

ಮುಂಬೈ: 30 ಕೋಟಿ ರೂ. ವಂಚನೆ ಪ್ರಕರಣದಲ್ಲಿ ಬಾಲಿವುಡ್ ನ ಖ್ಯಾತ ನಿರ್ದೇಶಕ ವಿಕ್ರಮ್ ಭಟ್ ಅವರನ್ನು ರಾಜಸ್ಥಾನ ಪೊಲೀಸರು ಭಾನುವಾರ ಮುಂಬೈನಲ್ಲಿ ಬಂಧಿಸಿದ್ದಾರೆ.
ಉದಯಪುರ ಮೂಲದ ವೈದ್ಯರು ದಾಖಲಿಸಿರುವ ಪ್ರಕರಣದ ಸಂಬಂಧ ನಿರ್ಮಾಪಕ ವಿಕ್ರಮ್ ಭಟ್ ಹಾಗೂ ಅವರ ಪತ್ನಿ ಶ್ವೇತಾಂಬರಿ ಭಟ್ ಮತ್ತಿತರ ಆರು ಮಂದಿಯನ್ನು ಬಂಧಿಸಲಾಗಿದೆ.
ರಾಜಸ್ಥಾನ ಪೊಲೀಸರು ಸೋಮವಾರ ಬಾಂದ್ರಾ ನ್ಯಾಯಾಲಯದಲ್ಲಿ ಟ್ರಾನ್ಸಿಟ್ ರಿಮಾಂಡ್ ಗೆ ಅರ್ಜಿ ಸಲ್ಲಿಸಲಿದ್ದಾರೆ ಎಂದು ಮುಂಬೈ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಇಂದಿರಾ ಗ್ರೂಪ್ ಆಫ್ ಕಂಪನಿಗಳ ಸಂಸ್ಥಾಪಕ ಉದಯಪುರ ಮೂಲದ ಡಾ. ಅಜಯ್ ಮುರ್ದಿಯಾ ಅವರಿಗೆ 30 ಕೋಟಿ ರೂ. ವಂಚನೆ ಮಾಡಿರುವ ಪ್ರಕರಣ ಇದಾಗಿದ್ದು, ಈಗಾಗಲೇ ಇಬ್ಬರನ್ನು ಬಂಧಿಸಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಇಂದಿರಾ ಐವಿಎಫ್ ಆಸ್ಪತ್ರೆ ಮಾಲೀಕರಾದ ಮುರ್ದಿಯಾ, ತಮ್ಮ ದಿವಂಗತ ಪತ್ನಿಯ ಜೀವನಾಧಾರಿತ ಸಿನಿಮಾ ಮಾಡಲು ಬಯಸಿದ್ದರು. ಈ ಚಿತ್ರದ ಮೂಲಕ 200 ಕೋಟಿ ಗಳಿಕೆಯ ಭರವಸೆಯನ್ನೂ ನಿರ್ಮಾಪಕರು ನೀಡಿದ್ದರು ಎನ್ನಲಾಗಿದೆ.
ಆದರೆ, ಚಿತ್ರ ಸೆಟ್ಟೇರಲೇ ಇಲ್ಲ. ನಂತರ ಮುರ್ದಿಯಾ ಉದಯಪುರದ ಭೋಪಾಲ್ ಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದರು ಎಂದು ಅಧಿಕಾರಿ ತಿಳಿಸಿದ್ದಾರೆ.
Advertisement