
ಗೋಪಾಲೇಶ್ವರ: ಉತ್ತರಾಖಂಡದಲ್ಲಿ ಕಳೆದ ಕೆಲ ದಿನಗಳಿಂದ ಭಾರೀ ಮಳೆಯಾಗುತ್ತಿದ್ದು, ಪರಿಣಾಮ ಚಮೋಲಿ ಜಿಲ್ಲೆಯ ಥರಾಲಿಯಲ್ಲಿ ಪ್ರವಾಹ ಉಂಟಾಗಿದ್ದು, ಇಬ್ಬರು ನಾಪತ್ತೆಯಾಗಿದ್ದಾರೆಂದು ತಿಳಿದುಬಂದಿದೆ.
ಚೆಪ್ಡಾನ್ ಮಾರುಕಟ್ಟೆ ಪ್ರದೇಶದ ಕೆಲವು ಅಂಗಡಿಗಳು ಹಾನಿಗೊಳಗಾಗಿದ್ದು, ಡೆಹ್ರಾಡೂನ್, ತೆಹ್ರಿ, ಪೌರಿ, ಚಮೋಲಿ, ರುದ್ರಪ್ರಯಾಗ, ನೈನಿತಾಲ್ ಮತ್ತು ಅಲ್ಮೋರಾ ಸೇರಿದಂತೆ ರಾಜ್ಯದಲ್ಲಿ ಗುಡುಗು, ಮಿಂಚು ಸಹಿತ ಭಾರೀ ಮಳೆಯಾಗುವ ಸಾಧ್ಯತೆಯಿದೆ. ಈ ಹಿನ್ನೆಲೆಯಲ್ಲಿ ಆರೆಂಜ್ ಅಲರ್ಟ್ ಘೋಷಿಸಲಾಗಿದೆ.ರಕ್ಷಣಾ ತಂಡಗಳೊಂದಿಗೆ ಜಿಲ್ಲಾಧಿಕಾರಿ ಘಟನಾ ಸ್ಥಳಕ್ಕೆ ಧಾವಿಸಿದ್ದಾರೆ.
ಥರಾಲಿ ಬಜಾರ್, ರಾಡಿಬಾಗ್ ಮತ್ತು ಚೆಪ್ಡೊ ಗ್ರಾಮಗಳು ಹೆಚ್ಚು ಹಾನಿಗೊಳಗಾಗಿವೆ ಎಂದು ವರದಿಗಳು ತಿಳಿಸಿವೆ. ಪ್ರವಾಹ ಪರಿಣಾಮ ಅವಶೇಷಗಳು ರಸ್ತೆಯಲ್ಲಿ ಬಿದ್ದಿದ್ದು, ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ.
ಭಾರೀ ಮಳೆಯಿಂದಾಗಿ ಥರಾಲಿ-ಗ್ವಾಲ್ಡಮ್ ರಸ್ತೆ ಮತ್ತು ಥರಾಲಿ-ಸಾಗ್ವಾರಾ ರಸ್ತೆಗಳು ಮುಚ್ಚಲ್ಪಟ್ಟಿದ್ದು, ಸಂಚಾರಕ್ಕೆ ಅಡ್ಡಿಯಾಗಿದೆ. ನಿನ್ನೆ ರಾತ್ರಿ NDRF ಮತ್ತು SDRF ತಂಡಗಳು ಸ್ಥಳಕ್ಕೆ ತೆರಳಿದ್ದು, ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದ್ದಾರೆ.
ಪ್ರವಾಹದಿಂದಾಗಿ ರಸ್ತೆ ಸಂಪರ್ಕ ಕಡಿತಗೊಂಡಿದ್ದು, ಜನರು ಬಹಳಷ್ಟು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಆಡಳಿತವು ಪರಿಹಾರ ಕಾರ್ಯದಲ್ಲಿ ತೊಡಗಿಸಿಕೊಂಡಿದೆ.
ಭಾರೀ ಮಳೆ ಬಳಿಕ ಸಗ್ವಾರಾ ಗ್ರಾಮದಲ್ಲಿ 20 ವರ್ಷದ ಯುವತಿ ಅವಶೇಷಗಳ ಅಡಿಯಲ್ಲು ಹೂತು ಹೋಗಿದ್ದು, ಚೆಪ್ಡಾನ್ ಮಾರುಕಟ್ಟೆ ಪ್ರದೇಶದಿಂದ ಮತ್ತೊಬ್ಬ ವ್ಯಕ್ತಿ ಕಣ್ಮರೆಯಾಗಿದ್ದಾನೆಂದು ಚಮೋಲಿ ಜಿಲ್ಲಾಡಳಿತ ಮಂಡಳಿ ತಿಳಿಸಿದೆ.
ತುನ್ರಿ ಗಧೇರಾದಲ್ಲಿ ಪ್ರವಾಹದಂತಹ ಪರಿಸ್ಥಿತಿ ಎದುರಾಗಿದ್ದು, ಪಿಂಡಾರ್ ನದಿಯ ಬಳಿಯ ಕಟ್ಟಡಗಳು ಹಾನಿಗೊಳಗಾಗಿವೆ.
ಮಿಂಗ್ ಗಧೇರಾ ಬಳಿ ಅವಶೇಷಗಳು ಬಿದ್ದಿರುವುದರಿಂದ ಥರಾಲಿಯನ್ನು ಸಂಪರ್ಕಿಸುವ ಕರ್ಣಪ್ರಯಾಗ್-ಗ್ವಾಲ್ಡಮ್ ರಾಷ್ಟ್ರೀಯ ಹೆದ್ದಾರಿಯನ್ನು ಬಂದ್ ಮಾಡಲಾಗಿದೆ. ಇದಲ್ಲದೆ, ಥರಾಲಿ-ಸಗ್ವಾರಾ ರಸ್ತೆ ಮತ್ತು ಡುಂಗ್ರಿ ರಸ್ತೆಯನ್ನೂ ಕೂಡ ಬಂದ್ ಮಾಡಲಾಗಿದೆ ಎಂದು ತಿಳಿದುಬಂದಿದೆ. ಈ ನಡುವೆ ಸರ್ಕಾರದ ಆದೇಶದ ಮೇರೆಗೆ ಕೆಲವು ಕ್ಷೇತ್ರಗಳಲ್ಲಿ ಶಾಲೆಗಳನ್ನು ಬಂದ್ ಮಾಡಲಾಗಿದೆ ಎಂದು ವರದಿಗಳು ತಿಳಿಸಿವೆ
Advertisement