
ನವದೆಹಲಿ: ಭಾರತೀಯ ಸರಕುಗಳ ಮೇಲೆ ಹೆಚ್ಚುವರಿಯಾಗಿ 25 ರಷ್ಟು ಸುಂಕ ವಿಧಿಸುವ ಅಮೆರಿಕದ ನಿರ್ಧಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಕೇಂದ್ರ ಸಚಿವ ಪಿಯೂಷ್ ಗೋಯಲ್ ಭಾರತ ಯಾರಿಗೂ ತಲೆಬಾಗುವುದಿಲ್ಲ ಎಂದು ತಿರುಗೇಟು ನೀಡಿದ್ದಾರೆ.
ಜಗತ್ತು ವಿಕಸನಗೊಳ್ಳುತ್ತಲೇ ಇದೆ, ಅಂತರರಾಷ್ಟ್ರೀಯ ವ್ಯಾಪಾರವು ಹೊಸ ಮಾರ್ಗಗಳನ್ನು ಕಂಡುಕೊಳ್ಳುತ್ತಲೇ ಇದೆ. ಇಂದು ನಾವು ನೋಡುತ್ತಿರುವುದು ಬಹುಶಃ ಪ್ರತಿ ಕೆಲವು ವರ್ಷಗಳಿಗೊಮ್ಮೆ ಸಂಭವಿಸುವ ಒಂದು ವಿಧಾನವಾಗಿದೆ. ಹೊಸ ದೇಶಗಳು ಹುಟ್ಟಿಕೊಳ್ಳುತ್ತವೆ, ಕೆಲವು ಕುಸಿಯುತ್ತವೆ. ಇದು ಭಾರತದ ಸಮಯ ಎಂದು ಅವರು ಬಿಸಿನೆಸ್ ಟುಡೇ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಹೇಳಿದರು.
ಜಗತ್ತು ಜಾಗತೀಕರಣವನ್ನು ತಪ್ಪಿಸುತ್ತಿದೆ ಎಂಬ ಕಲ್ಪನೆಯೇ ತಪ್ಪು ಎಂದ ಗೋಯಲ್, ಎಲ್ಲ ರಾಷ್ಟ್ರಗಳು ತಮ್ಮ ವ್ಯಾಪಾರ ಮಾರ್ಗಗಳು ಮತ್ತು ಪಾಲುದಾರರನ್ನು ಪುನಾರಚನೆ ಮಾಡುತ್ತಿವೆ ಎಂದು ವಾದಿಸಿದರು. ಭಾರತ ಕಳೆದ ವರ್ಷಕ್ಕಿಂತ ಈ ವರ್ಷ ಹೆಚ್ಚಿನ ರಫ್ತು ಮಾಡುತ್ತದೆ ಎಂಬ ವಿಶ್ವಾಸ ನನ್ನಲ್ಲಿ ಸಾಕಷ್ಟಿದೆ. ಸುಂಕ ಸಮರದ ಬಳಿಕ ಎದುರಾಗುವ ವ್ಯಾಪಾರ ಅಡೆತಡೆಗಳನ್ನು ನಿವಾರಿಸಲು ಈಗಾಗಲೇ ಕ್ರಮಗಳು ಜಾರಿಯಲ್ಲಿವೆ ಎಂದು ಹೇಳಿದರು.
ದೇಶದ ನೈತಿಕ ಸ್ಥೈರ್ಯ ಹೆಚ್ಚಾಗಿದೆ... ಭಾರತೀಯ ಆರ್ಥಿಕತೆಯಲ್ಲಿ ಸಾಕಷ್ಟು ಬಲವಿದೆ... ಭಾರತ ಪ್ರಬಲ ರಾಷ್ಟ್ರವಾಗಿ ಹೊರಹೊಮ್ಮಲಿದೆ" ಎಂದು ಅವರು ಹೇಳಿದರು.
ಟ್ರಂಪ್ ಅವರ ಸುಂಕಗಳು ಅನಿಶ್ಚಿತತೆಯನ್ನು ಉಂಟುಮಾಡಿವೆ, ಆದಾಗ್ಯೂ, ಭಾರತದ ಆರ್ಥಿಕತೆಯು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಸಚಿವರು ವಿಶ್ವಾಸ ವ್ಯಕ್ತ ಪಡಿಸಿದರು.
ಭಾರತದ ಆರ್ಥಿಕತೆ “ಸತ್ತಿದೆ” ಎನ್ನುವ ಮೂಲಕ ಡೊನಾಲ್ಡ್ ಟ್ರಂಪ್ ಹೇಳಿಕೆ ಬೆಂಬಲಿಸಿದ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿಯನ್ನು ಗೋಯಲ್ ಟೀಕಿಸಿದರು.
ರಾಷ್ಟ್ರವು ಕಾಂಗ್ರೆಸ್ ಕುಡಿಯನ್ನು ಎಂದಿಗೂ ಮರೆಯುವುದಿಲ್ಲ ಎಂದರು. ವಿಪಕ್ಷ ನಾಯಕನ ಹೇಳಿಕೆ ನಾಚಿಕೆಗೇಡಿನ ಸಂಗತಿ. ಅದಕ್ಕಾಗಿ ನಾನು ಅವರನ್ನು ಖಂಡಿಸುತ್ತೇನೆ. ಅವಮಾನಕರ ಟೀಕೆಗಳನ್ನು ಮಾಡಿದ ರಾಹುಲ್ ಗಾಂಧಿಯವರನ್ನು ರಾಷ್ಟ್ರ ಎಂದಿಗೂ ಕ್ಷಮಿಸುವುದಿಲ್ಲ ಎಂದರು.
Advertisement