

ನವದೆಹಲಿ: ಭಾರತದಲ್ಲಿ ಇದೇ ಮೊದಲ ಬಾರಿಗೆ 11,718 ಕೋಟಿ ರೂ ವೆಚ್ಚದಲ್ಲಿ 2027ರಲ್ಲಿ ಡಿಜಿಟಲ್ ಜನಗಣತಿ ಕೈಗೊಳ್ಳುವ ಪ್ರಸ್ತಾವನೆಗೆ ಕೇಂದ್ರ ಸಚಿವ ಸಂಪುಟ ಸಭೆ ಶುಕ್ರವಾರ ಅನುಮೋದನೆ ನೀಡಿದೆ. ವಿಶ್ವದ ಅತಿದೊಡ್ಡ ಜನಗಣತಿ ಎಂದೇ ಹೇಳಲಾದ ಭಾರತದ ಜನಗಣತಿಯನ್ನು ಎರಡು ಹಂತಗಳಲ್ಲಿ ನಡೆಸಲಾಗುತ್ತದೆ.
ಕ್ಯಾಬಿನೆಟ್ ನಿರ್ಧಾರದ ವಿವರಗಳನ್ನು ಹಂಚಿಕೊಂಡ ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅಶ್ವಿನಿ ವೈಷ್ಣವ್, 2026ರ ಏಪ್ರಿಲ್ ಮತ್ತು ಸೆಪ್ಟೆಂಬರ್ ನಡುವೆ ಮೊದಲ ಹಂತದಲ್ಲಿ ಮನೆ ಪಟ್ಟಿ ಮತ್ತು ವಸತಿ ಗಣತಿಯನ್ನು ನಡೆಸಲಾಗುವುದು. ಫೆಬ್ರವರಿ 2027ರಲ್ಲಿ ನಡೆಯಲಿರುವ ಎರಡನೇ ಹಂತದಲ್ಲಿ ಜನಸಂಖ್ಯೆ ಗಣತಿ ಮಾಡಲಾಗುತ್ತಿದೆ ಎಂದು ತಿಳಿಸಿದರು.
ಕೇಂದ್ರಾಡಳಿತ ಪ್ರದೇಶವಾದ ಲಡಾಖ್ ಮತ್ತು ಜಮ್ಮು ಮತ್ತು ಕಾಶ್ಮೀರದ ಹಿಮದಿಂದ ಆವೃತವಾಗಿರುವ ಪ್ರದೇಶಗಳು, ಹಾಗೆಯೇ ಹಿಮಾಚಲ ಪ್ರದೇಶ ಮತ್ತು ಉತ್ತರಾಖಂಡ ರಾಜ್ಯಗಳಿಗೆ ಜನಗಣತಿಯನ್ನು ಸೆಪ್ಟೆಂಬರ್ 2026 ರಲ್ಲಿ ನಡೆಸಲಾಗುವುದು ಎಂದರು.
ಸುಮಾರು 30 ಲಕ್ಷ ಕ್ಷೇತ್ರ ಕಾರ್ಯಕರ್ತರು ಜನಗಣತಿಯಲ್ಲಿ ತೊಡಗಿದ್ದು, 1.5 ಕೋಟಿಗೂ ಹೆಚ್ಚು ಮಾನವ ದಿನದ ಉದ್ಯೋಗವನ್ನು ಸೃಷ್ಟಿಸಲಿದ್ದಾರೆ ಎಂದು ಸಚಿವರು ತಿಳಿಸಿದರು.
ಪೋರ್ಟಲ್ ಅಭಿವೃದ್ಧಿ: 2027 ರ ಜನಗಣತಿಯು ಭಾರತದ ಮೊಟ್ಟಮೊದಲ ಡಿಜಿಟಲ್ ಜನಗಣತಿಯಾಗಿದೆ. "ಡೇಟಾ ನೀಡುವುದು ಅತ್ಯುತ್ತಮವಾಗಿದ್ದು, ಬಳಕೆದಾರ ಸ್ನೇಹಿಯಾಗಿದೆ. ಅದರಿಂದ ನೀತಿ ನಿರೂಪಣೆಗೆ ಅಗತ್ಯವಿರುವ ಎಲ್ಲಾ ಪ್ರಶ್ನೆಗಳು ಬಟನ್ ಕ್ಲಿಕ್‌ನಲ್ಲಿ ಲಭ್ಯವಿರುತ್ತವೆ. ಸಂಪೂರ್ಣ ಜನಗಣತಿ ಪ್ರಕ್ರಿಯೆಯನ್ನು ಸೂಕ್ತ ಸಮಯದಲ್ಲಿ ನಿರ್ವಹಿಸಲು ಮತ್ತು ಮೇಲ್ವಿಚಾರಣೆ ಮಾಡಲು 'ಜನಗಣತಿ ನಿರ್ವಹಣೆ ಮತ್ತು ಮಾನಿಟರಿಂಗ್ ಸಿಸ್ಟಮ್ ಪೋರ್ಟಲ್ ಅನ್ನು ಅಭಿವೃದ್ಧಿಪಡಿಸಲಾಗಿದೆ. ಈ ದೊಡ್ಡ ಪ್ರಮಾಣದ ಡಿಜಿಟಲ್ ಕಾರ್ಯಾಚರಣೆಗೆ ಸೂಕ್ತ ಭದ್ರತಾ ವೈಶಿಷ್ಟ್ಯಗಳೊಂದಿಗೆ ಸಾರ್ವಜನಿಕರಿಗೆ ಸ್ವಯಂ-ಎಣಿಕೆಗೆ ಆಯ್ಕೆಯನ್ನು ಒದಗಿಸಲಾಗುವುದು ಎಂದು ಅವರು ಹೇಳಿದರು.
ಜನಗಣತಿ ವೇಳೆ ಜಾತಿ ಗಣತಿ: 2025 ರ ಏಪ್ರಿಲ್ 30 ರಂದು ನಡೆದ ರಾಜಕೀಯ ವ್ಯವಹಾರಗಳ ಕ್ಯಾಬಿನೆಟ್ ಸಮಿತಿಯು 2027 ರ ಜನಗಣತಿಯಲ್ಲಿ ಜಾತಿ ಗಣತಿ ಸೇರಿಸಲು ನಿರ್ಧರಿಸಿತ್ತು. "ನಮ್ಮ ದೇಶದಲ್ಲಿನ ವಿಶಾಲವಾದ ಸಾಮಾಜಿಕ ಮತ್ತು ಜನಸಂಖ್ಯಾ ವೈವಿಧ್ಯತೆ ಮತ್ತು ಸಂಬಂಧಿತ ಸವಾಲುಗಳನ್ನು ಗಮನಿಸಿದರೆ, ಎರಡನೇ ಹಂತದಲ್ಲಿನ ಜನಗಣತಿ ವೇಳೆ ಜಾತಿ ಡೇಟಾವನ್ನು ವಿದ್ಯುನ್ಮಾನವಾಗಿ ಸಂಗ್ರಹಿಸಲಾಗುವುದು ಎಂದು ಸಚಿವರು ತಿಳಿಸಿದರು.
Advertisement