
ನವದೆಹಲಿ: ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಜೊತೆಗಿನ ಅಲಸ್ಕಾದಲ್ಲಿ ನಡೆದ ದ್ವಿಪಕ್ಷೀಯ ಮಾತುಕತೆ ಬೆನ್ನಲ್ಲೇ ಭಾರತದ ಕುರಿತ ತಮ್ಮ ವರಸೆಯನ್ನು ಬದಲಿಸಿದಂತಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ 2ನೇ ಸುಂಕ ವಿಧಿಸದಿರುವ ಕುರಿತು ಸುಳಿವು ನೀಡಿದ್ದಾರೆ.
ಹೌದು.. ರಷ್ಯಾದಿಂದ ಕಚ್ಚಾ ತೈಲ ಖರೀದಿಸುತ್ತಿರುವ ರಾಷ್ಟ್ರಗಳ ಮೇಲೆ 2ನೇ ಬಾರಿ ವಿಧಿಸಿದ್ದ ಹೆಚ್ಚುವರಿ ಸುಂಕವನ್ನು ಹೇರದಿರುವ ಸುಳಿವನ್ನು ಅಮೆರಿಕದ ಟ್ರಂಪ್ ಸರ್ಕಾರ ನೀಡಿದೆ. ಅಲಸ್ಕಾದಲ್ಲಿ ನಡೆದ ಅಮೆರಿಕ ಹಾಗೂ ರಷ್ಯಾ ಅಧ್ಯಕ್ಷರ ಸಭೆಯಲ್ಲಿ ಉಕ್ರೇನ್ ಜತೆ ನಡೆಯುತ್ತಿರುವ ಯುದ್ಧದ ಕುರಿತು ಯಾವುದೇ ಒಪ್ಪಂದವಿಲ್ಲದೆ ಕೊನೆಗೊಂಡಿದೆ.
ಇದರ ಬೆನ್ನಲ್ಲೇ ಈ ಕುರಿತು ಪ್ರತಿಕ್ರಿಯಿಸಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, 'ರಷ್ಯಾ ತನ್ನ ಒಬ್ಬ ತೈಲ ಖರೀದಿದಾರರನ್ನು ಕಳೆದುಕೊಂಡಿದೆ.
ಭಾರತದ ಶೇ 40ರಷ್ಟು ತೈಲವನ್ನು ರಷ್ಯಾದಿಂದ ಖರೀದಿಸುತ್ತಿದೆ. ಚೀನಾ ಕೂಡಾ ಹೆಚ್ಚಿನ ತೈಲವನ್ನು ರಷ್ಯಾದಿಂದ ಖರೀದಿಸುತ್ತಿದೆ. ಹೆಚ್ಚುವರಿ ಸುಂಕ ವಿಧಿಸಿದರೆ ಅವರ ಸ್ಥಿತಿ ಚಿಂತಾಜನಕವಾಗಲಿದೆ. ಹಾಗೆ ಮಾಡಬೇಕೆಂದಿದ್ದರೆ ನಾನು ಮಾಡಿಯೇ ತೀರುತ್ತೇನೆ. ಆದರೆ ನಾನು ಹಾಗೆ ಮಾಡುವುದಿಲ್ಲ' ಎಂದಿದ್ದರು.
'ನಾನು ದ್ವಿತೀಯ ನಿರ್ಬಂಧ ಅಥವಾ ದ್ವಿತೀಯ ಸುಂಕ ಎಂದು ಕರೆಯಲ್ಪಡುವದನ್ನು ಮಾಡಿದರೆ, ಅದು ಅವರ ದೃಷ್ಟಿಕೋನದಿಂದ ಬಹಳ ವಿನಾಶಕಾರಿಯಾಗಿದೆ. ನಾನು ಅದನ್ನು ಮಾಡಬೇಕಾದರೆ, ನಾನು ಅದನ್ನು ಮಾಡುತ್ತೇನೆ. ಬಹುಶಃ ನಾನು ಅದನ್ನು ಮಾಡಬೇಕಾಗಿಲ್ಲ ಎಂದು ಟ್ರಂಪ್ ಫಾಕ್ಸ್ ನ್ಯೂಸ್ ಜೊತೆ ಮಾತನಾಡುತ್ತಾ ತಿಳಿಸಿದ್ದಾರೆ.
