

ನವದೆಹಲಿ: ರಷ್ಯಾ-ಉಕ್ರೇನ್ ಯುದ್ಧ ವಿಚಾರದಲ್ಲಿ ಭಾರತ ತಟಸ್ಥವಾಗಿಲ್ಲ. ಶಾಂತಿಯ ಪರವಾಗಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಶುಕ್ರವಾರ ಹೇಳಿದ್ದಾರೆ.
ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಎರಡು ದಿನಗಳ ಭೇಟಿಗೆಂದು ಭಾರತಕ್ಕೆ ಆಗಮಿಸಿದ್ದು, ಇಂದು ಹೈದರಾಬಾದ್ ಹೌಸ್ನಲ್ಲಿ ಪ್ರಧಾನಿ ಮೋದಿಯವರ ಜತೆ ದ್ವಿಪಕ್ಷೀಯ ಮಾತುಕತೆ ನಡೆಸಿದರು.
ಈ ಸಮಯದಲ್ಲಿ ಉಕ್ರೇನ್ ಸಂಘರ್ಷವನ್ನು ಉಲ್ಲೇಖಿಸಿ ಮಾತನಾಡಿರುವ ಮೋದಿಯವರು, ಭಾರತ ಯಾವಾಗಲೂ ಶಾಂತಿಯನ್ನು ಬೆಂಬಲಿಸುತ್ತದೆ ಮತ್ತು ಶಾಂತಿಯ ಪರವಾಗಿ ದೃಢವಾಗಿ ನಿಲ್ಲುತ್ತದೆ ಎಂದು ಹೇಳಿದ್ದಾರೆ.
ಉಕ್ರೇನ್ ಬಿಕ್ಕಟ್ಟು ಆರಂಭವಾದಾಗಿನಿಂದ ನಾವು ನಿರಂತರ ಚರ್ಚೆ ನಡೆಸಿದ್ದೇವೆ. ಕಾಲಕಾಲಕ್ಕೆ, ನೀವು ಕೂಡ, ನಿಜವಾದ ಸ್ನೇಹಿತರಾಗಿ, ಎಲ್ಲದರ ಬಗ್ಗೆ ನಮಗೆ ಮಾಹಿತಿ ನೀಡುತ್ತಿದ್ದೀರಿ. ನಂಬಿಕೆ ಒಂದು ದೊಡ್ಡ ಶಕ್ತಿ ಎಂದು ನಾನು ನಂಬುತ್ತೇನೆ, ನಾನು ಈ ವಿಷಯವನ್ನು ನಿಮ್ಮೊಂದಿಗೆ ಹಲವು ಬಾರಿ ಚರ್ಚಿಸಿದ್ದೇನೆ. ಅದನ್ನು ಪ್ರಪಂಚದ ಮುಂದೆ ಇರಿಸಿದ್ದೇನೆ.
ರಾಷ್ಟ್ರಗಳ ಕಲ್ಯಾಣವು ಶಾಂತಿಯ ಹಾದಿಯಲ್ಲಿದೆ. ಒಟ್ಟಾಗಿ, ನಾವು ಜಗತ್ತನ್ನು ಆ ಹಾದಿಯತ್ತ ಕೊಂಡೊಯ್ಯುತ್ತೇವೆ. ಇತ್ತೀಚಿನ ದಿನಗಳಲ್ಲಿ ನಡೆಯುತ್ತಿರುವ ಪ್ರಯತ್ನಗಳೊಂದಿಗೆ, ಜಗತ್ತು ಮತ್ತೊಮ್ಮೆ ಶಾಂತಿಯ ದಿಕ್ಕಿಗೆ ಮರಳುತ್ತದೆ ಎಂದು ನನಗೆ ಸಂಪೂರ್ಣ ವಿಶ್ವಾಸವಿದೆ ಎಂದು ತಿಳಿಸಿದರು.
ಪುಟಿನ್ ಅವರ ಈ ಭೇಟಿಯು ಐತಿಹಾಸಿಕವಾಗಿದೆ. ಉಕ್ರೇನ್ ಬಿಕ್ಕಟ್ಟಿನ ಬಗ್ಗೆ ನಾವು ನಿರಂತರವಾಗಿ ಚರ್ಚಿಸುತ್ತಿದ್ದೇವೆ. ರಷ್ಯಾ ಶಾಂತಿ ಮಾರ್ಗ ಕಂಡುಕೊಳ್ಳಬೇಕಿದೆ. ಎಕೆಂದರೆ ಶಾಂತಿಯ ಮಾರ್ಗದಲ್ಲಿ ಪ್ರಯಾಣಿಸಿದ್ರೆ ಮಾತ್ರ ವಿಶ್ವಕ್ಕೆ ಪ್ರಯೋಜನವಾಗುತ್ತದೆ. ಶಾಂತಿಗಾಗಿ ನಾವು ಎಲ್ಲಾ ಪ್ರಯತ್ನಗಳನ್ನ ಮಾಡುತ್ತೇವೆ. ಉಕ್ರೇನ್-ರಷ್ಯಾ ಸಂಘರ್ಷ ವಿಚಾರದಲ್ಲಿ ಭಾರತ ತಟಸ್ಥವಾಗಿಲ್ಲ, ಶಾಂತಿಯ ಪರವಾಗಿದ್ದೇವೆ ಎಂದರು.
