
ನವದೆಹಲಿ: ಭಾರತದ ಮೇಲೆ ದುಪ್ಪಟ್ಟು ತೆರಿಗೆ ಹೇರುವುದಾಗಿ ಅಮೆರಿಕಾ ಘೋಷಣೆ ಮಾಡಿದ್ದು, ಇದರ ಬೆನ್ನಲ್ಲೇ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಪರೋಕ್ಷವಾಗಿ ಟಾಂಗ್ ನೀಡಿದ್ದಾರೆ.
ದಿವಂಗತ ಖ್ಯಾತ ಕೃಷಿ ವಿಜ್ಞಾನಿ ಎಂ.ಎಸ್. ಸ್ವಾಮಿನಾಥನ್ ಅವರ ಜನ್ಮ ಶತಮಾನೋತ್ಸವದ ಅಂಗವಾಗಿ ನಡೆದ ಮೂರು ದಿನಗಳ ಜಾಗತಿಕ ಸಮ್ಮೇಳನದಲ್ಲಿ ಪ್ರಧಾನಿ ಮೋದಿಯವರು ಮಾತನಾಡಿದರು.
ರೈತರು, ಮೀನುಗಾರರು ಮತ್ತು ಹೈನುಗಾರರ ಹಿತಾಸಕ್ತಿಗಳಲ್ಲಿ ಭಾರತ ಎಂದಿಗೂ ರಾಜಿ ಮಾಡಿಕೊಳ್ಳುವುದಿಲ್ಲ. ಇದಕ್ಕಾಗಿ ಯಾವುದೇ ಬೆಲೆ ತೆರಲೂ ಸಿದ್ಧವಿದೆ ಎಂದು ಹೇಳಿದ್ದಾರೆ.
ನಮಗೆ, ರೈತರ ಹಿತಾಸಕ್ತಿಯೇ ಪ್ರಮುಖ ಆದ್ಯತೆ. ಭಾರತ ಎಂದಿಗೂ ರೈತರು, ಮೀನುಗಾರರು ಮತ್ತು ಹೈನುಗಾರರ ಹಿತಾಸಕ್ತಿಗಳಲ್ಲಿ ರಾಜಿ ಮಾಡಿಕೊಳ್ಳುವುದಿಲ್ಲ. ಇದಕ್ಕಾಗಿ ವೈಯಕ್ತಿಕವಾಗಿ ಬೆಲೆ ತೆರಬೇಕಾದರೂ ನಾನು ಸಿದ್ಧನಿದ್ದೇನೆಂದು ತಿಳಿಸಿದ್ದಾರೆ.
ಇದೇ ವೇಳೆ ಮೋದಿಯವರು ಸ್ವಾಮಿನಾಥನ್ ಅವರಿಗೆ ಗೌರವಾರ್ಥವಾಗಿ ಸ್ಮರಣಾರ್ಥ ನಾಣ್ಯ ಮತ್ತು ಅಂಚೆಚೀಟಿಯನ್ನು ಬಿಡುಗಡೆ ಮಾಡಿದರು.
ಕೃಷಿ ಉತ್ಪನ್ನಗಳು ಸೇರಿದಂತೆ ಭಾರತೀಯ ಸರಕುಗಳ ಮೇಲಿನ ಸುಂಕವನ್ನು ಶೇಕಡಾ 50 ಕ್ಕೆ ಹೆಚ್ಚಿಸುವುದಾಗಿ ಅಮೆರಿಕ ಘೋಷಿಸಿದ ಬೆನ್ನಲ್ಲೇ ಮೋದಿಯವರ ಈ ಹೇಳಿಕೆಯನ್ನು ನೀಡಿದ್ದಾರೆ.
ಸ್ವಾಮಿನಾಥನ್ ಅವರು ಪ್ರಸಿದ್ಧ ಭಾರತೀಯ ತಳಿಶಾಸ್ತ್ರಜ್ಞ ಮತ್ತು ಕೃಷಿ ವಿಜ್ಞಾನಿಯಾಗಿದ್ದರು, 1960 ರ ದಶಕದಲ್ಲಿ ಹೆಚ್ಚಿನ ಇಳುವರಿ ನೀಡುವ ಗೋಧಿ ಮತ್ತು ಆಧುನಿಕ ಕೃಷಿ ತಂತ್ರಗಳನ್ನು ಪರಿಚಯಿಸುವ ಮೂಲಕ ಭಾರತೀಯ ಕೃಷಿಯನ್ನು ಪರಿವರ್ತಿಸುವಲ್ಲಿ ಇವರ ಪಾತ್ರ ಪ್ರಮುಖವಾಗಿದೆ. ಇವರ ಈ ಸಾಧನೆಯು ದೇಶದಲ್ಲಿ ಆಹಾರ ಉತ್ಪಾದನೆಯನ್ನು ಗಮನಾರ್ಹವಾಗಿ ಹೆಚ್ಚಳವಾಯಿತು. ರೈತರ ಬಡತನವನ್ನು ನಿವಾರಿಸಿತು. ಹಾಗಾಗಿ ಇವರನ್ನು "ಹಸಿರು ಕ್ರಾಂತಿಯ ಪಿತಾಮಹ" ಎಂದು ಕರೆಯಲಾಗುತ್ತದೆ.
