
ಭುವನೇಶ್ವರ: ರೀಲ್ಸ್ ಹುಚ್ಚಾಟಕ್ಕೆ ಮತ್ತೊಂದು ಬಲಿಯಾಗಿದ್ದು, ಉಕ್ಕಿ ಹರಿಯುತ್ತಿದ್ದ ಜಲಪಾತದಲ್ಲಿ ವಿಡಿಯೋ ಚಿತ್ರೀಕರಿಸುತ್ತಿದ್ದಾಗ ಯೂಟ್ಯೂಬರ್ ಕೊಚ್ಚಿ ಹೋದ ಘಟನೆ ವರದಿಯಾಗಿದೆ.
ಒಡಿಶಾದ ಕೊರಾಪುಟ್ ಜಿಲ್ಲೆಯ ದುಡುಮಾ ಜಲಪಾತದಲ್ಲಿ ರೀಲ್ಸ್ ಚಿತ್ರೀಕರಿಸುವಾಗ ಯೂಟ್ಯೂಬರ್ ಒಬ್ಬರು ನೀರಿನಲ್ಲಿ ಕೊಚ್ಚಿ ಹೋಗಿ ನಾಪತ್ತೆಯಾಗಿದ್ದಾರೆ ಎಂದು ವರದಿಯಾಗಿದೆ. ಕೊಚ್ಚಿ ಹೋದ ಯೂಟ್ಯೂಬರ್ ನನ್ನು ಗಂಜಾಂ ಜಿಲ್ಲೆಯ ಬೆರ್ಹಾಂಪುರ್‌ನ 22 ವರ್ಷದ ಸಾಗರ್ ತುಡು ಎಂದು ಗುರುತಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪೊಲೀಸ್ ಮೂಲಗಳ ಪ್ರಕಾರ ಸಾಗರ್ ಮಧ್ಯಾಹ್ನ ಡ್ರೋನ್ ಕ್ಯಾಮೆರಾ ಬಳಸಿ ಜಲಪಾತದಲ್ಲಿ ರೀಲ್‌ಗಳನ್ನು ರೆಕಾರ್ಡ್ ಮಾಡುತ್ತಿದ್ದಾಗ ಈ ದುರ್ಘಟನೆ ನಡೆದಿದೆ. ಸಾಗರ್ ತಮ್ಮ ಯೂಟ್ಯೂಬ್ ಚಾನೆಲ್‌ಗಾಗಿ ವಿವಿಧ ಪ್ರವಾಸಿ ಸ್ಥಳಗಳ ವೀಡಿಯೊಗಳನ್ನು ರೆಕಾರ್ಡ್ ಮಾಡಲು ತಮ್ಮ ಸ್ನೇಹಿತ ಅಭಿಜಿತ್ ಬೆಹೆರಾ ಜೊತೆಗೆ ಕೊರಾಪುಟ್‌ಗೆ ಭೇಟಿ ನೀಡಿದ್ದರು.
ಈ ವೇಳೆ ಸಾಗರ್ ಬಂಡೆಯ ಮೇಲೆ ನಿಂತಿದ್ದರು. ಇದೇ ವೇಳೆ ಮಚಕುಂಡಾ ಅಣೆಕಟ್ಟಿನಿಂದ ನೀರು ಹೊರಕ್ಕೆ ಬಿಡಲಾಗಿದ್ದು, ಏಕಾಏಕಿ ನೀರಿನ ರಭಸ ಏರಿದ್ದರಿಂದ ಯೂಟ್ಯೂಬರ್ ಸಾಗರ್ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದಾರೆ.
ಈ ಕುರಿತು ಮಾತನಾಡಿರುವ ಸ್ಥಳೀಯ ಅಧಿಕಾರಿಗಳು ಕೊರಾಪುಟ್‌ನ ಲ್ಯಾಮ್ಟಾಪುಟ್ ಪ್ರದೇಶದಲ್ಲಿ ಭಾರೀ ಮಳೆಯಾದ ನಂತರ ಮಚಕುಂಡಾ ಅಣೆಕಟ್ಟಿನ ಅಧಿಕಾರಿಗಳು ಅಣೆಕಟ್ಟಿನ ಕೆಳಭಾಗದಲ್ಲಿ ವಾಸಿಸುವ ಜನರನ್ನು ನೀರು ಬಿಡುವ ಕುರಿತು ಎಚ್ಚರಿಸಿದ್ದರು. ಆ ಬಳಿಕವಷ್ಟೇ ಅಣೆಕಟ್ಟಿನಿಂದ ನೀರು ಬಿಡಲಾಗಿದೆ. ಇದರ ಅರಿವಿಲ್ಲದೇ ಸಾಗರ್ ಜಲಪಾತದ ಮಧ್ಯಕ್ಕೆ ಹೋಗಿದ್ದಾರೆ ಎಂದು ಹೇಳಿದ್ದಾರೆ.
ನೀರು ಬಿಡುಗಡೆಯಾದಾಗ ಬಂಡೆಯ ಮೇಲೆ ನಿಂತಿದ್ದ ಸಾಗರ್, ಜಲಪಾತದಲ್ಲಿ ಹರಿವಿನ ಹಠಾತ್ ಏರಿಕೆಯಿಂದಾಗಿ ಸಿಲುಕಿಕೊಂಡರು. ಯೂಟ್ಯೂಬರ್ ಹೆಚ್ಚು ಹೊತ್ತು ಬಂಡೆಯ ಮೇಲೆ ಸಮತೋಲನ ಕಾಯ್ದುಕೊಳ್ಳಲು ಸಾಧ್ಯವಾಗಲಿಲ್ಲ. ಹೀಗಾಗಿ ನೋಡ ನೋಡುತ್ತಲೇ ಭಾರೀ ನೀರಿನ ಹರಿವಿನಿಂದಾಗಿ ಕೊಚ್ಚಿ ಹೋದರು. ಕೆಲವು ಪ್ರವಾಸಿಗರು ಮತ್ತು ಸ್ಥಳೀಯರು ಅವರನ್ನು ರಕ್ಷಿಸಲು ಪ್ರಯತ್ನಿಸಿದರು. ಆದರೆ ವಿಫಲರಾದರು ಎಂದು ವರದಿಗಳು ತಿಳಿಸಿವೆ.
ಮಾಹಿತಿ ತಿಳಿಯುತ್ತಿದ್ದಂತೆ ಮಚ್ಕುಂಡ ಪೊಲೀಸ್ ಅಧಿಕಾರಿಗಳು ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಯೂಟ್ಯೂಬರ್ ಅನ್ನು ರಕ್ಷಿಸಲು ಕಾರ್ಯಾಚರಣೆ ನಡೆಸಿದರು. ಆದರೆ, ಅವರನ್ನು ಪತ್ತೆಹಚ್ಚಲು ಸಾಧ್ಯವಾಗಲಿಲ್ಲ.
Advertisement