
ನವದೆಹಲಿ: ಇಡೀ ದೆಹಲಿಯನ್ನು ಬೀದಿನಾಯಿಗಳಿಂದ ಮುಕ್ತಗೊಳಿಸುವಂತೆ ಸುಪ್ರೀಂ ಕೋರ್ಟ್ ಆದೇಶ ನೀಡಿದ್ದು, ಆದೇಶಕ್ಕೆ ವ್ಯಾಪಕ ವಿರೋಧಗಳು ವ್ಯಕ್ತವಾಗುತ್ತಿವೆ. ಇದರ ಬೆನ್ನಲ್ಲೇ ಆದೇಶ ಮರುಪರಿಶೀಲಿಸುವುದಾಗಿ ಮುಖ್ಯ ನ್ಯಾಯಮೂರ್ತಿಗಳು ಹೇಳಿದ್ದಾರೆ.
ಮಾನವ ಹಕ್ಕುಗಳ ಕಾನ್ಫರೆನಸ್ (ಭಾರತ) ಸಲ್ಲಿಸಿದ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಮತ್ತು ನ್ಯಾಯಮೂರ್ತಿ ಕೆ. ವಿನೋದ್ ಚಂದ್ರನ್ ಅವರ ಪೀಠದ ಮುಂದೆ ವಕೀಲರು ಇಂದು ಪ್ರಸ್ತಾಪಿಸಿದರು.
ಬೀದಿ ನಾಯಿಗಳಿಗೆ ಸಂಬಂಧಿಸಿದಂತೆ ಮತ್ತೊಂದು ಪೀಠವು ಈಗಾಗಲೇ ಆದೇಶವನ್ನು ನೀಡಿದೆ ಎಂದು ಸಿಜೆಐ ಗಮನಸೆಳೆದರು.
ಆಗಸ್ಟ್ 11 ರಂದು, ನ್ಯಾಯಮೂರ್ತಿಗಳಾದ ಜೆ.ಬಿ. ಪಾರ್ದಿವಾಲಾ ಮತ್ತು ಆರ್. ಮಹಾದೇವನ್ ಅವರ ಪೀಠವು, ನಾಯಿ ಕಡಿತ ಪ್ರಕರಣಗಳು ಕಠಿಣ ಪರಿಸ್ಥಿತಿ ನಿರ್ಮಾಣಕ್ಕೆ ಕಾರಣವಾಗಿದೆ. ದೆಹಲಿ ರಾಷ್ಟ್ರ ರಾಜಧಾನಿ ಪ್ರದೇಶದ ಎಲ್ಲ ಸ್ಥಳಗಳಿಂದ ಬೀದಿ ನಾಯಿಗಳನ್ನು ತೆರವು ಮಾಡಬೇಕು. ಈ ಕಾರ್ಯಕ್ಕೆ ಅಡ್ಡಿಪಡಿಸುವ ಪ್ರಾಣಿ ದಯಾ ಹೋರಾಟಗಾರರ ವಿರುದ್ಧ ನ್ಯಾಯಾಂಗ ನಿಂದನೆ ಕ್ರಮ ಕೈಗೊಳ್ಳಲಾಗುವುದು. ದೆಹಲಿ ಸರ್ಕಾರ, ಎಂಸಿಡಿ, ಎನ್‌ಡಿಎಂಸಿಗಳು 8 ವಾರಗಳಲ್ಲಿ ಶ್ವಾನ ಆಶ್ರಯ ಕೇಂದ್ರಗಳನ್ನು ರಚಿಸಬೇಕು. ಈ ಕೇಂದ್ರಗಳನ್ನು ಸಿಸಿಟಿವಿ ಮೂಲಕ ಮೇಲ್ವಿಚಾರಣೆ ಮಾಡಬೇಕು ಎಂದು ಆದೇಶಿಸಿದೆ ಎಂದು ಹೇಳಿದರು.
ಇದೇ ವೇಳೆ ನ್ಯಾಯಮೂರ್ತಿ ಜೆ.ಕೆ. ಮಹೇಶ್ವರಿ ನೇತೃತ್ವದ ಪೀಠವು ಬೀದಿ ನಾಯಿ ಸಮಸ್ಯೆಗೆ ಸಂಬಂಧಿಸಿದ ಅರ್ಜಿಗಳನ್ನು ಆಯಾ ಹೈಕೋರ್ಟ್‌ಗಳಿಗೆ ವರ್ಗಾಯಿಸುವ ಮೂಲಕ ಮೇ 2024 ರಲ್ಲಿ ಹೊರಡಿಸಿದ ಆದೇಶವನ್ನು ವಕೀಲರು ಉಲ್ಲೇಖಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಅವರು, ಆದೇಶವನ್ನು ಮರುಪರಿಶೀಲಿಸುವುದಾಗಿ ತಿಳಿಸಿದರು.
