
ಜೈಪುರ: ತನ್ನ ಕುಟುಂಬದ ಇಚ್ಛೆಗೆ ವಿರುದ್ಧವಾಗಿ ಮದುವೆಯಾದ ಕಾರಣಕ್ಕೆ ರಾಜಸ್ಥಾನದ ಭಿಲ್ವಾರಾ ಜಿಲ್ಲೆಯ ವ್ಯಕ್ತಿಯೊಬ್ಬ ತನ್ನ ಮಗಳು ಬದುಕಿರುವಾಗಲೇ ಸಂತಾಪ ಸೂಚಿಸುವ ಕರಪತ್ರ ಮುದ್ರಿಸಿ, ಅಂತ್ಯಕ್ರಿಯೆಯ ವಿಧಿವಿಧಾನಗಳನ್ನು ನೆರವೇರಿಸಿದ್ದಾನೆ ಎಂದು ಪೊಲೀಸರು ಭಾನುವಾರ ತಿಳಿಸಿದ್ದಾರೆ.
ಅಸಿಂದ್ ಉಪವಿಭಾಗದ ಸರೇರಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಭೈರುಲಾಲ್ ಜೋಶಿ ತನ್ನ ಮಗಳು ಪೂಜಾಳ ಮದುವೆಯನ್ನು ಅದೇ ಗ್ರಾಮದ ನಿವಾಸಿ ಸಂಜಯ್ ತಿವಾರಿ ಜೊತೆ ಮಾಡಿದ್ದನು.
ಸಂಬಂಧಿಕರ ಪ್ರಕಾರ, ಈ ವರ್ಷದ ಏಪ್ರಿಲ್‌ನಲ್ಲಿ ವಿವಾಹವನ್ನು ಅದ್ಧೂರಿಯಾಗಿ ನಡೆಸಲಾಗಿದ್ದು, ಇದಕ್ಕೆ ಲಕ್ಷಾಂತರ ರೂಪಾಯಿ ವೆಚ್ಚ ಮಾಡಲಾಗಿದೆ.
ಆದರೆ, ಜುಲೈ 29 ರಂದು ಭಿಲ್ವಾರಾದ ಮಾಣಿಕ್ಯ ಲಾಲ್ ವರ್ಮಾ ಕಾಲೇಜಿನಲ್ಲಿ ಎಂಎ ಪರೀಕ್ಷೆ ಬರೆಯಲು ಮನೆಯಿಂದ ಹೊರಟಿದ್ದ ತನ್ನ ಮಗಳು ಹಿಂತಿರುಗಿಲ್ಲ ಎಂದು ಜೋಶಿ ಜುಲೈ 30 ರಂದು ದೂರು ದಾಖಲಿಸಿದ್ದಾರೆ ಎಂದು ಹೆಡ್ ಕಾನ್ಸ್‌ಟೇಬಲ್ ಶ್ರವಣ್ ಕುಮಾರ್ ತಿಳಿಸಿದ್ದಾರೆ.
'ನಾವು ಎಲ್ಲ ಕಡೆ ವಿಚಾರಿಸಿದರೂ, ಆಕೆಯ ಯಾವುದೇ ಸುಳಿವು ಸಿಗಲಿಲ್ಲ. ಆಕೆಯ ಫೋನ್ ರಿಂಗಣಿಸುತ್ತಿತ್ತು, ಆದರೆ ಯಾವುದೇ ಪ್ರತಿಕ್ರಿಯೆ ಇರಲಿಲ್ಲ ಎಂದು ಕುಮಾರ್ ಹೇಳಿದರು.
ನಂತರ ಪೊಲೀಸರು ಪತ್ತೆಹಚ್ಚಿದಾಗ ಆಕೆ ತನ್ನ ಪತಿಯ ಸಂಬಂಧಿ ಸೂರಜ್ ತಿವಾರಿ ಎಂಬುವವರನ್ನು ಸ್ವಂತ ಇಚ್ಛೆಯಿಂದ ಮದುವೆಯಾಗಿದ್ದಾಳೆಂದು ತಿಳಿದುಬಂದಿದೆ. ನಾವು ಕುಟುಂಬಕ್ಕೆ ಮಾಹಿತಿ ನೀಡಿದ್ದೇವೆ ಮತ್ತು ಯುವತಿ ಎಸ್ಪಿ ಕಚೇರಿಗೆ ಹಾಜರಾಗುವ ಸಮಯದಲ್ಲಿ, ಅವರು ಹಾಜರಿರುವಂತೆ ಕೇಳಿದ್ದೇವೆ ಎಂದು ಅಧಿಕಾರಿ ತಿಳಿಸಿದ್ದಾರೆ.
ಆಗಸ್ಟ್ 4 ರಂದು ಪೂಜಾ ಎಸ್ಪಿ ಮುಂದೆ ಹಾಜರಾಗಿ ಸೂರಜ್ ಅವರನ್ನು ಸ್ವಇಚ್ಛೆಯಿಂದ ಮದುವೆಯಾಗಿರುವುದಾಗಿ ದೃಢಪಡಿಸಿದ್ದಾರೆ. ತನ್ನ ಸುರಕ್ಷತೆಯ ಬಗ್ಗೆ ಭಯವನ್ನು ವ್ಯಕ್ತಪಡಿಸಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಜೋಶಿ, 'ನನ್ನ ಮಗಳು ಪೊಲೀಸ್ ಠಾಣೆಗೆ ಬಂದಾಗ ನಮ್ಮ ವಿರುದ್ಧ ಹೇಳಿಕೆಗಳನ್ನು ನೀಡಿದ್ದಳು. ನನಗೆ ತುಂಬಾ ನೋವಾಯಿತು ಮತ್ತು ನಮ್ಮ ಪ್ರಕಾರ ಅವಳು ಸತ್ತಿದ್ದಾಳೆಂದು ಪರಿಗಣಿಸಲು ನಿರ್ಧರಿಸಿದೆ. ಅವಳ ಹೆಸರಿನಲ್ಲಿ ಸಂತಾಪ ಸೂಚನೆಯನ್ನು ಮುದ್ರಿಸಿದ್ದೇನೆ ಮತ್ತು ಮನೆಯಲ್ಲಿ 12 ದಿನಗಳ ಶೋಕಾಚರಣೆಯನ್ನು ನಡೆಸುತ್ತಿದ್ದೇನೆ. ಆಗಸ್ಟ್ 10 ರಂದು 'ಮೃತ್ಯುಭೋಜ್' ಅನ್ನು ನಿಗದಿಪಡಿಸಲಾಗಿದೆ' ಎಂದು ಹೇಳಿದರು.
ಕರಪತ್ರದಲ್ಲಿ ಅವರ ವಿವಾಹ ದಿನಾಂಕವನ್ನು ಉಲ್ಲೇಖಿಸಲಾಗಿದ್ದು, ಅವರು ಜುಲೈ 29 ರಂದು ಕುಟುಂಬದ ಪಾಲಿಗೆ 'ಮರಣ ಹೊಂದಿದ್ದಾರೆ' ಎಂದು ಘೋಷಿಸಲಾಗಿದೆ. ಗ್ರಾಮಸ್ಥರು ಮತ್ತು ಸಂಬಂಧಿಕರು ಶೋಕಾಚರಣೆಗಳಲ್ಲಿ ಭಾಗವಹಿಸುತ್ತಿದ್ದಾರೆ ಎಂದು ವರದಿಯಾಗಿದೆ.
Advertisement