
ಮೀರತ್: ಇತ್ತೀಚಿನ ದಿನಗಳಲ್ಲಿ ಟೋಲ್ ಬೂತ್ ಸಂಘರ್ಷ ಹೆಚ್ಚು ವರದಿಯಾಗುತ್ತಿದ್ದು, ಉತ್ತರ ಪ್ರದೇಶದಲ್ಲಿ ಟೋಲ್ ಹಣದ ವಿಚಾರವಾಗಿ ಕಾರು ಚಾಲಕನೋರ್ವ ಸಿಬ್ಬಂದಿ ಮೇಲೆ ಕಾರು ಹತ್ತಿಸಲು ಯತ್ನಿಸಿರುವ ಘಟನೆ ವ್ಯಾಪಕ ವೈರಲ್ ಆಗುತ್ತಿದೆ.
ಉತ್ತರ ಪ್ರದೇಶದ ಮೀರತ್ ಜಿಲ್ಲೆಯ ಸಿವಾಯ ಟೋಲ್ ಪ್ಲಾಜಾದಲ್ಲಿ ಈ ಘಟನೆ ವರದಿಯಾಗಿದ್ದು, ಕಾರು ಚಾಲಕನೊಬ್ಬ ಟೋಲ್ ಶುಲ್ಕದ ಕುರಿತು ಸಿಬ್ಬಂದಿಗಳೊಂದಿಗೆ ಗಲಾಟೆ ತೆಗೆದಿದ್ದಾನೆ. ಈ ವೇಳೆ ಟೋಲ್ ಶುಲ್ಕ ನೀಡದ ಹೊರತು ತಾವು ಗೇಟ್ ತೆರೆಯುವುದಿಲ್ಲ ಎಂದಾಗ ನೋಡ ನೋಡುತ್ತಲೇ ಕಾರನ್ನು ಬಲವಂತವಾಗಿ ಚಲಾಯಿಸಿಕೊಂಡು ಹೋಗಿ ಟೋಲ್ ಗೇಟ್ ಧ್ವಂಸ ಮಾಡಿದ್ದಾನೆ.
ಇದೇ ಸಂದರ್ಭದಲ್ಲಿ ಅಲ್ಲಿಯೇ ಇದ್ದ ಇತರೆ ಸಿಬ್ಬಂದಿ ಆತನನ್ನು ತಡೆಯಲು ಯತ್ನಿಸಿದಾಗ ಅವರ ಮೇಲೂ ಕಾರು ಚಲಾಯಿಸಲು ಪ್ರಯತ್ನಿಸಿದ್ದಾನೆ. ಒಂದಲ್ಲ.. ಬರೊಬ್ಬರಿ ಎರಡು ಬಾರಿ ಸಿಬ್ಬಂದಿ ಮೇಲೆ ಕಾರು ಚಲಾಯಿಸಲು ಚಾಲಕ ಮುಂದಾಗಿದ್ದು, ಅದೃಷ್ಟವಶಾತ್ ಸಿಬ್ಬಂದಿ ಪಾರಾಗಿದ್ದಾರೆ. ಇವಿಷ್ಟೂ ವಿಡಿಯೋ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು ಕಾರು ಚಾಲಕನ ದೂರ್ತತನ ವ್ಯಾಪಕ ವೈರಲ್ ಆಗುತ್ತಿದೆ
ಪೊಲೀಸರಿಂದ ತನಿಖೆ
ಇನ್ನು ಘಟನೆಯ ನಂತರ, ಟೋಲ್ ಆಡಳಿತ ಮಂಡಳಿಯು ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿತು. ಪೊಲೀಸರು ಸ್ಥಳಕ್ಕೆ ತಲುಪಿ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲನೆ ಮಾಡಿ ಆರೋಪಿ ಚಾಲಕನನ್ನು ಗುರುತಿಸಲು ಪ್ರಾರಂಭಿಸಿದ್ದಾರೆ. ಆರೋಪಿಗಳ ವಿರುದ್ಧ ಗಂಭೀರ ವಿಭಾಗಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗುವುದು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಇನ್ನು ಇತ್ತೀಚೆಗಷ್ಟೇ ಇದೇ ಮೀರತ್ ನ ಭೂನಿ ಟೋಲ್ ಪ್ಲಾಜಾದಲ್ಲಿ ಟೋಲ್ ಶುಲ್ಕದ ಕುರಿತು ಗಲಾಟೆ ಮಾಡಿದ್ದ ಯೋಧ ಕಪಿಲ್ ಕವದ್ ನನ್ನು ಟೋಲ್ ಸಿಬ್ಬಂದಿ ಥಳಿಸಿದ ಕಾರಣ ಗ್ರಾಮಸ್ಥರು ಇಡೀ ಟೋಲ್ ಪ್ಲಾಜಾವನ್ನು ಧ್ವಂಸ ಮಾಡಿದ್ದ ಪ್ರಕರಣ ಹಸಿರಾಗಿರುವಂತೆಯೇ ಇದೇ ಮೀರತ್ ನಲ್ಲಿ ಮತ್ತೊಂದು ಟೋಲ್ ಗಲಾಟೆ ವರದಿಯಾಗಿದೆ.
Advertisement