
ನವದೆಹಲಿ: 65 ವರ್ಷದ ತನ್ನ ತಾಯಿಯ ಮೇಲೆ ಎರಡು ಬಾರಿ ಅತ್ಯಾಚಾರ ಎಸಗಿದ ಆರೋಪದ ಮೇಲೆ 39 ವರ್ಷದ ವ್ಯಕ್ತಿಯೊಬ್ಬನನ್ನು ಬಂಧಿಸಲಾಗಿದೆ. ಈ ಹಿಂದೆ ಆಕೆ ಹೊಂದಿದ್ದ ಸಂಬಂಧಕ್ಕೆ ತಾನು ಶಿಕ್ಷೆ ನೀಡುತ್ತಿದ್ದೇನೆ ಎಂದು ಆರೋಪಿಸಿ ಕೃತ್ಯ ಎಸಗಿದ್ದಾನೆ.
ಪೊಲೀಸರ ಪ್ರಕಾರ, ಮಹಿಳೆ ತನ್ನ 25 ವರ್ಷದ ಮಗಳೊಂದಿಗೆ ತೆರಳಿ ಹೌಜ್ ಖಾಜಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ದೂರಿನ ಪ್ರಕಾರ, ಮಹಿಳೆ ತನ್ನ ಪತಿ, ನಿವೃತ್ತ ಸರ್ಕಾರಿ ಉದ್ಯೋಗಿ, ಆರೋಪಿ ಮಗ ಮತ್ತು ಕಿರಿಯ ಮಗಳೊಂದಿಗೆ ದೆಹಲಿಯ ಹೌಜ್ ಖಾಜಿ ಪ್ರದೇಶದಲ್ಲಿ ವಾಸಿಸುತ್ತಿದ್ದಾರೆ. ದಂಪತಿಗೆ ಹಿರಿಯ ಮಗಳು ಕೂಡ ಇದ್ದಾಳೆ. ಅವರು ವಿವಾಹಿತರಾಗಿದ್ದು, ಗಂಡನ ಮನೆಯಲ್ಲಿ ಅಲ್ಲೇ ಹತ್ತಿರದಲ್ಲೇ ವಾಸವಿದ್ದಾರೆ.
ಜುಲೈ 17 ರಂದು, ಮಹಿಳೆ, ಆಕೆಯ ಪತಿ ಮತ್ತು ಕಿರಿಯ ಮಗಳು ಸೌದಿ ಅರೇಬಿಯಾಕ್ಕೆ ಧಾರ್ಮಿಕ ಪ್ರವಾಸಕ್ಕಾಗಿ ಪ್ರಯಾಣ ಬೆಳೆಸಿದರು. ಅವರ ಪ್ರವಾಸದ ಸಮಯದಲ್ಲಿಯೇ, ಆರೋಪಿ ತನ್ನ ತಂದೆಗೆ ಕರೆ ಮಾಡಿ ತಕ್ಷಣ ದೆಹಲಿಗೆ ಹಿಂತಿರುಗುವಂತೆ ಮತ್ತು ತನ್ನ ತಾಯಿಗೆ ವಿಚ್ಛೇದನ ನೀಡುವಂತೆಯೂ ಒತ್ತಾಯಿಸಿದ್ದಾನೆ. ತನ್ನ ಬಾಲ್ಯದಲ್ಲಿ ಆಕೆ ಅಕ್ರಮ ಸಂಬಂಧ ಹೊಂದಿದ್ದಳು ಎಂದು ಆರೋಪಿಸಿದ್ದಾನೆೇ.
ಆಗಸ್ಟ್ 1 ರಂದು ಕುಟುಂಬವು ದೆಹಲಿಗೆ ಹಿಂತಿರುಗಿದ ನಂತರ, ಆರೋಪಿಯು ತನ್ನ ತಾಯಿಯನ್ನು ಕೋಣೆಯಲ್ಲಿ ಕೂಡಿಹಾಕಿದ್ದಾನೆ. ಆಕೆಯ ಬುರ್ಖಾವನ್ನು ತೆಗೆಯುವಂತೆ ಒತ್ತಾಯಿಸಿ, ಹಲ್ಲೆ ನಡೆಸಿ, ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಬಾಲ್ಯದಲ್ಲಿ ಆಕೆ ತನ್ನನ್ನು ಹಾಳು ಮಾಡಿದ್ದಾಳೆಂದು ಆತ ಆಕೆಗೆ ಹೇಳಿದ್ದಾನೆ ಎಂದು ಆರೋಪಿಸಲಾಗಿದೆ.
ಬಳಿಕ ಮಹಿಳೆ ಮನೆ ಬಿಟ್ಟು ತೆರಳಿ ತನ್ನ ಹಿರಿಯ ಮಗಳ ಮನೆಯಲ್ಲಿ ಆಶ್ರಯ ಪಡೆದಿದ್ದರು.
ಆಗಸ್ಟ್ 11 ರಂದು ಅವರು ಹಿಂತಿರುಗಿದಾಗಲೂ ದೌರ್ಜನ್ಯ ಮುಂದುವರೆದಿದೆ. ರಾತ್ರಿ 9.30ರ ಸುಮಾರಿಗೆ, ಆರೋಪಿಯು ತನ್ನ ತಾಯಿಯೊಂದಿಗೆ ಖಾಸಗಿಯಾಗಿ ಮಾತನಾಡಬೇಕೆಂದು ತನ್ನ ಕುಟುಂಬಕ್ಕೆ ಹೇಳಿದ್ದಾನೆ. ಆಗ ಆತ ಮತ್ತೆ ಆಕೆಯನ್ನು ಕೋಣೆಯಲ್ಲಿ ಕೂಡಿಹಾಕಿ, ಆಕೆಯ ಹಿಂದಿನ ಸಂಬಂಧಕ್ಕಾಗಿ ಆಕೆಯನ್ನು ಶಿಕ್ಷಿಸುತ್ತಿರುವುದಾಗಿ ಹೇಳಿದ್ದಾನೆ.
ಆಗಸ್ಟ್ 14 ರಂದು, ಬೆಳಗಿನ ಜಾವ 3.30ರ ಸುಮಾರಿಗೆ, ಆರೋಪಿಯು ಅವಳ ಮೇಲೆ ಎರಡನೇ ಬಾರಿ ಅತ್ಯಾಚಾರ ಮಾಡಿದ್ದಾನೆ.
ಮರುದಿನ, ಆ ಮಹಿಳೆ ತನ್ನ ಕಿರಿಯ ಮಗಳಿಗೆ ವಿಷಯ ತಿಳಿಸಿದ್ದಾರೆ. ಬಳಿಕ ಆಕೆ ಪೊಲೀಸರನ್ನು ಸಂಪರ್ಕಿಸಲು ತಿಳಿಸಿದ್ದಾರೆ. ಇಬ್ಬರೂ ಹೌಜ್ ಖಾಜಿ ಪೊಲೀಸ್ ಠಾಣೆಗೆ ಹೋಗಿ ಲಿಖಿತ ದೂರು ಸಲ್ಲಿಸಿದ್ದಾರೆ.
Advertisement