
ಅಹ್ಮದಾಬಾದ್: ಗುಜರಾತ್‌ನ ನವಸಾರಿಯಲ್ಲಿ ನಡೆದ ದೇಗುಲ ಜಾತ್ರೆ ವೇಳೆ Tower Ride ಕುಸಿದು ಬಿದ್ದು ಮಕ್ಕಳು ಸೇರಿ 5 ಮಂದಿ ಗಾಯಗೊಂಡಿರುವ ಘಟನೆ ವರದಿಯಾಗಿದೆ.
ಇದೇ ಭಾನುವಾರ ರಾತ್ರಿ ಗುಜರಾತ್‌ನ ನವಸಾರಿಯ ಬಿಲಿಮೋರಾದ ಸೋಮನಾಥ ದೇವಸ್ಥಾನದ ಜಾತ್ರೆಯಲ್ಲಿ ಈ ದುರ್ಘಟನೆ ಸಂಭವಿಸಿದ್ದು, ಇಲ್ಲಿ ಅಳವಡಿಸಲಾಗಿದ್ದ ಬೃಹತ್ ಟವರ್ ರೈಡ್ 50 ಅಡಿ ಎತ್ತರದಿಂದ ಜನರ ಸಮೇತ ಮುರಿದು ಬಿದ್ದಿದೆ. ಈ ಅಪಘಾತದಲ್ಲಿ, 2 ಮಕ್ಕಳು ಸೇರಿದಂತೆ 5 ಜನರು ಗಾಯಗೊಂಡಿದ್ದು, ಗಾಯಾಳುಗಳನ್ನು ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ದುರಂತದ ವೇಳೆ ರೈಡ್‌ನಲ್ಲಿ 10 ರಿಂದ 12 ಜನರಿದ್ದರು. ಇಬ್ಬರು ಮಕ್ಕಳು ಮತ್ತು ರೈಡ್ ಆಪರೇಟರ್ ಗಂಭೀರವಾಗಿ ಗಾಯಗೊಂಡಿದ್ದಾರೆ. ಇತರ ಗಾಯಗೊಂಡವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ರೈಡ್ ಆಪರೇಟರ್ ತಲೆ ಮತ್ತು ಸೊಂಟಕ್ಕೆ ಗಂಭೀರ ಗಾಯಗಳಾಗಿವೆ ಎಂದು ತಿಳಿದುಬಂದಿದೆ.
ಅಂತೆಯೇ ಈ ದುರಂತದಲ್ಲಿ ಟವರ್ ರೈಡ್ ಕೆಳಗೆ ನಿರ್ವಹಣೆ ಮಾಡುತ್ತಿದ್ದ ಆಪರೇಟರ್ ಗೂ ಕೂಡ ಗಂಭೀರ ಗಾಯಗಳಾಗಿದ್ದು, ಆತನ ಸ್ಥಿತಿ ಗಂಭೀರವಾಗಿರುವುದರಿಂದ ಅವರನ್ನು ಸೂರತ್‌ನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.
ಬಿಲಿಮೋರಾದ ಸೋಮನಾಥ ದೇವಸ್ಥಾನದಲ್ಲಿ ಜಾತ್ರೆ ಆಯೋಜಿಸಲಾಗಿದ್ದು, ಜಾತ್ರೆಗೆ ಶಿವಂ ಏಜೆನ್ಸಿ ಅನುಮತಿ ತೆಗೆದುಕೊಂಡಿತ್ತು. ಈ ಏಜೆನ್ಸಿಯ ಮಾಲೀಕ ವಿರಲ್ ಪಿತ್ವ ಮೂಲತಃ ಸುರೇಂದ್ರನಗರದ ನಿವಾಸಿಯಾಗಿದ್ದು, ಬಿಲಿಮೋರಾ ಜಾತ್ರೆಯಲ್ಲಿ ಶಿವಂ ಏಜೆನ್ಸಿ ಮೊದಲ ಬಾರಿಗೆ ಟವರ್ ರೈಡ್ ಸೇರಿದಂತೆ ಏಳು ವಿಭಿನ್ನ ರೈಡ್ ಗಳಿಗೆ ಅನುಮತಿ ಪಡೆದಿತ್ತು. ಅಪಘಾತದ ನಂತರ, ಸೋಮನಾಥ ದೇವಸ್ಥಾನ ಆವರಣದಲ್ಲಿರುವ ಎಲ್ಲಾ ದೊಡ್ಡ ರೈಡ್ ಗಳನ್ನು ಮುಚ್ಚಲಾಗಿದೆ.
ಬಾಡಿಗೆಗೆ ಮಾತ್ರ ಪಡೆದಿದ್ದೇವೆ: ಸೋಮನಾಥ ದೇವಸ್ಥಾನ ಟ್ರಸ್ಟ್ ಸ್ಪಷ್ಟನೆ
ಇನ್ನು ಅಪಘಾತದ ಕುರಿತು ಪ್ರತಿಕ್ರಿಯೆ ನೀಡಿರುವ ಸೋಮನಾಥ ದೇವಸ್ಥಾನ ಟ್ರಸ್ಟ್, ಅವರು ಭೂಮಿಯನ್ನು ಮಾತ್ರ ಗುತ್ತಿಗೆ ಪಡೆದಿದ್ದಾರೆ. ಸವಾರಿಯ ತಾಂತ್ರಿಕ ಪರಿಶೀಲನೆಯ ಜವಾಬ್ದಾರಿ ಸಂಬಂಧಪಟ್ಟ ಮೇಳದ ಅಧಿಕಾರಿಗಳದ್ದಾಗಿದೆ. ಹೀಗಾಗಿ, ಅಪಘಾತ ಪ್ರಕರಣದಲ್ಲಿ ಅವರಿಗೆ ಯಾವುದೇ ಜವಾಬ್ದಾರಿ ಇಲ್ಲ ಎಂದು ದೇವಾಲಯ ಟ್ರಸ್ಟ್ ಸ್ಪಷ್ಟಪಡಿಸಿದೆ.
ಕೊನೆಯ ಶ್ರಾವಣ ಸೋಮವಾರ ಜಾತ್ರೆ
ಈ ಬಗ್ಗೆ, ಬಿಲಿಮೋರಾ ಪುರಸಭೆಯ ಉದ್ಯೋಗಿ ಮಲಂಗ್‌ಭಾಯ್ ಕೋಲಿಯಾ ಅವರು ಗುಜರಾತ್‌ನಲ್ಲಿ ಕೊನೆಯ ಸಾವನ್ ಸೋಮವಾರವಾಗಿದ್ದು, ಹೀಗಾಗಿ, ಇದು ಮೇಳದ ಅಂತಿಮ ಸುತ್ತು ಕೂಡ ಆಗಿದೆ. ಭಾನುವಾರವಾದ್ದರಿಂದ, ಮೇಳದಲ್ಲಿ ಉತ್ತಮ ಜನಸಂದಣಿ ಇತ್ತು. ಕೇಬಲ್ ಅಸಮರ್ಪಕ ಕಾರ್ಯದಿಂದಾಗಿ ಈ ದುರ್ಘಟನೆ ಸಂಭವಿಸಿದೆ ಎಂದು ತೋರುತ್ತದೆ. ಪ್ರಸ್ತುತ, ಎಫ್‌ಎಸ್‌ಎಲ್ ತಂಡವು ಈ ಬಗ್ಗೆ ತನಿಖೆ ನಡೆಸುತ್ತಿದೆ ಎಂದು ತಿಳಿಸಿದ್ದಾರೆ.
Advertisement