ತನ್ನ ದೇಶಕ್ಕೆ ಆಮದಾಗುವ ಭಾರತೀಯ ವಸ್ತುಗಳ ಮೇಲೆ ಮೊದಲು ಶೇ 25ರಷ್ಟು ಸುಂಕವನ್ನು ಅಮೆರಿಕ ಹೇರಿತ್ತು. ಆದರೆ ರಷ್ಯಾದಿಂದ ತೈಲ ಖರೀದಿಗೆ ದಂಡ ವಿಧಿಸುವುದಾಗಿ ಹೇಳಿತ್ತು. ನಂತರ ಹೆಚ್ಚುವರಿಯಾಗಿ ಶೇ 25ರಷ್ಟು ದಂಡ ವಿಧಿಸಿತ್ತು. ಇದು ಆಗಸ್ಟ್ 27ರಿಂದ ಜಾರಿಗೆ ಬರಲಿದೆ. ಒಂದೊಮ್ಮೆ ಇದನ್ನೂ ಜಾರಿಗೆ ತಂದಲ್ಲಿ ಭಾರತದ ವಸ್ತುಗಳ ಮೇಲೆ ಒಟ್ಟು ಶೇ 50ರಷ್ಟು ಸುಂಕವನ್ನು ಅಮೆರಿಕ ವಿಧಿಸಿದಂತಾಗಲಿದೆ. ಇದು ಭಾರತದ ರಫ್ತುದಾರರಲ್ಲಿ ತೀವ್ರ ಆತಂಕ ಸೃಷ್ಟಿಸಿತ್ತು.
ರಷ್ಯಾ ಅಧ್ಯಕ್ಷರ ಸಭೆ ಫಲಪ್ರದ?
ಇನ್ನು ಈ ಹಿಂದೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಪುಟಿನ್ ನಡುವಿನ ಸಭೆ ಫಲಪ್ರದವಾಗದಿದ್ದರೆ ರಷ್ಯಾದಿಂದ ತೈಲ ಖರೀದಿಸುತ್ತಿರುವ ಭಾರತದ ಮೇಲೆ ಇನ್ನೂ ಹೆಚ್ಚಿನ ಸುಂಕ ವಿಧಿಸಲಾಗುತ್ತದೆ ಎಂದು ಅಮೆರಿಕ ಹಣಕಾರು ಕಾರ್ಯದರ್ಶಿ ಸ್ಕಾಟ್ ಬೆಸೆಂಟ್ ಹೇಳಿದ್ದರು.
ಈ ಹಿಂದೆ ಸಂದರ್ಶನ ಒಂದರಲ್ಲಿ ಮಾತನಾಡಿದ್ದ ಅವರು, 'ಪುಟಿನ್ ನಡೆಯಿಂದ ಎಲ್ಲರೂ ಹೈರಾಣಾಗಿದ್ದಾರೆ. ಸಂಪೂರ್ಣ ಮನಸ್ಸಿಂದ ಅವರು ಸಂಧಾನ ಸಭೆಗೆ ಬರುತ್ತಾರೆ ಎಂಬ ನಿರೀಕ್ಷೆ ಇದೆ. ಮಾತುಕತೆಗೆ ಅವರೂ ಸಿದ್ಧರಿದ್ದಾರೆ ಎಂಬ ನಂಬಿಕೆ ಇದೆ' ಎಂದಿದ್ದಾರೆ.
ಭಾರತದ ಅಸಮಾಧಾನ
ಇತ್ತ ಅಮೆರಿಕದ ಸುಂಕ ಹೇರಿಕೆಯ ನಿರ್ಧಾರಕ್ಕೆ ಭಾರತದ ವಿದೇಶಾಂಗ ಸಚಿವಾಲಯವು ತೀವ್ರ ಅಸಮಾಧಾನ ವ್ಯಕ್ತಪಡಿಸಿತ್ತು. ಅಮೆರಿಕದ ಕ್ರಮವು ನ್ಯಾಯಸಮ್ಮತವಲ್ಲದ ಮತ್ತು ಅಸಮಂಜಸ ಕ್ರಮವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿತ್ತು. ಯಾವುದೇ ಪ್ರಮುಖ ಆರ್ಥಿಕ ರಾಷ್ಟ್ರದಂತೆ ಭಾರತವು ತನ್ನ ದೇಶದ ಹಿತ ಮತ್ತು ಆರ್ಥಿಕ ಭದ್ರತೆಗೆ ಅಗತ್ಯವಿರುವ ಎಲ್ಲಾ ಕ್ರಮಗಳನ್ನೂ ಕೈಗೊಳ್ಳಲಿದೆ’ ಎಂದಿತ್ತು.
Advertisement