
ನವದೆಹಲಿ: ದೆಹಲಿ ಹಾಗೂ ಎನ್ಸಿಆರ್ನಲ್ಲಿ ಬೀದಿ ನಾಯಿಗಳ ಕಾಟ ವಿಪರೀಚತ ವಾದ ಹಿನ್ನಲೆಯಲ್ಲಿ ಬೀದಿನಾಯಿಗಳ ತೆರವಿಗೆ ಆದೇಶ ನೀಡಿದ್ದ ಸುಪ್ರೀಂ ಕೋರ್ಟ್ ಕೊನೆಗೂ ತನ್ನ ಆದೇಶವನ್ನು ಸಡಿಲಿಸಿದ್ದು, ಸಂತಾನಹರಣ ಚಿಕಿತ್ಸೆ ಮಾಡಿಸಿ ಹೊರಗೆ ಬಿಡಬಹುದು ಎಂದು ಹೇಳಿದೆ.
ದೆಹಲಿ-ಎನ್‌ಸಿಆರ್‌ನ ಸುತ್ತಮುತ್ತಲಿನಲ್ಲಿ ಬೀದಿ ನಾಯಿಗಳನ್ನು ಹಿಡಿದು ಆಶ್ರಯ ತಾಣಗಳಿಗೆ ಸ್ಥಳಾಂತರಿಸುವಂತೆ ಅಧಿಕಾರಿಗಳಿಗೆ ಸುಪ್ರೀಂ ಕೋರ್ಟ್ ಕೆಲ ದಿನಗಳ ಹಿಂದೆ ನಿರ್ದೇಶಿಸಿತ್ತು.
ಈ ನಿರ್ದೇಶನದ ವಿರುದ್ಧ ಶ್ವಾನ ಪ್ರಿಯರು ಮತ್ತು ಪ್ರಾಣಿ ಸಂಘಟನೆಗಳು ಸಲ್ಲಿಸಿದ್ದ ಮರು ಪರಿಶೀಲನಾ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಶುಕ್ರವಾರ ಬೀದಿ ನಾಯಿಗಳಿಗೆ ಲಸಿಕೆ, ಸಂತಾನ ಹರಣ ಚಿಕಿತ್ಸೆ ಮಾಡಿಸಿ ಬಳಿಕ ಹೊರಗೆ ಬಿಡಬಹುದು ಸುಪ್ರೀಂಕೋರ್ಟ್ ನಿರ್ದೇಶನ ನೀಡಿದೆ.
ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್, ಸಂದೀಪ್ ಮೆಹ್ತಾ ಮತ್ತು ಎನ್.ವಿ. ಅಂಜಾರಿಯಾ ಅವರನ್ನೊಳಗೊಂಡ ಮೂವರು ನ್ಯಾಯಾಧೀಶರ ಪೀಠವು, ನ್ಯಾಯಾಲಯದ ಹಿಂದಿನ ಆದೇಶವನ್ನು ಪರಿಶೀಲಿಸಿ, ಈ ವಿಷಯದ ವ್ಯಾಪ್ತಿಯನ್ನು ವಿಸ್ತರಿಸಿತು ಮತ್ತು ಹೈಕೋರ್ಟ್‌ಗಳ ಮುಂದೆ ಬಾಕಿ ಇರುವ ಎಲ್ಲಾ ರೀತಿಯ ವಿಷಯಗಳನ್ನು ಅಂತಿಮ ರಾಷ್ಟ್ರೀಯ ನೀತಿಗಾಗಿ ಉನ್ನತ ನ್ಯಾಯಾಲಯಕ್ಕೆ ವರ್ಗಾಯಿಸಲು ಆದೇಶಿಸಿತು.
"ಪುರಸಭೆ ಅಧಿಕಾರಿಗಳು ಪ್ಯಾರಾ 12, 12.1 ಮತ್ತು 12.2 ಅನ್ನು ಪಾಲಿಸಬೇಕು, ಬೀದಿ ನಾಯಿಗಳನ್ನು ಬಿಡುವುದನ್ನು ನಿಷೇಧಿಸುವುದನ್ನು ತಡೆಹಿಡಿಯಲಾಗುತ್ತದೆ. ಅವುಗಳಿಗೆ ಜಂತುಹುಳು ನಿವಾರಕ, ಸಂತಾನ ಹರಣ ಲಸಿಕೆ ಇತ್ಯಾದಿಗಳನ್ನು ನೀಡಲಾಗುತ್ತದೆ. ಬಳಿಕ ಮತ್ತದೇ ಅದೇ ಪ್ರದೇಶಕ್ಕೆ ಹಿಂತಿರುಗಿಸಲಾಗುತ್ತದೆ. ಆಕ್ರಮಣಕಾರಿ ನಡವಳಿಕೆ ಅಥವಾ ರೇಬೀಸ್ ಇರುವ ನಾಯಿಗಳಿಗೆ ಲಸಿಕೆ ನೀಡಲಾಗುತ್ತದೆ. ಅಂತಹ ರೋಗ ಪೀಡಿತ ನಾಯಿಗಳನ್ನು ಬೀದಿಗಳಲ್ಲಿ ಬಿಡದೇ ಆಶ್ರಯ ತಾಣಗಳಿಗೆ ರವಾನಿಸಬೇಕು ಎಂದು ನ್ಯಾಯಮೂರ್ತಿ ನಾಥ್ ಹೇಳಿದರು.