ಈ ನಡುವೆ ಮಾತನಾಡಿದ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು, ಉಕ್ರೇನ್‌ನಲ್ಲಿ ಶಾಂತಿ ಸ್ಥಾಪಿಸಲು ಪ್ರಧಾನಿ ಮೋದಿ ಅವರ ಪ್ರಯತ್ನಗಳನ್ನು ಶ್ಲಾಘಿಸಿದರು.
ನನ್ನನ್ನು ಭಾರತಕ್ಕೆ ಆಹ್ವಾನಿಸಿದ್ದಕ್ಕೆ ತುಂಬಾ ಧನ್ಯವಾದಗಳು. ಉಕ್ರೇನ್‌ನಲ್ಲಿನ ಪರಿಸ್ಥಿತಿ ಕುರಿತು ಹೆಚ್ಚಿನ ವಿವರಗಳನ್ನು ಹಂಚಿಕೊಳ್ಳಲು ಸಿದ್ಧರಿದ್ದೇವೆ, ಶಾಂತಿ ಸ್ಥಾಪನೆಗಾಗಿ ಅಮೆರಿಕಾ ಸೇರಿದಂತೆ ಕೆಲವು ಪಾಲುದಾರರೊಂದಿಗೆ ಒಟ್ಟಾಗಿ ಮಾತನಾಡುತ್ತಿದ್ದೇವೆ. ಶಾಂತಿ ಸ್ಥಾಪಿಸಲು ಹರಿಹಾರ ಕಂಡುಕೊಳ್ಳಲು ಪ್ರಯತ್ನ ನಡೆಸುತ್ತಿರುವುದಕ್ಕಾಗಿ ಧನ್ಯವಾದಗಳು ಎಂದು ಹೇಳಿದರು.
ರಷ್ಯಾ ಮತ್ತು ಭಾರತದ ನಡುವಿನ ಸಂಬಂಧವು ನಂಬಿಕೆಯನ್ನ ಆಧರಿಸಿದೆ. ನಾವು ಶಾಂತಿಯ ಮಾರ್ಗದಲ್ಲಿ ಪ್ರಯಾಣಿಸಿದರೆ ಮಾತ್ರ ಅದು ವಿಶ್ವಕ್ಕೆ ಪ್ರಯೋಜನವಾಗುತ್ತದೆ, ನಿಮ್ಮ ಪ್ರಯತ್ನವನ್ನು ಪ್ರಶಂಸಿಸುತ್ತೇವೆಂದು ತಿಳಿಸಿದ್ದಾರೆ.
ಇದಕ್ಕೂ ಮುನ್ನ ಭಾರತ ಪ್ರವಾಸದಲ್ಲಿರುವ ಪುಟಿನ್ ಅವರು ರಾಷ್ಟ್ರಪತಿ ಭವನಕ್ಕೆ ಆಗಮಿಸುತ್ತಿದ್ದಂತೆ ರಾಷ್ಟ್ರಪತಿ ದ್ರೌಪದಿ ಮುರ್ಮು ಹಾಗೂ ಪ್ರಧಾನಿ ಮೋದಿ ಅವರನ್ನು ಸ್ವಾಗತಿಸಿದರು. ಅದ್ಧೂರಿ ಸಂಗೀತದ ಮೂಲಕ ರೆಡ್ ಕಾರ್ಪೆಟ್ ಹಾಸಿ ಪುಟಿನ್‌ಗೆ ಸ್ವಾಗತ ಕೋರಲಾಯಿತು. ಅಲ್ಲದೇ, ಸೇನಾಪಡೆ ಸಿಬ್ಬಂದಿ 21 ಗನ್ ಸೆಲ್ಯೂಟ್, ಮಿಲಿಟರಿ ಶಿಸ್ತು ಮತ್ತು ಸಕಲ ಗೌರವ ಸಲ್ಲಿಸಿದವು.
Advertisement