ಸ್ವಾಮಿನಾಥನ್ ಆಗಸ್ಟ್ 7, 1925 ರಂದು ಕುಂಭಕೋಣಂನಲ್ಲಿ ಜನಿಸಿದರು ಮತ್ತು ಸೆಪ್ಟೆಂಬರ್ 28, 2023 ರಂದು ತಮಿಳುನಾಡಿನ ಚೆನ್ನೈನಲ್ಲಿ 98ನೇ ವಯಸ್ಸಿನಲ್ಲಿ ನಿಧನರಾದರು.
ಭಾರತದ ಮೇಲೆ ಇತ್ತೀಚೆಗಷ್ಟೇ ಶೇ.25ರಷ್ಟು ಪ್ರತಿ ತೆರಿಗೆ ಹೇರಿದ್ದ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಇದೀಗ ರಷ್ಯಾದಿಂದ ತೈಲ ಖರೀದಿ ಮಾಡಿದ್ದಕ್ಕೆ ದಂಡದ ರೂಪದಲ್ಲಿ ಭಾರತದ ಮೇಲೆ ಹೆಚ್ಚುವರಿಯಾಗಿ ಶೇ.25ರಷ್ಟು ತೆರಿಗೆ ಹೇರಿದ್ದಾರೆ. ಇದಕ್ಕೆ ಭಾರತ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, 'ಅಮೆರಿಕದ ನಿರ್ಧಾರ ಅನ್ಯಾಯಯುತವಲ್ಲ, ಅಸಮಂಜಸವಾದುದು' ಎಂದು ಟೀಕಿಸಿದೆ.
ಭಾರತಕ್ಕೆ ಹೆಚ್ಚುವರಿಯಾಗಿ ಶೇ. 25ರಷ್ಟು ಸುಂಕ ವಿಧಿಸುವ ಆದೇಶಕ್ಕೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸಹಿ ಹಾಕಿದ್ದಾರೆ.
ಈ ಆದೇಶದ ಪ್ರಕಾರ, ಭಾರತದಿಂದ ಅಮೆರಿಕಕ್ಕೆ ಆಮದು ಮಾಡಿಕೊಳ್ಳುವ ಸರಕುಗಳಿಗೆ ಹೆಚ್ಚುವರಿಯಾಗಿ ಶೇ.25ರಷ್ಟು ಆಮದು ಸುಂಕ ನೀಡಬೇಕಾಗುತ್ತದೆ.
ರಷ್ಯಾದ ತೈಲವನ್ನು ನಿರಂತರವಾಗಿ ಆಮದು ಮಾಡಿಕೊಳ್ಳುವುದಕ್ಕೆ ಪ್ರತಿಕ್ರಿಯೆಯಾಗಿ ಹೆಚ್ಚುವರಿ ಸುಂಕಗಳನ್ನು ವಿಧಿಸುವ ಅಮೆರಿಕಾದ ನಿರ್ಧಾರವನ್ನು ಭಾರತ ತೀವ್ರವಾಗಿ ಖಂಡಿಸಿದೆ.
ಭಾರತ ಸರ್ಕಾರ ರಷ್ಯಾದಿಂದ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ತೈಲ ಖರೀದಿ ಮಾಡುತ್ತಿದೆ. ಅದರನ್ವಯ, ಜಾರಿಯಲ್ಲಿರುವ ಕಾನೂನಿನ ಅನ್ವಯ ಭಾರತದಿಂದ ಅಮೆರಿಕಕ್ಕೆ ಆಮದು ಮಾಡಿಕೊಳ್ಳುವ ವಸ್ತುಗಳ ಮೇಲೆ ಶೇ.25ರಷ್ಟು ಹೆಚ್ಚುವರಿ ಜಾರಿಗೊಳಿಸಲಾಗುತ್ತಿದೆ. ಇದು ಈಗಾಗಲೇ ಆ ವಸ್ತುಗಳ ಮೇಲೆ ಇರುವ ತೆರಿಗೆ, ಶುಲ್ಕ ಮತ್ತು ಸುಂಕಕ್ಕೆ ಹೊರತಾಗಿ ಇರಲಿದೆ' ಎಂದು ಅಧ್ಯಕ್ಷ ಟ್ರಂಪ್ ತಮ್ಮ ಕಾರ್ಯಾದೇಶದಲ್ಲಿ ಹೇಳಿದ್ದಾರೆ.
ಈ ಆದೇಶದ ಅನ್ವಯ ಅಮೆರಿಕಕ್ಕೆ ಆಮದಾಗುವ ಭಾರತದ ವಸ್ತುಗಳ ಮೇಲಿನ ತೆರಿಗೆ ಶೇ.50ಕ್ಕೆ ಹೆಚ್ಚಳವಾಗಲಿದೆ. ಈ ಪೈಕಿ ಈ ಮೊದಲೇ ಘೋಷಿಸಿದ್ದ ಶೇ.25ರಷ್ಟು ತೆರಿಗೆ ಆ.7ರಿಂದ ಮತ್ತು ಬುಧವಾರ ಘೋಷಿಸಿದ ಹೆಚ್ಚುವರಿ ತೆರಿಗೆ ಆ.27ರಿಂದ ಜಾರಿಗೆ ಬರಲಿದೆ.
Advertisement