ಆಹಾರ ನೀಡಿಕೆ ನಿಷೇಧ
ಇದೇ ವೇಳೆ ಬೀದಿ ನಾಯಿಗಳಿಗೆ ಸಾರ್ವಜನಿಕವಾಗಿ ಆಹಾರ ನೀಡುವುದನ್ನು ಯಾವುದೇ ಪರಿಸ್ಥಿತಿಯಲ್ಲಿ ಅನುಮತಿಸಲಾಗುವುದಿಲ್ಲ ಎಂದೂ ನ್ಯಾಯಾಲಯ ಹೇಳಿದ್ದು, ಪುರಸಭೆಯ ವಾರ್ಡ್‌ಗಳಲ್ಲಿ ಮೀಸಲಾದ ಆಹಾರ ಪ್ರದೇಶಗಳನ್ನು ರಚಿಸಲು ನಾಗರಿಕ ಸಂಸ್ಥೆಗಳಿಗೆ ಆದೇಶಿಸಿದೆ. ಆದೇಶವನ್ನು ಉಲ್ಲಂಘಿಸುವವರು ಕಾನೂನು ಕ್ರಮವನ್ನು ಎದುರಿಸಬೇಕಾಗುತ್ತದೆ ಎಂದು ಅದು ಎಚ್ಚರಿಸಿದೆ.
"ಇದೇ ರೀತಿಯ ಎಲ್ಲಾ ವಿಷಯಗಳನ್ನು ಅಂತಿಮ ರಾಷ್ಟ್ರೀಯ ನೀತಿಗಾಗಿ ಈ ನ್ಯಾಯಾಲಯಕ್ಕೆ ವರ್ಗಾಯಿಸಲಾಗುತ್ತದೆ. ಕೊನೆಯ ವಿಚಾರಣೆಯ ನಂತರ, ನಾವು ಕೆಲವು ಮಾರ್ಪಾಡುಗಳನ್ನು ಸೂಚಿಸಿದ್ದೇವೆ, ದೊಡ್ಡ ಸಮಸ್ಯೆಯ ವಿಚಾರಣೆಯಲ್ಲಿ ಭಾಗಿಯಾಗಲು ಬಯಸುವ ನಾಯಿ ಪ್ರಿಯರು ಅಥವಾ ಎನ್‌ಜಿಒಗಳು ರಿಜಿಸ್ಟ್ರಾರ್‌ಗೆ 25,000ರಿಂದ 2 ಲಕ್ಷ ರೂ. ಪಾವತಿಸಬೇಕು ಎಂದೂ ನ್ಯಾಯಮೂರ್ತಿ ನಾಥ್ ಹೇಳಿದರು ಹೇಳಿದರು.
ಸುಪ್ರೀಂ ಕೋರ್ಟ್ ನಿರ್ದೇಶನವೇನಾಗಿತ್ತು?
ನ್ಯಾ.ಜೆಬಿ ಪಾರ್ದಿವಾಲಾ ಮತ್ತು ಆರ್ ಮಹಾದೇವನ್ ಅವರನ್ನೊಳಗೊಂಡ ಪೀಠವು, ಆ.11ರಂದು ದೆಹಲಿ-ಎನ್‌ಸಿಆರ್ ಸುತ್ತಮುತ್ತಲಿನ ಬೀದಿ ನಾಯಿಗಳನ್ನು ಹಿಡಿದು ಅವುಗಳನ್ನು ಆಶ್ರಯ ತಾಣಗಳಿಗೆ ಸ್ಥಳಾಂತರಿಸುವಂತೆ ಅಧಿಕಾರಿಗಳಿಗೆ ನಿರ್ದೇಶಿಸಿತ್ತು. ಈ ನಿರ್ದೇಶನಗಳಿಗೆ ತಡೆ ನೀಡಬೇಕೆಂದು ಕೋರಿ ಸಲ್ಲಿಸಲಾದ ಮಧ್ಯಂತರ ಅರ್ಜಿಯ ಆದೇಶವನ್ನು ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್, ಸಂದೀಪ್ ಮೆಹ್ತಾ ಮತ್ತು ಎನ್‌ವಿ ಅಂಜಾರಿಯಾ ಅವರಿದ್ದ ಪೀಠವು ಕಾಯ್ದಿರಿಸಿತ್ತು.
