
ನವದೆಹಲಿ: ಬೀದಿ ನಾಯಿಗಳನ್ನು ಆಶ್ರಯ ತಾಣಗಳಿಗೆ ಸ್ಥಳಾಂತರ ಸಂಬಂಧ ದೆಹಲಿ ಮಹಾನಗರ ಪಾಲಿಕೆ ಹೊರಡಿಸಿದ ಅಧಿಸೂಚನೆಯನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಯ ತುರ್ತು ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಗುರುವಾರ ನಿರಾಕರಿಸಿದೆ.
ಈ ಸಂಬಂಧ ಅರ್ಜಿ ಸಲ್ಲಿಸಲಾಗಿದೆ ಎಂದು ವಕೀಲರು ತಿಳಿಸಿದ ನಂತರ, ನ್ಯಾಯಮೂರ್ತಿಗಳಾದ ಜೆಕೆ ಮಹೇಶ್ವರಿ ಮತ್ತು ವಿಜಯ್ ಬಿಷ್ಣೋಯ್ ಅವರಿದ್ದ ಪೀಠವು ತುರ್ತು ವಿಚಾರಣೆಯನ್ನು ನಡೆಸಲು ನಿರಾಕರಿಸಿದೆ.
ಸುಪ್ರೀಂ ಕೋರ್ಟ್ ಆದೇಶಗಳನ್ನು ಕಾಯ್ದಿರಿಸಿದ್ದರೂ, ಎಂಸಿಡಿ ಅಧಿಸೂಚನೆ ಹೊರಡಿಸಿದೆ ಎಂದು ಅರ್ಜಿಯಲ್ಲಿ ಹೇಳಲಾಗಿದೆ.
ನ್ಯಾಯಮೂರ್ತಿಗಳಾದ ಜೆಬಿ ಪಾರ್ದಿವಾಲಾ ಮತ್ತು ಆರ್ ಮಹಾದೇವನ್ ಅವರನ್ನೊಳಗೊಂಡ ಪೀಠವು, ದೆಹಲಿ-ಎನ್‌ಸಿಆರ್ ಸುತ್ತಮುತ್ತಲಿನಲ್ಲಿ ಬೀದಿ ನಾಯಿಗಳನ್ನು ಹಿಡಿದು ಅವುಗಳನ್ನು ಆಶ್ರಯ ತಾಣಗಳಿಗೆ ಸ್ಥಳಾಂತರಿಸುವಂತೆ ಆಗಸ್ಟ್ 11 ರಂದು ಅಧಿಕಾರಿಗಳಿಗೆ ನಿರ್ದೇಶಿಸಿತ್ತು.
ಈ ನಿರ್ದೇಶನಗಳಿಗೆ ತಡೆ ನೀಡಬೇಕೆಂದು ಕೋರಿ ಸಲ್ಲಿಸಲಾದ ಮಧ್ಯಂತರ ಅರ್ಜಿಯ ಮೇಲಿನ ಆದೇಶವನ್ನು ಕಾಯ್ದಿರಿಸಿದ್ದ ಸುಪ್ರೀಂ, ಬೀದಿ ನಾಯಿಗಳ ಸಂಪೂರ್ಣ ಸಮಸ್ಯೆಗೆ ಸ್ಥಳೀಯ ಅಧಿಕಾರಿಗಳ 'ನಿಷ್ಕ್ರಿಯತೆ'ಯೇ ಕಾರಣ ಎಂದು ಆಗಸ್ಟ್ 14 ರಂದು ಹೇಳಿತ್ತು.
ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್, ಸಂದೀಪ್ ಮೆಹ್ತಾ ಮತ್ತು ಎನ್ ವಿ ಅಂಜಾರಿಯಾ ಅವರಿದ್ದ ಪೀಠವು ಈ ಪ್ರಕರಣದ ಆದೇಶವನ್ನು ಕಾಯ್ದಿರಿಸಿತ್ತು.
ರಾಷ್ಟ್ರ ರಾಜಧಾನಿಯಲ್ಲಿ ಬೀದಿ ನಾಯಿ ಕಡಿತವು ವಿಶೇಷವಾಗಿ ಮಕ್ಕಳಲ್ಲಿ ರೇಬೀಸ್‌ಗೆ ಕಾರಣವಾದ ಬಗ್ಗೆ ಜುಲೈ 28 ರಂದು ಪ್ರಾರಂಭಿಸಲಾದ ಸ್ವಯಂಪ್ರೇರಿತ ಪ್ರಕರಣದ ವಿಚಾರಣೆಯ ಸಂದರ್ಭದಲ್ಲಿ ಆಗಸ್ಟ್ 11 ರಂದು ಸುಪ್ರೀಂ ಕೋರ್ಟ್ ಹಲವಾರು ನಿರ್ದೇಶನಗಳನ್ನು ನೀಡಿತು.
Advertisement