ಆಗಸ್ಟ್ 11 ರಂದು ಆದೇಶ ನೀಡಿದ್ದ ಸುಪ್ರೀಂಕೋರ್ಟ್, ದೆಹಲಿಯ ಎಲ್ಲಾ ಪ್ರದೇಶಗಳನ್ನು ಬೀದಿನಾಯಿ ಮುಕ್ತಗೊಳಿಸಬೇಕು ಈ ವಿಚಾರದಲ್ಲಿ ಯಾವುದೇ ರಾಜಿ ಮಾಡಿಕೊಳ್ಳುವಂತಿಲ್ಲ. ಈ ಕಾರ್ಯಕ್ಕೆ ಅಡ್ಡಿಪಡಿಸುವ ಪ್ರಾಣಿ ದಯಾ ಹೋರಾಟಗಾರರ ವಿರುದ್ಧ ನ್ಯಾಯಾಂಗ ನಿಂದನೆ ಕ್ರಮ ಕೈಗೊಳ್ಳಲಾಗುವುದು. ದೆಹಲಿ ಸರ್ಕಾರ, ಎಂಸಿಡಿ, ಎನ್‌ಡಿಎಂಸಿಗಳು 8 ವಾರಗಳಲ್ಲಿ ಶ್ವಾನ ಆಶ್ರಯ ಕೇಂದ್ರಗಳನ್ನು ರಚಿಸಬೇಕು. ಈ ಕೇಂದ್ರಗಳನ್ನು ಸಿಸಿಟಿವಿ ಮೂಲಕ ಮೇಲ್ವಿಚಾರಣೆ ಮಾಡಬೇಕು ಎಂದು ಆದೇಶಿಸಿತ್ತು.
ಸೆರೆಹಿಡಿಯಲಾದ ಬೀದಿ ನಾಯಿಗಳ ದೈನಂದಿನ ದಾಖಲೆಗಳನ್ನು ನಿರ್ವಹಿಸಬೇಕು. ಒಂದೇ ಒಂದು ಬೀದಿ ನಾಯಿಯನ್ನೂ ಬಿಡಬಾರದು; ನಾಯಿ ಕಡಿತ ಪ್ರಕರಣಗಳನ್ನು ವರದಿ ಮಾಡಲು ವಾರದೊಳಗೆ ಸಹಾಯವಾಣಿಗೆ ವ್ಯವಸ್ಥೆ ಮಾಡಬೇಕು. ರೇಬಿಸ್ ಲಸಿಕೆ ದೊರೆಯುವ ಸ್ಥಳಗಳ ಕುರಿತು ವರದಿ ಪ್ರಕಟಿಸಬೇಕು ಎಂದು ತಾಕೀತು ಮಾಡಿತ್ತು.
ಸಾರ್ವಜನಿಕ ಹಿತಾಸಕ್ತಿಗಾಗಿ ಈ ಆದೇಶ ನೀಡಲಾಗುತ್ತಿದ್ದು ನಾಯಿಗಳನ್ನು ದೂರದ ಸ್ಥಳಗಳಿಗೆ ಸ್ಥಳಾಂತರಿಸಬೇಕು. ಯಾವುದೇ ರೀತಿಯ ಭಾವನೆಗಳಿಗೆ ಆಸ್ಪದವಿಲ್ಲ ಎಂದೂ ಸ್ಪಷ್ಟಪಡಿಸಿದೆ. ಕೂಡಲೇ ಕ್ರಮಗಳನ್ನು ಕೈಗೊಳ್ಳುವಂತೆ ಪ್ರಾದಿಕಾರಗಳಿಗೆ ತಾಕೀತು ಮಾಡಿತ್ತು. ಇದಕ್ಕೆ ಪ್ರಾಣಿಪ್ರಿಯರು ಸೇರಿದಂತೆ ಹಲವರಿಂದ ವಿರೋಧ ಹಾಗೂ ಟೀಕೆಗಳು ವ್ಯಕ್ತವಾಗುತ್ತಿವೆ.
Advertisement