

ನವದೆಹಲಿ: ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುನ್ ಅವರು ಭಾರತಕ್ಕೆ ಭೇಟಿ ನೀಡುತ್ತಿದ್ದು, ಅವರ ಜೊತೆಗೆ ಸಭೆ ನಡೆಸಲು ಅವಕಾಶ ನೀಡದ್ದಕ್ಕೆ ಕೇಂದ್ರ ಸರ್ಕಾರದ ವಿರುದ್ಧ ಲೋಕಸಭೆಯ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಅವರು ಗುರುವಾರ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸಂಸತ್ ಭವನದ ಹೊರಗಡೆ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಸಾಮಾನ್ಯವಾಗಿ, ಭಾರತಕ್ಕೆ ಯಾರೇ ಭೇಟಿ ನೀಡಿದರೂ ಅವರ ಜೊತೆ ಪ್ರತಿಪಕ್ಷದ ನಾಯಕರು ಸಭೆ ನಡೆಸುವುದು ಶಿಷ್ಟಾಚಾರ. ಇದು ವಾಜಪೇಯಿ, ಮನಮೋಹನ್ ಸಿಂಗ್ ಸರ್ಕಾರದಲ್ಲಿ ನಡೆಯುತ್ತಿತ್ತು. ಆದರೆ, ಈಗ ಈ ಶಿಷ್ಟಾಚಾರ ಪಾಲನೆಯಾಗುತ್ತಿಲ್ಲ ಎಂದು ದೂರಿದರು.
ನಾನು ವಿದೇಶಕ್ಕೆ ಹೋದಾಗ ವಿಪಕ್ಷ ನಾಯಕನನ್ನು ಭೇಟಿ ಮಾಡಬಾರದು ಎಂದು ಅವರು ಸೂಚಿಸುತ್ತಾರೆ. ನಾವು ಭಾರತವನ್ನು ಪ್ರತಿನಿಧಿಸುತ್ತೇವೆ. ಆದರೆ, ಈ ಸರ್ಕಾರ ನಾವು ವಿದೇಶಿ ಗಣ್ಯರನ್ನು ಭೇಟಿ ಮಾಡಲು ಅವಕಾಶ ನೀಡುತ್ತಿಲ್ಲ. ಅಭದ್ರತೆಯ ಕಾರಣದಿಂದಾಗಿ ಪ್ರಧಾನಿ ಮೋದಿ ಮತ್ತು ವಿದೇಶಾಂಗ ಸಚಿವಾಲಯ ಈ ಶಿಷ್ಟಾಚಾರವನ್ನು ಅನುಸರಿಸುತ್ತಿಲ್ಲ ಎಂದು ಕಿಡಿಕಾರಿದ್ದಾರೆ.
ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಪುಟಿನ್ ಅವರು ಇಂದು ಸಂಜೆ ಭಾರತಕ್ಕೆ ಆಗಮಿಸುತ್ತಿದ್ದಾರೆ. ಉಭಯ ರಾಷ್ಟ್ರಗಳ ರಕ್ಷಣಾ ಸಂಬಂಧಗಳನ್ನು ಹೆಚ್ಚಿಸುವುದು, ಭಾರತ-ರಷ್ಯಾ ವ್ಯಾಪಾರವನ್ನು ಬಾಹ್ಯ ಒತ್ತಡದಿಂದ ಪ್ರತ್ಯೇಕಿಸುವುದು ಮತ್ತು ಸಹಕಾರವನ್ನು ಅನ್ವೇಷಿಸುವುದರ ಕುರಿತು ಮೋದಿ ಮತ್ತು ಪುಟಿನ್ ಮಾತುಕತೆ ನಡೆಸಲಿದ್ದಾರೆ.
Advertisement