ಬೀದಿ ನಾಯಿಗಳ ಸಂಪೂರ್ಣ ಸಮಸ್ಯೆಗೆ ಸ್ಥಳೀಯ ಅಧಿಕಾರಿಗಳ ನಿಷ್ಕ್ರಿಯತೆಯೇ ಕಾರಣ ಎಂದು ಹೇಳಿತ್ತು. ರಾಷ್ಟ್ರ ರಾಜಧಾನಿಯಲ್ಲಿ ಬೀದಿ ನಾಯಿ ಕಡಿತವು ವಿಶೇಷವಾಗಿ ಮಕ್ಕಳಲ್ಲಿ ರೇಬೀಸ್‌ಗೆ ಕಾರಣವಾದ ಬಗ್ಗೆ ದಾಖಲಾದ ಸ್ವಯಂಪ್ರೇರಿತ ಪ್ರಕರಣದ ವಿಚಾರಣೆ ಜು.28 ರಂದು ಪ್ರಾರಂಭವಾಗಿತ್ತು. ಈ ವೇಳೆ ಸುಪ್ರೀಂ ಕೋರ್ಟ್ ಹಲವಾರು ನಿರ್ದೇಶನಗಳನ್ನು ನೀಡಿತ್ತು.
ಪ್ರಾಣಿಪ್ರಿಯರ ಆಕ್ರೋಶಕ್ಕೆ ಕಾರಣವಾಗಿದ್ದ ಆದೇಶ
ನಾಯಿಗಳನ್ನು ಆಶ್ರಯ ತಾಣಗಳಿಗೆ ರವಾನೆ ಮಾಡಬೇಕು ಎನ್ನುವ ಸುಪ್ರೀಂ ಕೋರ್ಟ್ ನಿರ್ದೇಶನ ಪ್ರಾಣಿಪ್ರಿಯರ ಆಕ್ರೋಶಕ್ಕೆ ಕಾರಣವಾಗಿತ್ತು. ಕೋರ್ಟ್ ಆದೇಶವನ್ನು ವಿರೋಧಿಸಿ ದೆಹಲಿ ನಗರದಲ್ಲಿ ಪ್ರಾಣಿ ಹಕ್ಕುಗಳ ಕಾರ್ಯಕರ್ತರು ಹಾಗೂ ಶ್ವಾನ ಪ್ರಿಯರು ಶಾಂತಿಯುತ ಪ್ರತಿಭಟನೆ ನಡೆಸಿದ್ದರು.
ಬೀದಿ ನಾಯಿಗಳು ನೆರೆಹೊರೆಯ ಭಾಗವಾಗಿದೆ. ಅವುಗಳನ್ನು ಆಶ್ರಯ ತಾಣಗಳಿಗೆ ಸ್ಥಳಾಂತರಿಸುವ ಬದಲು, ನಾಯಿಗಳಿಗೆ ಸಂತಾನಹರಣ ಶಸ್ತ್ರ ಚಿಕಿತ್ಸೆ ಹಾಗೂ ಲಸಿಕೆ ನೀಡಿ. ಬೀದಿ ನಾಯಿಗಳನ್ನು ಬೀದಿಗಳಲ್ಲಿಯೇ ಬದುಕಲು ಬಿಡಿ ಎಂದು ಒತ್ತಾಯಿಸಿದ್ದರು.
ಇದೀಗ ಇಂದು ಸುಪ್ರೀಂಕೋರ್ಟ್ ನೀಡಿರುವ ನಿರ್ದೇಶನದಲ್ಲಿ ನಾಯಿಗಳನ್ನು ಆಶ್ರಯ ತಾಣಗಳಿಗೆ ಬಿಡದೆ, ಅವುಗಳಿಗೆ ಕೇವಲ ಲಸಿಕೆ ಹಾಗೂ ಸಂತಾನ ಹರಣ ಚಿಕಿತ್ಸೆ ಮಾಡಿಸಿ ಮತ್ತೆ ಅಲ್ಲಿಯೇ ತಂದು ಬಿಡಿ ಎಂದು ಹೇಳಿದೆ.
Advertisement