ಲ ಎಂದು ಭೂಷಣ್ ಪ್ರತಿಪಾದಿಸಿದ್ದಾರೆ.
ಪ್ರತಿಯೊಬ್ಬ ಮತದಾರರು ಪ್ರಭಾವಕ್ಕೊಳಗಾಗುವ ಸಾಧ್ಯತೆಯನ್ನು ನಾವು ನೋಡುತ್ತೇವೆ ಮತ್ತು ಅಗತ್ಯವಿರುವ ಮಾಹಿತಿಯನ್ನು ಪಡೆಯುತ್ತೇವೆ. ಶನಿವಾರದೊಳಗೆ ಉತ್ತರವನ್ನು ಸಲ್ಲಿಸಿ ಎಂದು ಚುನಾವಣಾ ಆಯೋಗಕ್ಕೆ ನ್ಯಾಯಪೀಠ ಸೂಚಿಸಿತು.
ಈ ಮಧ್ಯೆ ಬಿಹಾರದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆಯನ್ನು ಚುನಾವಣಾ ಆಯೋಗ ಸಮರ್ಥಿಸಿಕೊಂಡಿದೆ. ಇದು ಮತದಾರರ ಪಟ್ಟಿಯಿಂದ "ಅನರ್ಹ ವ್ಯಕ್ತಿಗಳನ್ನು ಹೊರಹಾಕುವ" ಮೂಲಕ ಚುನಾವಣೆಯ ಪಾರದರ್ಶಕತೆಯನ್ನು ಹೆಚ್ಚಿಸುತ್ತದೆ ಎಂದು ಸುಪ್ರೀಂಕೋರ್ಟ್ ಗೆ ಸಲ್ಲಿಸಿರುವ ಅಫಿಡವಿಟ್ ನಲ್ಲಿ ಉಲ್ಲೇಖಿಸಿದೆ.
Advertisement