
ಹೈದರಾಬಾದ್: ಶ್ರೀಕೃಷ್ಣ ಶೋಭಾ ಯಾತ್ರೆ ವೇಳೆ ರಥಕ್ಕೆ ವಿದ್ಯುತ್ ಸ್ಪರ್ಶಿಸಿ ಐವರು ಸಾವನ್ನಪ್ಪಿದ್ದು, ನಾಲ್ವರು ಗಾಯಗೊಂಡಿರುವ ಘಟನೆ ಉಪ್ಪಳ ಪೊಲೀಸ್ ವ್ಯಾಪ್ತಿಯ ರಾಮಂತಪುರದಲ್ಲಿ ಭಾನುವಾರ ರಾತ್ರಿ ನಡೆದಿದೆ.
ಸ್ಥಗಿತಗೊಂಡಿದ್ದ ರಥವನ್ನು ಮುಂದಕ್ಕೆ ತಳ್ಳುತ್ತಿದ್ದಾಗ ಓವರ್ ಹೆಡ್ ವಿದ್ಯುತ್ ತಂತಿಗಳು ಸ್ಪರ್ಶಿಸಿ ಈ ದುರ್ಘಟನೆ ಸಂಭವಿಸಿದೆ. ಮೃತರನ್ನು ಕೃಷ್ಣ (21), ಶ್ರೀಕಾಂತ್ ರೆಡ್ಡಿ (35), ಸುರೇಶ್ ಯಾದವ್ (34), ರುದ್ರ ವಿಕಾಸ್ (39), ಮತ್ತು ರಾಜೇಂದ್ರ ರೆಡ್ಡಿ (45) ಎಂದು ಗುರುತಿಸಲಾಗಿದೆ.
ಶ್ರೀಕೃಷ್ಣ ಶೋಭಾ ಯಾತ್ರೆಯ ಮೆರವಣಿಗೆ ಮುಕ್ತಾಯವಾಗುತ್ತಿದ್ದಂತೆ ರಥವನ್ನು ಹೊತ್ತ ವಾಹನವೊಂದು ನಿಂತಿತು.
ಸುಮಾರು ಹತ್ತು ಮಂದಿ ಭಕ್ತರು ರಥವನ್ನು ಮುಂದಕ್ಕೆ ತಳ್ಳಲು ಯತ್ನಿಸಿದ್ದು, ಓವರ್ ಹೆಡ್ ವಿದ್ಯುತ್ ತಂತಿಗಳು ರಥಕ್ಕೆ ಸ್ಪರ್ಶಿಸಿ ಈ ದುರ್ಘಟನೆ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ತದನಂತರ ಇತರ ಕಡೆಗಳಿಗೆ ಸ್ಥಳಾಂತರಿಸಲಾಗಿದೆ.
ಪೊಲೀಸರು ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಗಾಂಧಿ ಆಸ್ಪತ್ರೆಗೆ ರವಾನಿಸಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗಿದೆ.
Advertisement